ಕರ್ನಾಟಕ

ಗಂಗಾವತಿ: ಮುಸ್ಲಿಮ್ ಸ್ವಾತಂತ್ರ ಹೋರಾಟಗಾರರನ್ನು ಕಡೆಗಣಿಸಿ ಇತಿಹಾಸ ತಿರುಚಲಾಗಿದೆ: ವಿಚಾರ ಸಂಕಿರಣದಲ್ಲಿ ಶಾಸಕ ಅನ್ಸಾರಿ

Pinterest LinkedIn Tumblr

1ansariಗಂಗಾವತಿ, ಆ.27: ಭಾರತದ ಸ್ವಾತಂತ್ರ ಹೋರಾಟದಲ್ಲಿ ಮುಸ್ಲಿಂ ಹೋರಾಟಗಾರರ ಪಾತ್ರವೂ ಮಹತ್ತರವಾಗಿದ್ದು, ಆದರೆ ಇತಿಹಾಸದಲ್ಲಿ ಈ ಬಗ್ಗೆ ತಿರುಚಿ ಬರೆಯಲಾಗಿದೆ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. ಅವರು ತಾಲೂಕಿನ ಜುಲೈನಗರದಲ್ಲಿ ಜಮಾತೆ ಉಲಮಾ ಕರ್ನಾಟಕ ಸಂಘಟನೆಯ ಅಶ್ರಯದಲ್ಲಿ ಜರಗಿದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮ್ ಜನಾಂಗ ಹಾಗೂ ಉಲಮಾಗಳ ಪಾತ್ರ ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮ್ ಜನಾಂಗದವರು ಪರಕೀಯರ ವಿರುದ್ಧ ಸಮರ ಸಾರಿದ್ದರು. ಧರ್ಮ ಗುರುಗಳು ಪತ್ವಾ ಹೊರಡಿಸಿ ಪರಕೀಯರಿಗೆ ಸಹಕಾರ ನೀಡಬಾರದು ಎಂದು ಹೇಳಿಕೆ ನೀಡಿದ್ದರಿಂದ ದೆಹಲಿಯಲ್ಲಿ ನೂರಾರು ಉಲಮಾ ಧರ್ಮ ಗುರುಗಳನ್ನು ಗಲ್ಲಿಗೇರಿಸಲಾಯಿತು ಎಂದರು. ಮೈಸೂರು ಹುಲಿ ಟಿಪ್ಪು ಸುಲ್ತಾನ್, ಹೈದರಾಲಿ ಹೀಗೆ ಸಾವಿರಾರು ಮುಸಿಮ್‌ನಾಯಕರು ಹೋರಾಟದಲ್ಲಿ ಮಡಿದಿದ್ದಾರೆ. ಆದರೆ ಇತಿಹಾಸ ಬರಹಗಾರರು ಮುಸ್ಲಿಮ್ ಹೋರಾಟಗಾರರನ್ನು ಗುರುತಿಸದೇ ಇತಿಹಾಸವನ್ನು ತಿರುಚಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ನಂತರ ದೇಶ ವಿಭಜನೆಯಾದ ನಂತರ ಕೆಲವು ಮುಸ್ಲಿಮರು ಪಾಕಿಸ್ತಾನಕ್ಕೆ ವಲಸೆ ಹೋದರೂ ಭಾರತವನ್ನು ಪ್ರೀತಿಸುವವರು ಇಲ್ಲೇ ಉಳಿದಿದ್ದಾರೆ. ಆದರೆ ಕೆಲ ಸಂಘಟನೆ ಮತ್ತು ಮಾಧ್ಯಮಗಳಿಂದಾಗಿ ಮುಸ್ಲಿಮರನ್ನು ಅನುಮಾನದಿಂದನೋಡುವ ಪ್ರವೃತ್ತಿ ಹೆಚ್ಚಾಗಿದೆ. ಪವಿತ್ರ ಗ್ರಂಥ ಕುರ್‌ಆನಿನಲ್ಲಿಯೂ ಜನಿಸಿದ ಭೂಮಿಯನ್ನು ತಂದೆ ತಾಯಿಗಳಷ್ಟೆ ಪ್ರೀತಿಸುವಂತೆ ತಿಳಿಸಲಾಗಿದೆ. ಆದ್ದರಿಂದ ಇಲ್ಲಿಯ ಮುಸ್ಲಿಂ ಯುವಕರು ದೇಶ ಭಕ್ತಿ ಮೈಗೂಡಿಸಿಕೊಂಡು ಸಂವಿಧಾನ ಬದ್ಧವಾಗಿ ನಡೆಯಬೇಕೆಂದರು.

Write A Comment