ಕರ್ನಾಟಕ

ಮಂಡ್ಯ: ಆಭರಣ ಹರಾಜು ವಿರೋಧಿಸಿ ನಾಗರಿಕರಿಂದ ಬ್ಯಾಂಕ್‌ಗೆ ಮುತ್ತಿಗೆ

Pinterest LinkedIn Tumblr

33odaveಮಂಡ್ಯ, ಸೆ.11: ಅಡವಿಟ್ಟಿರುವ ಚಿನ್ನಾಭರಣ ಹರಾಜು ವಿರೋಧಿಸಿ ರೈತಸಂಘ ಹಾಗೂ ಇತರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ನಗರದ ಸೌತ್ ಇಂಡಿಯನ್ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಮಧ್ಯಾಹ್ನ ಬ್ಯಾಂಕ್‌ಗೆ ಆಗಮಿಸಿದ ಕಾರ್ಯಕರ್ತರು, ಬ್ಯಾಂಕ್‌ನ ಪ್ರವೇಶ ದ್ವಾರಕ್ಕೆ ಬೀಗ ಜಡಿದು ಅಧಿಕಾರಿ ಸಿಬ್ಬಂದಿಗೆ ದಿಗ್ಬಂಧನ ವಿಧಿಸಿದ್ದಲ್ಲದೆ, ಚಿನ್ನಾಭರಣ ಹರಾಜು ನಿಲ್ಲಿಸುವಂತೆ ಆಗ್ರಹಿಸಿದರು.

ಬರಗಾಲದಿಂದ ಬೆಳೆ ನಷ್ಟವಾಗಿದೆ. ಜಿಲ್ಲೆಯಲ್ಲಿ ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದೆ. ಆದರೂ, ರೈತರು ಬ್ಯಾಂಕ್‌ನಲ್ಲಿಟ್ಟಿರುವ ಆಭರಣಗಳನ್ನು ಹರಾಜು ಹಾಕಲು ಮುಂದಾಗಿದ್ದಾರೆ ಎಂದು ಖಂಡಿಸಿದರು.
ಕಳೆದ ಸಾಲಿನ ಕಬ್ಬಿನ ಬಾಕಿ ಪಾವತಿಯಾಗಿಲ್ಲ. ಪ್ರಸ್ತುತ ಕಬ್ಬು ಅರೆಯುವಿಕೆಯೂ ಆರಂಭವಾಗಿಲ್ಲ. ಜಲಾಶಯ ಭರ್ತಿ ಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರು ಆಭರಣಗಳನ್ನು ಬಿಡಿಸಿಕೊಳ್ಳಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಈಗಾಗಲೇ ಸರಕಾರ ಮತ್ತು ಜಿಲ್ಲಾಡಳಿತ ಆಭರಣ ಹರಾಜು ಮಾಡಬಾರದೆಂದು ಸೂಚಿಸಿದೆ. ಆದರೂ ಹರಾಜು ನೋಟಿಸ್ ಕಳುಹಿಸಿರುವುದೇಕೆ ಎಂದು ಅವರು ಬ್ಯಾಂಕ್‌ನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರೈತರ ಜೀವನಕ್ಕೆ ಆಧಾರವಾಗಿರುವ ಚಿನ್ನಾಭರಣಗಳನ್ನು ಹರಾಜು ಹಾಕದೆ ಮುಂದೂಡಬೇಕು. ಕಬ್ಬು ಬಾಕಿ ಪಾವತಿ, ಕಾರ್ಖಾನೆ ಆರಂಭದ ನಂತರ ಬಿಡಿಸಿಕೊಳ್ಳಲಾಗುವುದು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ರೈತರ ಪ್ರತಿಭಟನೆಗೆ ಮಣಿದ ಬ್ಯಾಂಕ್‌ನ ಅಧಿಕಾರಿಗಳು, ಬ್ಯಾಂಕಿನ ಮೇಲಧಿಕಾರಿಗಳನ್ನು ಸಂಪರ್ಕಿಸಿ ಆಭರಣಗಳ ಹರಾಜು ಪ್ರಕ್ರಿಯೆ ಕೈಬಿಟ್ಟಿದ್ದೇವೆ ಎಂದು ಭರವಸೆ ನೀಡಿದ ನಂತರ, ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

Write A Comment