ಬೆಂಗಳೂರು: ಬಿಬಿಎಂಪಿ ಅವ್ಯವಹಾರದ ಬಗ್ಗೆ ಕಟಾರಿಯಾ ಸಮಿತಿ ನೀಡಿದ ವರದಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಕಸದ ಬುಟ್ಟಿಗೆ ಹಾಕುವುದಿಲ್ಲ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಜ್, ಬಿಬಿಎಂಪಿ ಸೋಲಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ನಾನು ಆ ಬಗ್ಗೆ ಮಾತನಾಡುವುದಿಲ್ಲ ಎಂದರು.
ಕಳೆದ ಅವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಸರ್ಕಾರ ಕಟಾರಿಯಾ ಸಮಿತಿ ರಚಿಸಿ ವರದಿ ಪಡೆದಿತ್ತು. ವ್ಯಾಪಕ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ದನ್ನು ದೃಢೀಕರಿಸಿದ್ದ ಸಮಿತಿ ದಾಖಲೆಗಳ ಸಮೇತ ವರದಿ ನೀಡಿತ್ತು. ಸಮಿತಿಯ ಈ ವರದಿಯನ್ನು ನಾವು ಕಸದ ಬಟ್ಟಿಗೆ ಎಸೆಯುವುದಿಲ್ಲ. ಅವ್ಯವಹಾರದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಬಿಬಿಎಂಪಿಯನ್ನು ಅಭಿವೃದ್ಧಿ ದೃಷ್ಟಿಯಿಂದ ವಿಭಜನೆ ಮಾಡಬೇಕು ಎಂದು ನಾವು ಪ್ರಯತ್ನ ಪಟ್ಟೆವು. ಆದರೆ, ಚುನಾವಣೆ ಮುಂದೂಡಲು ಈ ರೀತಿ ಮಾಡುತ್ತಿದ್ದೇವೆ ಎಂದು ಬಿಜೆಪಿಯವರು ಅಪಪ್ರಚಾರ ನಡೆಸಿದರು. ಬಿಬಿಎಂಪಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ ನಂತರವೇ ಸಾಕಷ್ಟು ಸುಧಾರಣೆ ಕಂಡುಬಂದಿದ್ದು ಎಂದು ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ.