ಕರ್ನಾಟಕ

ಕಲಬುರ್ಗಿ ಹತ್ಯೆ ಪ್ರಕರಣ ಸಿಬಿಐಗೆ ವಹಿಸಿದ ರಾಜ್ಯ ಸರಕಾರ; ಸಿಬಿಐ ತನಿಖೆಗೆ ಒಪ್ಪಿಕೊಳ್ಳುವ ತನಕ ಸಿಐಡಿ ತನಿಖೆ

Pinterest LinkedIn Tumblr

Kalburgi

ಬೆಂಗಳೂರು: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಪ್ರಕರಣದ ತನಿಖೆ ನಡೆಸುವಂತೆ ಸರ್ಕಾರ ಸಿಬಿಐಗೆ ಪತ್ರ ಬರೆಯಲಿದೆ’ ಎಂದು ತಿಳಿಸಿದ ಸಚಿವರು, ಸಿಬಿಐ ತನಿಖೆಗೆ ಒಪ್ಪಿಕೊಳ್ಳುವ ತನಕ ಸಿಐಡಿ ತನಿಖೆ ನಡೆಯಲಿದೆ ಎಂದರು.

‘ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿವರವಾಗಿ ಚರ್ಚಿಸಲಾಗಿದ್ದು, ಎಲ್ಲಾ ಸಚಿವರ ಅಭಿಪ್ರಾಯ ಪಡೆದ ನಂತರ ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯ ಸರ್ಕಾರ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಸಿಬಿಐಗೆ ಪತ್ರ ಬರೆದು ಮನವಿ ಮಾಡಲಿದೆ ಎಂದು ಜಯಚಂದ್ರ ವಿವರಣೆ ನೀಡಿದರು.

‘ಸಿಬಿಐ ತನಿಖೆಗೆ ಒಪ್ಪಿಕೊಳ್ಳುವ ತನಕ, ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸಲಿದೆ. ಈಗಾಗಲೇ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ’ ಎಂದು ಜಯಚಂದ್ರ ಅವರು ತಿಳಿಸಿದರು. ಭಾನುವಾರ ಬೆಳಗ್ಗೆ ಧಾರವಾಡದಲ್ಲಿ ಎಂ.ಎಂ.ಕಲಬುರ್ಗಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

Write A Comment