ಕರ್ನಾಟಕ

ಎರಡೇ ನಿಮಿಷಕ್ಕೆ ಮುಕ್ತಾಯವಾದ ಪೊಲೀಸ್ ಜೊತೆಗಿನ ವಿಡಿಯೊ ಕಾನ್ಪರೆನ್ಸ್

Pinterest LinkedIn Tumblr

Modi2ಬೆಂಗಳೂರು: ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರ ಜತೆಗಿನ ಪ್ರಧಾನಿ ನರೇಂದ್ರ ಮೋದಿ ಅವರ ಬಹು ನಿರೀಕ್ಷಿತ ವಿಡಿಯೋ ಕಾನ್ಫರೆನ್ಸ್‌ ಕೇವಲ ಎರಡು ನಿಮಿಷದಲ್ಲಿ ಮುಗಿಯಿತು. ಬುಧವಾರ ನಡೆದ ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿ ಸಿ.ಬಾಲಕೃಷ್ಣ ಅವರು, “ಪೊಲೀಸ್‌ ಇಲಾಖೆಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ ಹಾಗೂ ಸಾರ್ವಜನಿಕ ಸೇವೆಗಳ’ ಬಗ್ಗೆ ಪ್ರಧಾನಿಯವರಿಗೆ ಮಾಹಿತಿ ನೀಡಿದರು.

ಠಾಣಾಧಿಕಾರಿಗಳ ಮಾತುಗಳನ್ನು ಎರಡು ನಿಮಿಷ ಮೌನವಾಗಿ ಆಲಿಸಿದ ಪ್ರಧಾನಿ, ಸಣ್ಣದೊಂದು ನಗೆ ಬೀರಿ ಸಂವಾದ ಅಂತ್ಯಗೊಳಿಸಿದರು. ಪೊಲೀಸರ ಜತೆ ಮಾತ್ರವಲ್ಲದೆ 30 ಸೆಕೆಂಡ್‌ ಕಾಲ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅವರೊಂದಿಗೂ ಪ್ರಧಾನಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದರು. ಈ ವೇಳೆ ರಾಜ್ಯದ ಪೊಲೀಸರ ಕಾರ್ಯಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದಿಯಲ್ಲಿ ಸಂವಾದ: “ಪೊಲೀಸ್‌ ಮಾಹಿತಿ ತಂತ್ರಜ್ಞಾನ’ ಬಳಕೆ ಕುರಿತು ಬುಧವಾರ ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಠಾಣೆ ಸೇರಿದಂತೆ ದೇಶದ ಮೂರು ಠಾಣೆಗಳ ಪೊಲೀಸರ ಜತೆ ಮೋದಿ ಅವರ ವಿಡಿಯೋ ಕಾನೆ#ರೆನ್ಸ್‌ ಸಂವಾದ ಆಯೋಜನೆಯಾಗಿತ್ತು.

ಅಪರಾಹ್ನ 3.45ಕ್ಕೆ ಸಂವಾದ ಆರಂಭಿಸಿದ ಪ್ರಧಾನಿಯವರು, ಕೇಂದ್ರ ಸರ್ಕಾರದ ಇತರೆ ಇಲಾಖೆಗಳ ಅಧಿಕಾರಿಗಳ ಜತೆ ಸಮಾಲೋಚಿಸಿ ಸಂಜೆ 4.45ಕ್ಕೆ ಕಬ್ಬನ್‌ಪಾರ್ಕ್‌ ಪೊಲೀಸರ ಸಂಪರ್ಕಕ್ಕೆ ಬಂದರು. ಠಾಣಾಧಿಕಾರಿ ಬಾಲಕೃಷ್ಣ ಅವರು ಎರಡು ನಿಮಿಷದೊಳಗೆ ಪ್ರಧಾನಿಯವರಿಗೆ ಪ್ರಾತ್ಯಕ್ಷಿಕೆ ಮೂಲಕ ಪೊಲೀಸ್‌ ಇಲಾಖೆಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ, ಉಪಯೋಗ ಹಾಗೂ ಸಕಾಲ ಯೋಜನೆಯಡಿ ಸಾರ್ವಜನಿಕ ಸೇವೆಗಳ ಕುರಿತು ಹಿಂದಿ ಭಾಷೆಯಲ್ಲಿ ವಿವರಿಸಿದರು. ನಂತರ ರಾಜ್ಯ ಮುಖ್ಯ ಕಾರ್ಯದರ್ಶಿ ಜತೆ ಪ್ರಧಾನಿ ಮೋದಿ ಅವರು ಸಮಾಲೋಚಿಸಿ ಸಂವಾದಕ್ಕೆ ತೆರೆ ಎಳೆದರು.

ಸಂವಾದಕ್ಕೆ ವಿಧಾನಸೌಧ ಹಾಗೂ ಕಬ್ಬನ್‌ಪಾರ್ಕ್‌ ಠಾಣೆಗಳಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ ಉಪಸ್ಥಿತರಿದ್ದರು.

ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ, ಕೇಂದ್ರ ವಿಭಾಗದ ಡಿಸಿಪಿ ಸಂದೀಪ್‌ ಪಾಟೀಲ್‌ ಇದ್ದರು.

ಸಂವಾದಕ್ಕೆ 2 ವಾರ ತರಬೇತಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಂವಾದಕ್ಕಾಗಿ ಪೊಲೀಸರು ಎರಡು ವಾರಗಳ ತಯಾರಿ ನಡೆಸಿದ್ದರು. ಪ್ರಧಾನ ಮಂತ್ರಿಗಳ ಸೂಚನೆಯಂತೆ ಸಂವಾದ ಪಾಲ್ಗೊಳ್ಳಲಿರುವ ಪೊಲೀಸರಿಗೆ ಹಿಂದಿ ಭಾಷಾ ತರಬೇತಿ ಸಹ ಸಿದ್ದತೆ ನಡೆದಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ನಿಮಿಷದೊಳಗೆ ಪೊಲೀಸ್‌ ಇಲಾಖೆಯ ಮಾಹಿತಿ ತಂತ್ರಜ್ಞಾನ ಬಳಕೆ ಕುರಿತು ಮಾಹಿತಿ ನೀಡಲಾಯಿತು. ಪ್ರಧಾನಿಯವರ ಜತೆಗಿನ ಸಂವಾದ ಖುಷಿ ತಂದಿದೆ.
ಸಂದೀಪ್‌ ಪಾಟೀಲ್‌, ಡಿಸಿಪಿ, ಕೇಂದ್ರ ವಿಭಾಗ
-ಉದಯವಾಣಿ

Write A Comment