ಕರ್ನಾಟಕ

ಅನರ್ಹ ಪಡಿತರ ಚೀಟಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ದಿನೇಶ್ ಗುಂಡೂರಾವ್

Pinterest LinkedIn Tumblr

Dinesh-Gundu-Raoಬೆಂಗಳೂರು, ಆ.29: ಸರಕಾರಿ ನೌಕರರು, ಚತುಷ್ಚಕ್ರ ವಾಹನಗಳನ್ನು ಹೊಂದಿರುವ ಅನರ್ಹರು ಸುಳ್ಳು ಮಾಹಿತಿ ನೀಡಿ ಪಡೆದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಇನ್ನೆರಡು ತಿಂಗಳೊಳಗಾಗಿ ಹಿಂದಿರುಗಿಸದಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದೆಂದು ಆಹಾರ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಪಡೆದಿರುವ ಅನರ್ಹರನ್ನು ಪತ್ತೆ ಹಚ್ಚಲು ಪರಿಶೀಲನೆ ಕಾರ್ಯ ಆರಂಭಿಸಿದ್ದು 16,300 ಕಾರ್ಡುಗಳನ್ನು ಅಮಾನತುಗೊಳಿಸಲಾಗಿದೆ. ಪ್ರತಿನಿತ್ಯ 2,000 ಮಂದಿ ಅನರ್ಹರು ಪತ್ತೆಯಾಗುತ್ತಿದ್ದಾರೆಂದರು. ಅನರ್ಹರು ಸ್ವ ಪ್ರೇರಣೆಯಿಂದ ತಮ್ಮ ಬಳಿಯ ಕಾರ್ಡ್ ಗಳನ್ನು ಹಿಂದಿರುಗಿಸಿದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅಕ್ರಮವಾಗಿ ಪಡೆದಿರುವ ಕಾರ್ಡ್ ವಾಪಸ್ ಮಾಡದಿದ್ದರೆ ಅಂತಹ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದೆಂದು ದಿನೇಶ್ ಗುಂಡೂರಾವ್ ಹೇಳಿದರು.
ಪಶು ವೈದ್ಯ ಸೇರಿದಂತೆ ‘ಎ’, ‘ಬಿ’, ‘ಸಿ’ ಹಾಗೂ ‘ಡಿ’ ದರ್ಜೆ ನೌಕರರು ಒಳಗೊಂಡಂತೆ ಒಟ್ಟು 16 ಸಾವಿರಕ್ಕೂ ಹೆಚ್ಚು ಮಂದಿ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿರುವುದು ಪರಿಶೀಲನೆಯಿಂದ ಗೊತ್ತಾಗಿದೆ. ತಪ್ಪಿತಸ್ಥ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ 1.11 ಕೋಟಿ ಬಿಪಿಎಲ್ ಕಾರ್ಡುದಾರರಿದ್ದು, ಆ ಪೈಕಿ 16 ಸಾವಿರ ಅನರ್ಹ ಪಡಿತರ ಚೀಟಿಗಳನ್ನು ಅಮಾನತುಗೊಳಿಸಲಾಗಿದೆ. ಇದರಿಂದ ಸರಕಾರಕ್ಕೆ ಮಾಸಿಕ 1.18 ಕೋಟಿ ರೂ.ಉಳಿತಾಯ ಆಗಲಿದೆ ಎಂದ ಅವರು, ಅನರ್ಹರಿಂದ 7ಲಕ್ಷ ರೂ.ದಂಡವನ್ನೂ ವಸೂಲಿ ಮಾಡಲಾಗಿದೆ ಎಂದರು. ಹೊಸ ಅರ್ಜಿ: ಬಿಪಿಎಲ್ ಪಡಿತರ ಚೀಟಿಗಾಗಿ 9.54 ಲಕ್ಷ ಅರ್ಜಿಗಳು ಬಂದಿದ್ದು, ಆ ಪೈಕಿ 22ಸಾವಿರ ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದ ಅವರು, 12 ಲಕ್ಷ ಎಪಿಎಲ್ ಕಾರ್ಡುದಾರರ ಪೈಕಿ 97 ಸಾವಿರ ಮಂದಿ ಸಬ್ಸಿಡಿ ಪಡಿತರಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ಮಾಹಿತಿ ನೀಡಿದರು.
ಕಾನೂನು: ಸರಕಾರಿ ನೌಕರರು, ಅನರ್ಹರು ಪಡಿತರ ಚೀಟಿ ಪಡೆದುಕೊಳ್ಳಲು ಅವಕಾಶವಾಗದಂತೆ ನೀತಿಯೊಂದನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದ ಅವರು, ಅರ್ಹರಿಗೆ ಸರಕಾರಿ ಸೌಲಭ್ಯಗಳು ದೊರಕಬೇಕೆಂಬುದು ಸರಕಾರದ ಆಶಯ ಎಂದು ತಿಳಿಸಿದರು.
ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆಹಾರ ಉತ್ಪಾದನೆ ಕುಂಠಿತವಾಗಲಿದ್ದು, ಆದರೆ ಪಡಿತರ ವಿತರಣೆಗೆ ಯಾವುದೇ ಅಡ್ಡಿಯಾಗದು. ಕೇಂದ್ರದಿಂದ ಆಹಾರ ಪದಾರ್ಥಗಳನ್ನು ಖರೀದಿಸಲಾಗುವುದೆಂದ ಅವರು, ಒಂದು ವೇಳೆ ಆಹಾರ ಕೊರತೆಯುಂಟಾದರೆ ಆಹಾರ ನಿಗಮದ ಹರಾಜು ಪ್ರಕ್ರಿಯೆಯಲ್ಲಿ ಅಕ್ಕಿ-ಗೋಧಿ ಖರೀದಿಸಲಾಗುವುದು ಎಂದರು.

ಅನರ್ಹ ಪಡಿತರ ಚೀಟಿದಾರರ ಪತ್ತೆಗೆ ಆರ್‌ಟಿಒ ಕಚೇರಿಯಲ್ಲಿನ ವಾಹನ ಮಾಲಕತ್ವದ ದಾಖಲೆ ಹಾಗೂ ವಸತಿ ಅಂಕಿ-ಅಂಶಗಳನ್ನು ಹಾಗೂ ಸರಕಾರಿ ನೌಕರರ ಡಾಟಾವನ್ನು ಸಂಗ್ರಹಿಸಿದ್ದು ಪರಿಶೀಲನೆ ಕಾರ್ಯ ಕೈಗೊಳ್ಳಲಾಗಿದೆ.
ದಿನೇಶ್ ಗುಂಡೂರಾವ್

Write A Comment