ಕರ್ನಾಟಕ

ಮೈಸೂರಿಗೆ ಕೇಂದ್ರ ಬರ ಅಧ್ಯಯನ ತಂಡ; ಪರಿಶೀಲನೆ: ರೈತರ ಜಮೀನುಗಳಿಗೆ ಭೇಟಿ; ಜಿಲ್ಲಾಧಿಕಾರಿ, ರೈತರಿಂದ ಮಾಹಿತಿ; ಸಂಗ್ರಹ ಅಳಲು ತೋಡಿಕೊಂಡ ರೈತರು

Pinterest LinkedIn Tumblr

11baraಮೈಸೂರು, ಸೆ.11: ಕೇಂದ್ರ ಸರಕಾರದ ಬರ ಅಧ್ಯಯನ ತಂಡದ ಸದಸ್ಯರಾದ ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್ ಪಿ.ಕೆ. ಸಕ್ಸೇನಾ ಹಾಗೂ ಜಲ ಇಲಾಖೆ ಅಧೀನ ಕಾರ್ಯದರ್ಶಿ ಎ.ಕೆ.ಶ್ರೀವಾಸ್ತವ್ ಅವರು ಶುಕ್ರವಾರ ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಮೊದಲಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೈಸೂರು ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ಜಿಲ್ಲಾಧಿಕಾರಿ ಯಿಂದ ಮಾಹಿತಿ ಪಡೆದ ಕೇಂದ್ರ ಬರ ಅಧ್ಯಯನ ತಂಡ, ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಜೆಟ್ಟಿಹುಂಡಿ ಗ್ರಾಮಕ್ಕೆ ಭೇಟಿ ನೀಡಿತು.

ಗ್ರಾಮಸ್ಥರು ಮಳೆಯ ಕೊರತೆಯಿಂದ ಗ್ರಾಮದಲ್ಲಿ ತೀವ್ರ ಕುಡಿ ಯುವ ನೀರಿನ ಸಮಸ್ಯೆ ಎದುರಾಗಿದೆ. ಅಂತರ್ಜಲದ ಮಟ್ಟ ಕುಸಿದಿದ್ದು, 1,000 ಅಡಿ ತೋಡಿದರೂ ನೀರು ಸಿಗದಂತಾಗಿದೆ. ಜಿಲ್ಲಾಡಳಿತ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದೆ ಎಂದು ಸಮಸ್ಯೆ ಹೇಳಿಕೊಂಡರು. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸಿ.ಶಿಖಾ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯೊಳಗೆ ಈ ಗ್ರಾಮವನ್ನು ಸೇರಿಸ ಲಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅನಂತರ ಎಚ್.ಡಿ.ಕೋಟೆ ತಾಲೂಕಿನ ಜಿ.ಬಿ.ಸರಗೂರು ಗ್ರಾಮಸ್ಥ ಸ್ವಾಮಿಗೌಡ ಅವರ ಜಮೀನಿಗೆ ಭೇಟಿ ನೀಡಿ ಮಳೆಯ ಕೊರತೆಯಿಂದ ಹಾನಿಯಾಗಿರುವ ಹತ್ತಿ ಹಾಗೂ ರಾಗಿ ಬೆಳೆಯ ಬಗ್ಗೆ ಮಾಹಿತಿ ಕಲೆ ಹಾಕಿದರು. ಬೆಳೆ ಹಾನಿಯ ಬಗ್ಗೆ ಕೇಂದ್ರ ಬರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದ ಸ್ವಾಮಿಗೌಡ, ಕಳೆದ ವರ್ಷ ಉತ್ತಮ ಮಳೆಯಿಂದಾಗಿ ಒಟ್ಟು 4 ಎಕರೆ ಭೂಮಿಯಲ್ಲಿ ಬೆಳೆದ ರಾಗಿ ಮತ್ತು ಹತ್ತಿ ಬೆಳೆಗಳಿಂದ 20,000 ಲಾಭ ಗಳಿಸಲಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯಿಂದಾಗಿ ಬೆಳೆ ಹಾನಿಯಾಗಿರುವ ಕಾರಣ ಸುಮಾರು 30,000 ರೂ. ನಷ್ಟವಾಗಿದ್ದು, ಪರಿಹಾರವನ್ನು ಕೊಡಿಸಬೇಕಾಗಿ ಮನವಿ ಮಾಡಿದರು.

ಎಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿಯಲ್ಲಿರುವ ರೈತರ ಜಮೀನುಗಳಿಗೆ ಹಾನಿಯಾಗಿರುವ ಜೋಳ ಹಾಗೂ ರಾಗಿ ಬೆಳೆಗಳನ್ನು ಪರಿಶೀಲಿಸಿದರು. ಬಹಳಷ್ಟು ಸಣ್ಣ ರೈತರು 1 ಅಥವಾ ಅರ್ಧ ಎಕರೆ ಜಮೀನಿನಲ್ಲಿ ರಾಗಿ ಹಾಗೂ ಜೋಳವನ್ನು ಬೆಳೆದು ಮಳೆಯ ಅಭಾವದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾಧಿಕಾರಿ ಮೈಸೂರು ಜಿಲ್ಲೆ ಯಲ್ಲಿ 80,000 ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಜೋಳ, ಹತ್ತಿ ಹಾಗೂ ತಂಬಾಕು ಮುಖ್ಯ ಬೆಳೆಗಳಾಗಿವೆ ಎಂದರು.

ಹುಣಸೂರು ತಾಲೂಕಿನ ಚಲ್ಲಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಗೋಹಳ್ಳಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯನ್ನು ಅಧ್ಯಯನ ತಂಡ ವೀಕ್ಷಿಸಿತು. ಬಳಿಕ ಚಲ್ಲಹಳ್ಳಿಯಲ್ಲಿನ ರೈತ ಸಹೋದರರಾದ ಶಾಂತಚಾರಿ ಹಾಗೂ ಸುರೇಶ ಚಾರಿ ಅವರ ಜಮೀನಿಗೆ ತೆರಳಿ ಹಾನಿಯಾಗಿರುವ ತಂಬಾಕು ಬೆಳೆಯ ಬಗ್ಗೆ ಮಾಹಿತಿ ಪಡೆದರು. ರೈತ ಸಹೋದರರಿಬ್ಬರು ಸಾಲ ಮಾಡಿ 2 ಎಕರೆ ಪ್ರತ್ಯೇಕ ಭೂಮಿಯಲ್ಲಿ ತಂಬಾಕು ಬೆಳೆಯನ್ನು ಬೆಳೆದಿದ್ದರು. ಆದರೆ, ಮಳೆ ಕೊರತೆಯಿಂದ ಬೆಳೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ರೈತ ಸಹೋದರರು ಸಾಲ ತೀರಿಸುವ ಬದಲು ಅದರ ಬಡ್ಡಿಯನ್ನೂ ಕಟ್ಟಲು ಸಾಧ್ಯವಾಗದಂತಾಗಿದೆ ಎಂದು ತಿಳಿಸಿದರು.

ಅನಂತರ ಕೇಂದ್ರ ಸರಕಾರದ ಬರ ಅಧ್ಯಯನ ತಂಡದ ಹಳ್ಳಿಕೆರೆ ರೈತರ ಜಮೀನಿಗೆ ಭೇಟಿ ನೀಡಿ ಹಾಸನ ಜಿಲ್ಲೆಯ ಹೊಳೇನರಸಿಪುರ ತಾಲೂಕಿಗೆ ಪ್ರಯಾಣ ಬೆಳೆಸಿದರು.

ಕೇಂದ್ರ ಸರಕಾರದ ಬರ ಅಧ್ಯಯನ ತಂಡ ಭೇಟಿಯ ವೇಳೆ ಲಾಲ್‌ಬಾಗ್ ನಿರ್ದೇಶಕರಾದ ಪರಶಿವಮೂರ್ತಿ, ಜಿಪಂ ಸಿಇಒ ಪಿ.ಎ. ಗೋಪಾಲ್, ಉಪ ಕಾರ್ಯದರ್ಶಿ ಮಹೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಮಹಾಂತೇಶಪ್ಪ, ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಪ್ರಸಾದ್‌ಮೂರ್ತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment