ಕರ್ನಾಟಕ

ಹಾಸನ: ಆಸ್ತಿ, ನೀರಿನ ತೆರಿಗೆ ಸಂಗ್ರಹಿಸಿ ನಗರಾಭಿವೃದ್ಧಿಗೆ ಶ್ರಮಿಸಿ: ಅಧಿಕಾರಿಗಳ ಸಭೆಯಲ್ಲಿ ಸಚಿವ ಸೊರಕೆ ಸೂಚನೆ

Pinterest LinkedIn Tumblr

5SORAKEಹಾಸನ, ಆ.27: ಸ್ಥಳೀಯ ಸಂಸ್ಥೆಗಳು ಸುವ್ಯವಸ್ಥಿತವಾಗಿ ನಡೆಯಲು ಸಹಕಾರಿಯಾಗುವಂತೆ ಆಸ್ತಿ ತೆರಿಗೆ ನೀರಿನ ಕರ ವಸೂಲಿ ಮಾಡುವುದರ ಮೂಲಕ ಸಂಪನ್ಮೂಲವನ್ನು ಕ್ರೋಡೀಕರಿಸಿ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಸೂಚಿಸಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡುತ್ತಿದ್ದ ಅವರು, ಸಾರ್ವಜನಿಕರಿಗೆ ತೆರಿಗೆ ಎಂದರೆ ದೊಡ್ಡ ಹೊರೆ ಎಂಬ ಭಾವನೆ ಇದೆ.ಈ ಬಗ್ಗೆ ಜನರಲ್ಲಿ ಜಾಗೃತಿಮೂಡಿಸಿ ತೆರಿಗೆ ವಸೂಲಿ ಮಾಡಿ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗ ಮಾಡಬೇಕು ಎಂದರು. ಈವರೆಗೆ ಗುರುತಿಸದ ಆಸ್ತಿಗಳನ್ನು ಖಾಸಗಿ ಏಜೆನ್ಸಿಗಳ ಮೂಲಕ ಗುರುತಿಸಿ ತೆರಿಗೆ ವಸೂಲಿಗೆ ಕ್ರಮವಹಿಸಬೇಕು. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ನಲ್ಲಿ ನೀರಿನ ಸಂಪರ್ಕ ಪಡೆದಿರುವುದನ್ನು ಪತ್ತೆ ಹಚ್ಚಿ ಸಕ್ರಮಗೊಳಿಸುವಂತೆ ನಿರ್ದೇಶನ ನೀಡಿದರು.

ನಗರೋತ್ಥಾನ ಯೋಜನೆಯಲ್ಲಿ ಹಾಸನಕ್ಕೆ 30 ಕೋಟಿ ರೂ.ನೀಡಲಾಗಿದ್ದು, 26 ಕೋಟಿ ರೂ.ಖರ್ಚು ಮಾಡಲಾಗಿದೆ. ಕೇಂದ್ರ ಸರಕಾರದ ಅಮೃತ ಯೋಜನೆಯಡಿ ಹಾಸನಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ತಲಾ 100 ಕೋಟಿ ರೂ.ಗಳಂತೆಒಟ್ಟು 200 ಕೋಟಿ ರೂ. ನೀಡಲಾಗುತ್ತಿದ್ದು, ಕುಡಿಯುವ ನೀರು, ಸಂಪರ್ಕ , ರಸ್ತೆ, ಒಳಚರಂಡಿ ವ್ಯವಸ್ಥೆಗೆ ಈ ಹಣವನ್ನು ಬಳಸಿಕೊಳ್ಳಬಹುದಾಗಿದೆ ಎಂದರು. ಕೇಂದ್ರ ಸರಕಾರ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಹಾಸನ ನಗರವನ್ನು ಗುರುತಿಸಿ 5 ನೆ ಸ್ಥಾನ ನೀಡಿದ್ದು, ಇದು ಶ್ಲಾಘನಾರ್ಹ. ಮುಂದೆಯೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು. ನಗರ ಸ್ಥಳೀಯ ಸಂಸ್ಥೆಗಳಿಗೆ ಮಂಜೂರಾಗಿರುವ ಹುದ್ದೆಗಳಿಗೆ ಸಿಬ್ಬಂದಿಯನ್ನು ಎ.ಬಿ.ಸಿ. ವರ್ಗಕ್ಕೆ ಸೇರಿದ ಹುದ್ದೆಗಳಿಗೆ ಕೆ.ಪಿ.ಎಸ್.ಸಿ ಮೂಲಕ ಮೂರು ತಿಂಗಳೊಳಗೆ ನೇಮಿಸಲಾಗುವುದು. ಡಿ ಗ್ರೂಪ್ ಹುದ್ದೆಗಳ ನೇಮಕಾತಿಗೆ ಜಿಲ್ಲಾಧಿಕಾರಿಗೆ ಅನುಮತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ನಗರದ ಮಹಾವೀರ ವೃತ್ತದ ಕಾಮಗಾರಿಯನ್ನು 75 ಲಕ್ಷರೂ. ವೆಚ್ಚದಲ್ಲಿ ಮಾಡಲಾಗುತ್ತಿದ್ದು, ಕೆಲವು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ವಿಜಯ ನಗರದ 3.10 ಕೋಟಿ ರೂ. ವೆಚ್ಚದ ಮೊದಲ ಹಂತದ ಕಾಮಗಾರಿಯು ಮುಗಿಯುವ ಹಂತದಲ್ಲಿದ್ದು, ಎರಡನೆ ಹಂತಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. 8 ಕೋಟಿ ರೂ.ಗಳಿಗೆ ಮಂಜೂರಾತಿ ದೊರೆತ್ತಿದ್ದು, ಟೆಂಡರ್ ಕರೆಯುವ ಹಂತದಲ್ಲಿದೆ ಎಂದರು. ಎಸ್.ಎಂ.ಕೆ ನಗರಕ್ಕೆ ಸಂಬಂಧಿಸಿದ ಕಡತ ಸರಕಾರದ ಮುಂದಿದ್ದು, ಆದಷ್ಟು ಬೇಗ ಕೆಲಸ ಪ್ರಾರಂಭಿಸಲಾಗುತ್ತದೆ. ಸದರಿ ಬಡಾವಣೆಯ ನಿವೇಶನಕ್ಕಾಗಿ 9,950 ಅರ್ಜಿಗಳು ಬಂದಿವೆ ಎಂದರು.

ಪ್ರಾಧಿಕಾರದ ವ್ಯಾಪ್ತಿಯಲಿ 60:40 ರ ಅನುಪಾತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲ್ಲಿ 50:50 ರ ಅನುಪಾತದಲ್ಲಿ ಅಭಿವೃದ್ಧಿಪಡಿಸಲಾಗುವುದು. ಖಾಸಗಿ ಲೇಔಟ್‌ಗಳಿಗೂ ಪ್ರಾಧಿಕಾರದ ಲೇಔಟ್‌ಗಳಿಗೂ ಸ್ವಲ್ಪ ವ್ಯತ್ಯಾಸವಿರುವುದು ಕಂಡುಬರುತ್ತದೆ. ಇದನ್ನು ಸರಿದೂಗಿಸಲು ಕೆಲವು ಬದಲಾವಣೆ ತರಲಾಗುವುದು. ಖಾಸಗಿ ಲೇಔಟ್‌ಗಳನ್ನು ನಿರ್ಮಿಸುವವರು ಮೂಲಭೂತ ಸೌಕರ್ಯಗಳನ್ನು ಪೂರ್ಣಗೊಳಿಸಿದ ನಂತರ ನಿವೇಶನ ವಿತರಣೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಸಭೆಯಲ್ಲಿ ನಗರ ಸಭೆ ಅಧ್ಯಕ್ಷೆ ಶ್ರೀವಿದ್ಯಾ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎಸ್.ಎಂ.ಆನಂದ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment