ಕೆ.ಆರ್.ಪೇಟೆ, ಆ.28: ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಚನ್ನರಾಯ ಪಟ್ಟಣ ತಾಲೂಕಿನ ಬಾಳಗಂಚಿ ಗ್ರಾಮದ ನವ ವಿವಾಹಿತೆ ಮೋನಿಷಾ(19) ಅವರ ಮೃತದೇಹವು ಶುಕ್ರವಾರ ತಾಲೂಕಿನ ಹೇಮಾವತಿ ನದಿ ಕಾಲುವೆಯು ಹಾದು ಹೋಗುವ ಸಿಂದಘಟ್ಟ ಕೆರೆಯಲ್ಲಿ ಪತ್ತೆಯಾಗಿದೆ.
ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ತನ್ನ ಪತ್ನಿಯನ್ನು ಹುಡುಕಿಸಿಕೊಡುವಂತೆ ಹಿರಿಸಾವೆ ಪೋಲಿಸ್ ಠಾಣೆಗೆ ದೂರು ನೀಡಿದ್ದನು. ಸಿಂಧಘಟ್ಟ ಗ್ರಾಮದ ಕೆರೆಯಲ್ಲಿ ಮೋನಿಷಾಳ ಶವವು ಪತ್ತೆಯಾದ ಮಾಹಿತಿಯು ದೊರಕಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಹಿರೀಸಾವೆ ಪೋಲಿಸ್ ಠಾಣೆಗೆ ನಾಗರಾಜು ಶರಣಾಗಿದ್ದು, ತಪ್ಪೊಪ್ಪಿಕೊಂಡಿದ್ದಾನೆ.
ಚನ್ನರಾಯಪಟ್ಟಣ ತಾಲೂಕಿನ ಬಾಳಗಂಚಿ ಗ್ರಾಮದ ಯೋಗೇಶ್ ಅವರ ಪುತ್ರಿ ಮೋನಿಷಾಳನ್ನು ಕಳೆದ ಮೂರು ತಿಂಗಳ ಹಿಂದಷ್ಟೇ ಕೈತುಂಬಾ ವರದಕ್ಷಿಣೆ ನೀಡಿ ಹೆಗ್ಗೆರೆ ಗ್ರಾಮದ ನಾಗರಾಜುವಿಗೆ ವಿವಾಹ ಮಾಡಿಕೊಡಲಾಗಿತ್ತು. ಕೆರೆಯಲ್ಲಿ ಮಹಿಳೆಯ ಮೃತ ದೇಹವು ತೇಲುತ್ತಿರುವ ಬಗ್ಗೆ ಗ್ರಾಮಸ್ಥರು ಪಟ್ಟಣ ಪೋಲಿಸ್ ಠಾಣೆಗೆ ಸುದ್ದಿಯನ್ನು ಮುಟ್ಟಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸಬ್‌ಇನ್ಸ್‌ಪೆಕ್ಟರ್ ಎಚ್.ಎನ್.ವಿನಯ್, ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ ಮೃತದೇಹವನ್ನು ನೀರಿನಿಂದ ಹೊರಕ್ಕೆ ತೆಗೆಸಿ ಶವಪರೀಕ್ಷೆ ನಡೆಸಿದರು.