ಕೊಳ್ಳೇಗಾಲ, ಆ.27: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಸಂಖ್ಯೆಗೆ ಅನುಗುಣವಾಗಿ ಆದಾಯವೂ ಹೆಚ್ಚಾಗುತ್ತಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧ್ದಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಕ್ಕರೆ ಕಾರ್ಖಾನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ತಿಳಿಸಿದ್ದಾರೆ.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶೇಷ ಸಂದಭರ್ದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಬರುವ ಭಕ್ತರು ಮೂಲಸೌಕರ್ಯದಿಂದ ವಂಚಿತಗೊಳ್ಳಬಾರದು ಎಂಬ ದೃಷ್ಟಿಯಿಂದ ಮಲೆ ಮಹದೇಶ್ವರ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧ್ದಿಪಡಿಸಲು ವಿಶೇಷವಾಗಿ ಹಬ್ಬದ ದಿನಗಳಲ್ಲಿ ಬರುವ ಜನರಿಗೆ ದೇವಸ್ಥಾನದ ಮುಂಭಾಗದಲ್ಲಿರುವ ರಂಗಮಂದಿರ ಸಮೀಪ ಶಾಶ್ವತ ನೆರಳಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಮಲೆ ಮಹದೇಶ್ವರ ಪ್ರಾಧಿಕಾರ ಅಧ್ಯಕ್ಷರಾಗಿರುವ ಸಿಎಂ ಸಿದ್ದರಾಮಯ್ಯನವರು ಆನೇಕ ಅಭಿವೃದ್ಧ್ದಿ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಕ್ಷೇತ್ರದಲ್ಲಿ ಬದಲಾವಣೆ ತರುವುದರ ಮೂಲಕ ರಾಜ್ಯದಿಂದ ಮಾತ್ರವಲ್ಲದೆ, ಹೊರ ರಾಜ್ಯಗಳಿಂದ ಬರುವ ಭಕ್ತರ ಅನುಕೂಲಕ್ಕಾಗಿ ಶೌಚಾಲಯ, ಸ್ಥಾನ ಘಟಕ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದೇವಸ್ಥಾನಕ್ಕೆ ಬರುವ ಆದಾಯದಲ್ಲಿ ಕ್ಷೇತ್ರ ಅಭಿವೃದ್ಧಿ ಪಡಿಸಿಕೊಳ್ಳಲು ಅವಕಾಶವಿದ್ದು, ಮುಜರಾಯಿ ಇಲಾಖೆಗೆ ಶೇ.15ರಷ್ಟು ಹಣವನ್ನು ನೀಡಿ ಉಳಿದ ಹಣವನ್ನು ಪ್ರಾಧಿಕಾರದ ಅಭಿವೃದ್ಧ್ದಿಗೆ ಬಳಸಿಕೊಳ್ಳಲು ಅವಕಾಶವಿದೆ ಎಂದರು ದ್ವೀಪದ ಒಡ್ಡು ಜಾಗದಲ್ಲಿ 35 ಎಕರೆ ಜಮೀನು ಖರೀದಿಸಿ ಉದ್ಯಾನವನ ಮ್ಯೂಝಿಯಂ, ಗಾಜಿನಮನೆ ಹಾಗೂ 65 ಅಡಿ ಎತ್ತರದ ಮಹದೇಶ್ವರರ ಪ್ರತಿಮೆಯನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಹನೂರು ಶಾಸಕ ನರೇಂದ್ರ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟದಲ್ಲಿ ವಾರ್ಷಿಕವಾಗಿ 30 ಕೋಟಿ ರೂ. ಆದಾಯ ಬರುತ್ತಿದೆ. ದೇವಸ್ಥಾನಕ್ಕೆ ಭಕ್ತರು ನೀಡುವ ಹಣದಿಂದ ಅವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಉಳಿದ ಹಣವನ್ನು ಪ್ರಾಧಿಕಾರದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲ್ಲಿ ಸಾಲೂರು ಮಠದ ಗುರುಸ್ವಾಮಿ, ಜಿಪಂ ಸಿಇಒ ನರಸಿಂಹಮೂರ್ತಿ, ಕೊಳ್ಳೇಗಾಲ ತಹಶೀಲ್ದಾರ್ ಸಿ.ಮಹದೇವಯ್ಯ, ಹನೂರು ವಿಶೇಷ ತಹಶೀಲ್ದಾರ್ ಮಹೇಶ್, ಇನಾಯತ್‌ಶರೀಫ್, ಅಪರ ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರ ಕಾರ್ಯದರ್ಶಿ ಡಿ.ಭಾರತಿ, ಉಪಕಾರ್ಯದರ್ಶಿ ರಾಮಪ್ಪ, ಅಧೀಕ್ಷಕ ಬಸವರಾಜು, ಜಿಪಂ ಸದಸ್ಯರಾದ ಈಶ್ವರ್, ಡಿ.ದೇವರಾಜು, ಮತ್ತಿತರರು ಉಪಸ್ಥಿತರಿದ್ದರು.