ಕರ್ನಾಟಕ

ನಮ್ಮ ನೀರಿನಿಂದ ನಾವೇ ವಂಚಿತರು!

Pinterest LinkedIn Tumblr

Mahadayi-Mapಕರ್ನಾಟಕದ ಬೆಳಗಾವಿ ಜಿಲ್ಲೆಯ ಭೀಮಗಡದಲ್ಲಿ ಹುಟ್ಟಿ 29 ಕಿ.ಮಿ.ನಷ್ಟು ಹರಿದು ಗೋವಾದಲ್ಲಿ 52 ಕಿ.ಮಿ. ಹರಿಯುವ ಮಹದಾಯಿ ನದಿಯ ಮತ್ತು ಅದರ ಜಲಾನಯನ ಪ್ರದೇಶದಲ್ಲಿಯ ನೀರನ್ನು ಕರ್ನಾಟಕ ಉಪಯೋಗಿಸಲು ಇನ್ನೆಷ್ಟು ದಿನ ವಂಚಿತವಾಗಬೇಕು?

ಕಳಸಾ-ಬಂಡೂರಿ ನಾಲೆಗಳ ಜೋಡಣೆಗಾಗಿ ಉತ್ತರ ಕರ್ನಾಟಕ ಭಾಗದ ಜನರ ಹೋರಾಟ ಇಂದು, ನಿನ್ನೆಯದಲ್ಲ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ತಕ್ಕಮಟ್ಟಿಗೆ ಕೃಷಿಗೂ ನೀರಾವರಿ ನೀಡುವ ಉದ್ದೇಶದ ಈ ಯೋಜನೆಗಾಗಿ ದಶಕಗಳಿಂದ ಈ ಭಾಗದ ಜನ ಒತ್ತಾಯಿಸುತ್ತಲೇ ಬಂದಿದ್ದಾರೆ. ಈಗ ಮತ್ತೆ ಹೋರಾಟ ಭುಗಿಲೆದ್ದಿದೆ.

ಮಹದಾಯಿ ಮತ್ತು ಮಲಪ್ರಭಾ ನದಿಗಳ ಜಲಾನಯನ ಪ್ರದೇಶಗಳು ಹತ್ತಿರದಲ್ಲೇ ಇವೆ. ಕಳಸಾ (ಮಾನ್‌ ಹತ್ತಿರ ಹುಟ್ಟಿದೆ) ಮತ್ತು ಬಂಡೂರಿ (ಖಾನಾಪುರ ಬಳಿ ಅಮಗಾಂವ ಹತ್ತಿರ ಹುಟ್ಟಿದೆ) ಹಳ್ಳಗಳ ನೀರನ್ನು ಮಲಪ್ರಭಾ ನದಿಗೆ (ನೇರ್ಸಾ ಬಳಿ ಬಂಡೂರಿ ಮತ್ತು ಮಲಪ್ರಭಾ ಉಗಮದ ಕಣಕುಂಬಿ ಬಳಿ ಕಳಸಾದಿಂದ) ಸೇರಿಸಲು ಕಾಲುವೆಗಳ ನಿರ್ಮಾಣ ಯೋಜನೆಯಿದೆ. ಮಹದಾಯಿಯ ಜಲಾನಯನ ಪ್ರದೇಶ ಕರ್ನಾಟಕದಲ್ಲಿ 412 ಚ.ಕಿ.ಮೀ. ಹಾಗೂ ಗೋವಾದಲ್ಲಿ 1580 ಚ.ಕಿ.ಮಿ. ಇದೆ. ಆದ್ದರಿಂದ ಯಾವ ಯಾವ ರಾಜ್ಯಗಳು ಎಷ್ಟು ನೀರನ್ನು ಬಳಕೆಮಾಡಿಕೊಳ್ಳಬೇಕೆಂಬುದು ಇತ್ಯರ್ಥವಾಗಬೇಕಿದೆ. ಕುಡಿಯುವ ನೀರಿನ ಉಪಯೋಗಕ್ಕಾಗಿ ನೀರನ್ನು ಉಪಯೋಗಿಸಲು ಯಾವುದೇ ಅಡ್ಡಿ ಇರಬಾರದು ಎಂಬುದು ವರಿಷ್ಠ ನ್ಯಾಯಾಲಯದ ಬಹು ಹಿಂದಿನ ತೀರ್ಪಿನಲ್ಲೇ ಇದೆ. ಇಷ್ಟೆಲ್ಲ ಇದ್ದರೂ ಕರ್ನಾಟಕವು ಸ್ವಲ್ಪ$ ನೀರನ್ನೂ ಉಪಯೋಗಿಸದಂತಾಗಿರುವುದು ವಿಪರ್ಯಾಸ.

1978ರಲ್ಲಿ ಸಿದ್ಧವಾದ ಈ ಯೋಜನೆ ಇನ್ನೂ ಕಾರ್ಯಗತವಾಗದಿರಲು ಕಾರಣಗಳೇನು? ಇದಕ್ಕಿರುವ ಸಮಸ್ಯೆಯ ನಿವಾರಣೆಗಾಗಿ ಸಾಕಷ್ಟು ಪ್ರಯತ್ನಗಳು ನಡೆದಿವೆಯೇ? ಯಾರ್ಯಾರು ಉದಾಸೀನರಾಗಿದ್ದಾರೆ, ನಿರ್ಲಕ್ಷ್ಯ ತೋರುತ್ತಿದ್ದಾರೆ? ಆ ಕುರಿತು ಎಚ್ಚರಿಸುವ, ಅವರನ್ನು ಪ್ರಶ್ನಿಸುವ ಕಾರ್ಯವನ್ನು ಮಹದಾಯಿ ಕಳಸಾ – ಬಂಡೂರಿ ಹೋರಾಟ – ಬಂದ್‌ಗಳ ಜೊತೆಗೇ ಮಾಡಬೇಕಾಗಿದೆ.

ವರಿಷ್ಠ ನ್ಯಾಯಾಲಯ, ಪರಿಸರ ಇಲಾಖೆ, ನ್ಯಾಯಾಧಿಕರಣಗಳ ಮುಂದೆ ಪ್ರಕರಣಗಳಿವೆಯೆಂದಾಕ್ಷಣ ಎಲ್ಲ ನೀರನ್ನೂ ಗೋವಾ ಮಾತ್ರ ಬಳಸಬೇಕೇ? ಕರ್ನಾಟಕವು ಸ್ವಲ್ಪವನ್ನೂ ಬಳಸಬಾರದೇ? ಇದು ನ್ಯಾಯ ನಿರ್ಣಯದಲ್ಲಿಯ ವಿಳಂಬದ ದುರುಪಯೋಗವೆನಿಸುವುದಿಲ್ಲವೇ?

ಕೇಂದ್ರ ಸರ್ಕಾರದ ನಿರಾಸಕ್ತಿ

ಯೋಜನೆಗೆ ಗೋವಾ ಅಡ್ಡಿಪಡಿಸುತ್ತಿರುವುದರಿಂದ ಇದೊಂದು ಅಂತಾರಾಜ್ಯ ನೀರಿನ ವಿವಾದ. ಎರಡು ರಾಜ್ಯಗಳ ನಡುವೆ ವಿವಾದ ಹುಟ್ಟಿಕೊಂಡ ಸಂದರ್ಭದಲ್ಲಿ ಅದನ್ನು ಬಗೆಹರಿಸಲು ಯತ್ನಿಸುವುದು ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಕೆಲಸ. ಆದರೆ, ಕರ್ನಾಟಕದ ಸರ್ವಪಕ್ಷ ನಿಯೋಗ ಈ ನಿಟ್ಟಿನಲ್ಲಿ ತಮ್ಮನ್ನು ಭೇಟಿ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಆಶಾದಾಯಕ ಭರವಸೆಯನ್ನೇನೂ ನೀಡಿಲ್ಲ. ಗೋವಾ ಜೊತೆಗೆ ಒಮ್ಮತ ಮೂಡಿಸಿಕೊಳ್ಳುವ ಹೊಣೆಯನ್ನು ಅವರು ಕರ್ನಾಟಕದ ಹೆಗಲಿಗೇ ವರ್ಗಾಯಿಸಿದ್ದಾರೆ. ಅಂದರೆ ಕೇಂದ್ರ ಸರ್ಕಾರಕ್ಕೆ ಇದರಲ್ಲಿ ಆಸಕ್ತಿಯಿಲ್ಲ ಎಂದರ್ಥವೇ? ಹೌದಾದರೆ, ರಾಜ್ಯಗಳ ನಡುವಿನ ವಿವಾದ ಬಗೆಹರಿಸಲು ನಿರಾಸಕ್ತಿ ತೋರಿಸುವುದು ಕೇಂದ್ರ ಸರ್ಕಾರದ ಕಡೆಯಿಂದಾಗುವ ಲೋಪವಾಗುತ್ತದೆ.

ಯಾರ್ಯಾರು ಏನು ಮಾಡಬೇಕು?

1 ಪರಿಸರ ಇಲಾಖೆ: ಕರ್ನಾಟಕ ಸರ್ಕಾರ 2006ರಲ್ಲಿ ಪ್ರಾರಂಭಿಸಿದ ನಾಲಾ ನಿರ್ಮಾಣ ಯೋಜನೆಗೆ ತಡೆ ನೀಡಲು 2006 ನವೆಂಬರ್‌ 27ರಂದು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗಬೇಕಾಗಿರುವ ನಾಲಾದ ಭಾಗಗಳಿಗೆ ಒಪ್ಪಿಗೆ ನೀಡಲು ಪರಿಸರ ಇಲಾಖೆಗೆ ಒತ್ತಾಯ ತರಬೇಕಾಗಿದೆ. ಮಹದಾಯಿಗೆ ಡ್ಯಾಮ್‌ ನಿರ್ಮಾಣವಾಗಬೇಕಾದರೆ, ಪರಿಸರ ಇಲಾಖೆ ಕರಾರುಗಳನ್ನು ಹಾಕಿ ಅನುಮತಿ ನೀಡಬೇಕು. ಪರಿಸರದ ನೆಪವೊಡ್ಡಿ ಮಾನವನಿಗೆ, ಕೃಷಿಗೆ ಅವಶ್ಯವಿರುವ ನೀರನ್ನು ಉಪಯೋಗಿಸದಂತೆ ಮಾಡುವದು ಅಸಮಂಜಸ.

2 ಕರ್ನಾಟಕ ಸರ್ಕಾರ: ಮೇಲ್ಕಾಣಿಸಿದ ನಾಲಾ, ಆಣೆಕಟ್ಟು ನಿರ್ಮಾಣಕ್ಕೆ ಇನ್ನೂ ಅವಶ್ಯವಿರುವ ಹಣವನ್ನು ಈಗಲೇ ಪ್ರತ್ಯೇಕವಾಗಿ ತೆಗೆದಿಡಬೇಕು. ಅನುಮತಿ ಬಂದ ಕೂಡಲೇ ಕಾರ್ಯ ಕೈಕೊಳ್ಳುವ ಭರವಸೆ ನೀಡಬೇಕು. ವಿವಿಧೆಡೆ ಸರಿಯಾಗಿ ವಾದ ನಿರೂಪಿಸಿ ನ್ಯಾಯಕ್ಕಾಗಿ ಪ್ರಯತ್ನಿಸುವುದು ಕರ್ನಾಟಕ ರಾಜ್ಯ ಸರ್ಕಾರದ ಆದ್ಯ ಕರ್ತವ್ಯ. ಇಷ್ಟೆಲ್ಲ ಜನ ಹೋರಾಟ ನಡೆದರೂ ಕೂಡ ರಾಜ್ಯ ಸರ್ಕಾರ ತಾನು ಮಾಡಿದ ಪ್ರಯತ್ನ ಹಾಗೂ ಕೈಗೊಳ್ಳಲಿರುವ ಕ್ರಮಗಳ ಚಿತ್ರವನ್ನು ಪಾರದರ್ಶಕವಾಗಿ ಜನರ ಮುಂದೆ ಇಟ್ಟಿಲ್ಲ.

3 ಗೋವಾ ರಾಜ್ಯ: ಕರ್ನಾಟಕಕ್ಕೆ ಸ್ವಲ್ಪವಾದರೂ ನೀರನ್ನು ಉಪಯೋಗಿಸುವ ಹಕ್ಕಿದೆ ಎಂಬುದನ್ನು ಮನಗಂಡು, ಕರ್ನಾಟಕವು ಕನಿಷ್ಠ ಎಂದರೆ ಎಷ್ಟು ನೀರನ್ನು ಉಪಯೋಗಿಸಬಹುದು? ಮತ್ತು ಯಾವ ಯಾವ ತಿಂಗಳಲ್ಲಿ ಉಪಯೋಗಿಸಬಹುದು ಎಂಬುದರ ಕುರಿತು ಶೀಘ್ರವೇ ನಿರ್ಣಯಕ್ಕೆ ಬರಬೇಕು. ಈ ವಿಷಯದಲ್ಲಿ ಗೋವಾ ಸರ್ಕಾರ ತ್ವರಿತವಾಗಿ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು.

4 ಕೇಂದ್ರ ಜಲಸಂಪನ್ಮೂಲ ಸಚಿವಾಲಯ: ನದಿ ಜೋಡಣೆಯು ಸರ್ಕಾರ ಒಪ್ಪಿಕೊಂಡ ಯೋಜನೆ. ಹಾಗಾಗಿ ಮಹದಾಯಿ-ಮಲಪ್ರಭಾ ಪ್ರದೇಶಕ್ಕೆ ಅನ್ವಯಿಸುವಂತೆ ಏನು ನಿರ್ಧಾರ ಅಥವಾ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತದೆ, ಅದರ ನಿಲುವೇನು ಎಂಬುದನ್ನು ತಿಳಿದುಕೊಳ್ಳಬೇಕು.

5 ನ್ಯಾಯಾಧಿಕರಣ: 2010 ನವೆಂಬರ್‌ 16ರಂದು ನೇಮಕಗೊಂಡ ನ್ಯಾಯಾಧಿಕರಣ ಐಖRಗಈ ಕಾನೂನಿನ ಕಲಂ 5(2)ರ ಪ್ರಕಾರ ಮೂರು + ಎರಡು (ಒಟ್ಟು ಐದು ವರ್ಷಗಳಲ್ಲಿ ನಿರ್ಣಯ ನೀಡಬೇಕು. ಈ ವರ್ಷ ನ್ಯಾಯಾಧಿಕರಣ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಲ್ಲದೆ ಗೋವಾ ರಾಜ್ಯಕ್ಕೆ ಸಹಕರಿಸುವಂತೆ ವಿನಂತಿಸಬೇಕು. ಇಲ್ಲವಾದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಒತ್ತಾಯಿಸಬೇಕು.

6 ನ್ಯಾಯಾಧಿಕರಣದ ಮಧ್ಯಂತರ ತೀರ್ಪು: ನ್ಯಾಯಾಧಿಕರಣವು ಎಪ್ರಿಲ್‌ 18, 2014ರಂದು ಈಗಾಗಲೇ ಮಧ್ಯಂತರ ಆಜ್ಞೆ ಮಾಡಿ ಕಳಸಾ ಬಂಡೂರಿ ನಾಲೆಗಳಿಗೆ ಜಲಾನಯನ ಪ್ರದೇಶದಿಂದ ನೀರು ಹರಿಯದಂತೆ ಗೋಡೆ ಕಟ್ಟುವಂತೆ ಮಾಡಿದೆ. ಈಗ ಅದನ್ನು ಪುನರ್‌ಪರಿಶೀಲಿಸುವ ಕಾಲ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ, ಕಾಲ, ಪ್ರದೇಶಗಳಲ್ಲಿ ಬಹಳ ಅನಿಯಮಿತತೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪೂರ್ಣ ಆದೇಶ ನೀಡುವ ಮೊದಲು, ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಈ ವರ್ಷ ಮಳೆ ಕಡಿಮೆ ಆಗಿರುವುದನ್ನು ಗಮನಕ್ಕೆ ತಂದು ತಕ್ಷಣ ತಡೆಗೋಡೆ ತೆಗೆಯಲು ಆದೇಶ ನೀಡಿ ಅಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಅಳತೆ ಮಾಡಿ ಹರಿಯುವಂತೆ ಮಾಡಲು ಒತ್ತಾಯಿಸಬೇಕು.

ರಾಜಕೀಯ ಹೋರಾಟವಲ್ಲ

ಈ ಹಿಂದೆ ಎನ್‌ಡಿಎ ಸರ್ಕಾರ ತನ್ನ ನಿರ್ಧಾರಕ್ಕೆ (30-4-2002) ತಾನೇ ತಡೆಯೊಡ್ಡಿತ್ತು. (19-9-2002). ಕಾಂಗ್ರೆಸ್‌ ಮುಖಂಡರೊಬ್ಬರು ಸಂಪೂರ್ಣ ಗೋವಾ ಪರ ಹೇಳಿಕೆ ನೀಡಿದ್ದರು. ವರಿಷ್ಠ ನ್ಯಾಯಾಲಯದಲ್ಲಿ ಗೋವಾ ಸರ್ಕಾರದ ಓಎಸ್‌. 4/ 2006 20-2-2011ರಂದು ವಜಾ ಆಗಿದೆ. ಈಗ ಎಲ್ಲ ರಾಜಕೀಯ ಪಕ್ಷದವರು ಹಿಂದಿನದೆಲ್ಲವನ್ನು ಮರೆತು ಆತ್ಮಾವಲೋಕನ ಮಾಡಿಕೊಂಡು ಈ ಸಮಸ್ಯೆ ಕುರಿತು ಸರಿಯಾದ ನಿರ್ಧಾರ ಪ್ರಕಟಿಸಲು ಇದು ಸಕಾಲ. ಸಾಮಾನ್ಯ ಜನತೆ ಇಷ್ಟೊಂದು ವರ್ಷಗಳಿಂದ ಹೋರಾಟ ಮಾಡುತ್ತಿದ್ದುದನ್ನು ಬದಿಗೆ ಸರಿಸಿ ರಾಜಕಾರಣಿಗಳು ತಾವು ಮಾತ್ರ ಅದರ ಯಶಸ್ಸಿಗಾಗಿ ಕಾರಣರೆಂದು ತೋರಿಸಿಕೊಳ್ಳಲು ಪ್ರಯತ್ನಿಸುವುದು ಬೇಡ. ಪಕ್ಷಭೇದಗಳನ್ನು ಮರೆತು ಸಾಮಾನ್ಯರ ಹೋರಾಟದಲ್ಲಿ ತಾವೂ ಸಾಮಾನ್ಯರಾಗಿ ಪಾಲ್ಗೊಳ್ಳಲಿ. ಸರ್ಕಾರದ ಮಟ್ಟದಲ್ಲಿ ತಾವು ಕೈಕೊಳ್ಳಬೇಕಾದ ಕಾರ್ಯಗಳನ್ನು ಮಾಡುವತ್ತ ಗಮನಹರಿಸಲಿ.

ಕರ್ನಾಟಕದಲ್ಲಿ ಮಹದಾಯಿ ನದಿಗೆ ಹರಿದುಹೋಗುತ್ತಿರುವ ನೀರಿನಲ್ಲಿ ಕರ್ನಾಟಕದಲ್ಲಿ ಸಂಗ್ರಹವಾದ ನೀರೂ ಇರುವ ಹಿನ್ನೆಲೆಯಲ್ಲಿ, ಇಷ್ಟು ವರ್ಷಗಳಿಂದ ಕರ್ನಾಟಕ ಸ್ವಲ್ಪವೂ ಅದನ್ನು ಉಪಯೋಗಿಸದಂತೆ ಆಗಿರುವುದನ್ನು ಪರಿಗಣಿಸಿ ಈಗ ಈ ಯೋಜನೆಯಲ್ಲಿ ಆಸಕ್ತರಾದವರೂ, ಫ‌ಲಾನುಭವಿಗಳಾಗುವವರೂ ಸಂಬಂಧಪಟ್ಟವರ ಮೇಲೆ ವಿವಿಧ ವಿಧಾನಗಳ ಮೂಲಕ ಒತ್ತಡ ತರಬೇಕು.

ಕಳಸಾ-ಬಂಡೂರಿ ನಾಲೆಗಾಗಿ ಜನರು ಇಷ್ಟೆಲ್ಲ ಹೋರಾಟ ನಡೆದರೂ ರಾಜ್ಯ ಸರ್ಕಾರ ತಾನು ಮಾಡಿದ ಪ್ರಯತ್ನ ಹಾಗೂ ಕೈಗೊಳ್ಳಲಿರುವ ಕ್ರಮಗಳ ಚಿತ್ರವನ್ನು ಪಾರದರ್ಶಕವಾಗಿ ಜನರ ಮುಂದೆ ಇಟ್ಟಿಲ್ಲ. ಯೋಜನೆಗೆ ಅವಶ್ಯವಿರುವ ಹಣವನ್ನು ಈಗಲೇ ಪ್ರತ್ಯೇಕವಾಗಿ ತೆಗೆದಿರಿಸಿ, ಅನುಮತಿ ಬಂದ ಕೂಡಲೇ ಕಾರ್ಯ ಕೈಕೊಳ್ಳುವ ಭರವಸೆಯನ್ನಾದರೂ ಈಗ ನೀಡಬೇಕು.
-ಧಿ- ರವೀಂದ್ರ ಆಕಳವಾಡಿ, ಧಾರವಾಡ
-ಉದಯವಾಣಿ

Write A Comment