ಕರ್ನಾಟಕ

ಕಲಬುರ್ಗಿ ಹತ್ಯೆ ಸಿಬಿಐಗೆ: ಸದ್ಯಕ್ಕೆ ಸಿಐಡಿ ತನಿಖೆ; ಶ್ರೇಷ್ಠ ಚಿಂತಕನಿಗೆ ಕಣ್ಣೀರಿನ ವಿದಾಯ

Pinterest LinkedIn Tumblr

150831kpn80ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಕಾಲೇಜು ವಿದ್ಯಾರ್ಥಿಗಳು ಪಾರ್ಥಿವ ಶರೀರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಮನೆಯಲ್ಲಿ ಕುಟುಂಬ ವರ್ಗದವರು ಪೂಜೆ ಸಲ್ಲಿಸಿದ ಬಳಿಕ ಪಾರ್ಥಿವ ಶರೀರವನ್ನು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ರುದ್ರಭೂಮಿಗೆ ತರಲಾಯಿತು. ಬಸವ ತತ್ವದ ಸಂಪ್ರದಾಯ ಹಾಗೂ ಸಕಲ ಸರಕಾರಿ ಗೌರವಗಳೊಂದಿಗೆ ಕಲಬುರ್ಗಿ ಅವರ ಅಂತ್ಯಕ್ರಿಯೆಯನ್ನು 11:30ರ ಸುಮಾರಿಗೆ ಅಪಾರ ಅಭಿಮಾನಿಗಳು, ಸಾಹಿತಿಗಳು, ಮಠಾಧೀಶರು, ಶಿಷ್ಯವೃಂದದ ಅಶ್ರುತರ್ಪಣಗಳ ನಡುವೆ ನೆರವೇರಿಸಲಾಯಿತು.
ಕಲಬುರ್ಗಿ ಅವರ ಪುತ್ರ ವಿಜಯ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಕಲಬುರ್ಗಿ ಅವರ ಪತ್ನಿ ಉಮಾದೇವಿ, ಪುತ್ರಿಯರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಸರಕಾರಿ ಗೌರವ: ಸರಕಾರದ ಪರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಮೃತರ ಗೌರವಾರ್ಥ 21 ಸುತ್ತು ಕುಶಾಲ ತೋಪು ಹಾರಿಸಲಾಯಿತು. ಧಾರವಾಡ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್, ಶಾಸಕ ವಿನಯ ಕುಲಕರ್ಣಿ, ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು.
ಮಠಾಧೀಶರು ಭಾಗಿ: ತೋಂಟದಾರ್ಯ ಶ್ರೀ, ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ, ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಬಸವರಾಜ ದೇವರು, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಇತರ ಮಠಾಧೀಶರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಅಖಿಲ ಭಾರತ ವೀರಶೈವ ಪರಿಷತ್ ಅಧ್ಯಕ್ಷ ಗೊ.ರು.ಚನ್ನಬಸಪ್ಪ, ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್, ಅಶೋಕ ಅರವಿಂದ್ ಸೇರಿದಂತೆ ಸಮುದಾಯದ ಮುಖಂಡರು, ಅಪಾರ ಬಂಧುಗಳು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್:  ಮೃತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ವಿದ್ಯಾರ್ಥಿಗಳು, ಗಣ್ಯರು, ಸಾಹಿತಿಗಳು, ರಾಜಕೀಯ ಮುಖಂಡರು ಆಗಮಿಸಿದ್ದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾಡಳಿತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು.
ಪ್ರಗತಿಪರ ಸಾಹಿತಿಗಳಿಗೆ ಭದ್ರತೆ: ಮೇಘರಿಕ್
ಬೆಂಗಳೂರು: ಹಿರಿಯ ಸಂಶೋಧಕ, ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯಿಂದಾಗಿ ಆತಂಕಕ್ಕೆ ಒಳಗಾಗಿರುವ ಪ್ರಗತಿಪರ ಸಾಹಿತಿಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ನಗರ ಪೊಲೀಸ್ ಎಂ.ಎನ್.ಮೇಘರಿಕ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ವಾಸವಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಗಿರೀಶ್‌ಕಾರ್ನಾಡ್, ಡಾ.ಎಸ್.ಎಲ್.ಭೈರಪ್ಪ, ಪ್ರೊ.ಚಂದ್ರಶೇಖರ ಪಾಟೀಲ್, ಪ್ರೊ.ಕೆ.ಎಸ್.ಭಗವಾನ್ ಅವರಿಗೆ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದರು.
ತಮ್ಮ ಠಾಣೆಗಳ ವ್ಯಾಪ್ತಿಯಲ್ಲಿರುವ ಸಾಹಿತಿಗಳ ನಿವಾಸಗಳ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಎಲ್ಲ ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ರವಾನಿಸಲಾಗಿದೆ ಎಂದು ಮೇಘರಿಕ್ ತಿಳಿಸಿದರು.

Write A Comment