ಕರ್ನಾಟಕ

ಚಿಕ್ಕಬಳ್ಳಾಪುರ: ಆಧುನಿಕ ಸಮಾಜದಲ್ಲೂ ಕೊನೆಗೊಳ್ಳದ ಮಹಿಳಾ ದೌರ್ಜನ್ಯ; ಮಹಿಳೆಯರು ಮತ್ತು ಮಕ್ಕಳ ಅದಾಲತ್‌ನಲ್ಲಿ ಡಿಸಿ ವಿಷಾದ

Pinterest LinkedIn Tumblr

mahile__________________________ಚಿಕ್ಕಬಳ್ಳಾಪುರ, ಆ.26: ಭಾರತದ ಪುರಷ ಪ್ರಧಾನ ಸಮಾಜದಲ್ಲಿ ಅನಾದಿ ಕಾಲದಿಂದಲೂ ಮಹಿಳೆಯರು ಶೋಷಣೆ, ತುಳಿತಕ್ಕೆ ಒಳಗಾಗುತ್ತಿದ್ದು, ಮುಂದುವರಿದ ಆಧುನಿಕ ದಿನಗಳಲ್ಲಿಯೂ ಶೋಷಣೆ ಮುಂದುವರಿಯುತ್ತಿರುವುದು ವಿಪರ್ಯಾಸ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ವಿಷಾದ ವ್ಯಕ್ತಪಡಿಸಿದರು.

ನಗರದ 7ನೆ ವಾರ್ಡಿನ ನಿಮ್ಮಾಕಲಕುಂಟೆಯಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಮಹಿಳೆಯರ ಮತ್ತು ಮಕ್ಕಳ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ ಹಾಗೂ ಜಾಗೃತಿ ಕಾರ್ಯಕ್ರಮಗಳು ಮನೆ ಮನೆಗೂ ತಲುಪುತ್ತಿದ್ದರೂ, ನಿವಾರಣೆಯಾಗಬೇಕಾದ ಸಮಸ್ಯೆಗಳು ಇನ್ನೂ ಜೀವಂತವಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸುರೇಖಾ ವಿ. ಪ್ರಕಾಶ್ ಮಾತನಾಡಿ, ಬಾಲ್ಯವಿವಾಹ, ಶಿಶು ಮಾರಾಟ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ, ದೇವದಾಸಿ ಪದ್ಧತಿಯ ಅನುಸರಣೆ ಮತ್ತು ಬೆತ್ತಲೆ ಸೇವೆ ಇತ್ಯಾದಿ ವಿಷಯಗಳಲ್ಲಿ ಉದ್ಭ್ಬವಿಸಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಪರಿಣಾಮಕಾರಿಯಾಗಿ ಇತ್ಯರ್ಥಪಡಿಸಲು ಮಹಿಳೆಯರ ಮತ್ತು ಮಕ್ಕಳ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಮಕ್ಕಳ ರಕ್ಷಣಾಧಿಕಾರಿ ಲಕ್ಷ್ಮೀದೇವಮ್ಮ ಮಾತನಾಡಿ, ಮುಂದಿನ ಪ್ರಜೆಗಳಾದ ಮಕ್ಕಳ ಪಾಲನೆಯಲ್ಲಿ ಪೋಷಕರು ಮುತುವರ್ಜಿವಹಿಸಿ ಅವರ ಉತ್ತಮ ಭವಿಷ್ಯಕ್ಕಾಗಿ ಮುಂದಾಗಬೇಕಿದೆ ಎಂದರು.
ಅದಾಲತ್‌ನಲ್ಲಿ ಭಾಗವಹಿಸಿದ್ದ ವಾರ್ಡ್‌ನ ಮಹಿಳೆಯರು, ಸೂಕ್ತ ರೀತಿಯಾಗಿ ಆಗದ ಕಸ ವಿಲೇವಾರಿ, ಕುಡಿಯುವ ನೀರು, ಒಳಚರಂಡಿ ಅವ್ಯವಸ್ಥೆ, ಬೀದಿ ದೀಪ, ಸೊಳ್ಳೆಗಳ ಕಾಟ ಸೇರಿದಂತೆ ಮೂಲ ಸಮಸ್ಯೆಗಳಿಗೆ ಸಂಬಂಧಿಸಿ ನಗರಸಭೆೆಯ ಕಾರ್ಯವೈಖರಿಯ ಬಗ್ಗೆ ಜಿಲ್ಲಾಧಿಕಾರಿ ಬಳಿ ಅಸಮಾಧಾನ ತೋಡಿಕೊಂಡರು.
ಚುನಾವಣೆಯ ನಂತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿ ಮತ ಪಡೆದ ಚುನಾಯಿತ ಪ್ರನಿಧಿಗಳಾಗಲೀ, ಅಧಿಕಾರಿಗಳಾಗಲೀ ವಾರ್ಡ್‌ನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಂದಾಗುತ್ತಿಲ್ಲ. ಅಲ್ಲದೆ, ಸರಕಾರದಿಂದ ಶೌಚಾಲಯಗಳನ್ನು ಕಟ್ಟಿಸಿಕೊಡುವುದಾಗಿ ಹೇಳಿ ಅರ್ಜಿಗಳನ್ನು ಪಡೆದ ಅಧಿಕಾರಿಗಳು ಇಂದಿಗೂ ಇತ್ತ ಸುಳಿಯಲೇ ಎಂದು ಮಹಿಳೆಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಹಿಳೆಯರ ಪ್ರಶ್ನೆಗಳಿಗೆ ಉತ್ತರಿಸಿದ ಪೌರಾಯುಕ್ತ ಗಂಗಾಧರಪ್ಪ, ಒಂದು ತಿಂಗಳೊಳಗೆ ವಾರ್ಡಿನ ಎಲ್ಲ ಕಸ ವಿಲೇವಾರಿ ಸಮಸ್ಯೆಗಳು ಇತ್ಯರ್ಥಗೊಳಿಸುವ ಭರವಸೆ ನೀಡಿದ ಅವರು, ಸ್ವಚ್ಛಭಾರತ್ ಅಭಿಯಾನದಡಿ ಶೌಚಾಲಯಗಳನ್ನು ನಿರ್ಮಿಸಿಕೊಡಲು ಅರ್ಜಿ ಸಲ್ಲಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗಸ್ವಾಮಿ, ಪೊಲೀಸ್ ವೃತ್ತ ನಿರೀಕ್ಷಕ ಬಾಲಾಜಿ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

Write A Comment