ಬೆಂಗಳೂರು, ಆ.29: ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ) ಹಾಗೂ ಹಿಂ.ವರ್ಗಗಳ ಬಡ ವಿದ್ಯಾರ್ಥಿಗಳಿಗೆ ‘ವಿದೇಶ ವ್ಯಾಸಂಗ ಯೋಜನೆ’ ಯಡಿ ಉನ್ನತ ವ್ಯಾಸಂಗಕ್ಕೆ ಒಟ್ಟು 21ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಿದೇಶ ವ್ಯಾಸಂಗಕ್ಕೆ ತೆರಳುವ ಬಡ ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ ಮಾಡಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ-45, ಎಸ್ಟಿ-8 ಹಾಗೂ ಹಿಂ.ವರ್ಗಗಳ-89 ವಿದ್ಯಾರ್ಥಿಗಳನ್ನು ವಿದೇಶ ವ್ಯಾಸಂಗಕ್ಕೆ ಆಯ್ಕೆ ಮಾಡಲಾಗಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ, ಊಟ, ವಸತಿ ಸೇರಿದಂತೆ ಸಂಪೂರ್ಣ ಖರ್ಚನ್ನು ಭರಿಸಲಾಗುವುದು. ಹಿಂ.ವರ್ಗಗಳ ಅಭ್ಯರ್ಥಿ ಗಳಿಗೆ ವಾರ್ಷಿಕ ಗರಿಷ್ಠ 10 ಲಕ್ಷ ರೂ.ನಂತೆ ಮೂರು ವರ್ಷಗಳಲ್ಲಿ 30 ಲಕ್ಷ ರೂ.ಗಳನ್ನು ಭರಿಸಲಾಗುವುದು. ಅದಕ್ಕೂ ಮೇಲ್ಪಟ್ಟ ಮೊತ್ತಕ್ಕೆ ಶೇ.2ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದೆಂದು ಅವರು ಮಾಹಿತಿ ನೀಡಿದರು.
ಪಿಎಚ್ಡಿ ಪದವಿ ಗರಿಷ್ಠ ನಾಲ್ಕು ವರ್ಷ, ಸ್ನಾತಕೋತ್ತರ ಪದವಿ ಗರಿಷ್ಠ 2ವರ್ಷಗಳ ಅವಧಿ. ವಿವಿ ಶುಲ್ಕ, ಪುಸ್ತಕ ಗಳ ಖರೀದಿ, ವೀಸಾ ವೆಚ್ಚ, ವಿಮಾನ ಪ್ರಯಾಣ ಶುಲ್ಕ ಸೇರಿದಂತೆ ಎಲ್ಲ ವೆಚ್ಚಗಳನ್ನು ಸರಕಾರದಿಂದಲೇ ಭರಿಸಲಾ ಗುವುದು ಎಂದು ಆಂಜನೇಯ ವಿವರಗಳನ್ನು ನೀಡಿದರು.
ವಿದೇಶ ವ್ಯಾಸಂಗ ಯೋಜನೆಯಡಿ ಉನ್ನತ ವ್ಯಾಸಂಗಕ್ಕೆ 2001-02ರಿಂದ ಈವರೆಗೂ ಒಟ್ಟು 131 ಬಡ-ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಳುಹಿಸಲಾಗಿದೆ ಎಂದ ಅವರು, ವಿದ್ಯಾರ್ಥಿಗಳು ಕೋರ್ಸ್ ಪೂರ್ಣ ಗೊಳಿಸುವುದು ಕಡ್ಡಾಯ, ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿದರೆ ಅನುದಾನ ಕಡಿತ ಮಾಡಲಾಗುವುದು ಎಂದರು.ವಿದೇಶಿ ವ್ಯಾಸಂಗ ಯೋಜನೆಯಡಿ ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳು ಸನ್ನಡತೆ ರೂಢಿಸಿಕೊಳ್ಳಬೇಕು. ಅಧ್ಯಯನ ಪೂರ್ಣಗೊಳಿಸಿದ ಬಳಿಕ ಮರಳಿ ಭಾರತಕ್ಕೆ ಬಂದು ನಮ್ಮ ದೇಶದಲ್ಲೇ ಸೇವೆ ಸಲ್ಲಿಸಬೇಕು. ಮಾತ್ರವಲ್ಲ, ತಮ್ಮ ಪೋಷಕರನ್ನೂ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿದೇಶಿ ವಿ.ವಿ.ಗಳಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವ ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಮಿತಿ ಇಲ್ಲ. ಹಿಂದುಳಿದ ವರ್ಗಗಳ 100 ವಿದ್ಯಾರ್ಥಿಗಳನ್ನು ವಿದೇಶ ವ್ಯಾಸಂಗಕ್ಕೆ ಕಳುಹಿಸಲು ಉದ್ದೇಶಿಸಿದ್ದು, ಇನ್ನೂ 11 ಜನರು ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು.
ಎಚ್. ಆಂಜನೇಯ, ಸಚಿವ