ಮೈಸೂರು: ಸಿಟ್ಟಿನ ಕೈಗೆ ಬುದ್ಧಿಕೊಟ್ಟರೆ ಯಡವಟ್ಟಾಗುತ್ತದೆ ಎಂಬುದಕ್ಕೆ ಇಲ್ಲಿದೆ ಉತ್ತಮ ಉದಾಹರಣೆ. ಆ ಹುಲಿಗೆ ತೀವ್ರ ಹಸಿವಾಗಿತ್ತು, ಸಿಟ್ಟು ಕೂಡ ಬಂದಿತ್ತು. ಇಂತಹ ಸಂದರ್ಭದಲ್ಲಿ ಚಿರತೆಯೊಂದು ಕೆಣಕಿದಾಗ ಹೇಗಾಗಬೇಡ, ಅದಕ್ಕೆ ಕೋಪ ನೆತ್ತಿಗೇರಿದೆ ಅಷ್ಟೇ, ಮುಂದೇನಾಯ್ತು ನೀವೇ ಓದಿ,
ಹಸಿದು ರೋಷಗೊಂಡಿದ್ದ ಹುಲಿಯೊಂದನ್ನು ಚಿರತೆಯೊಂದು ಕೆಣಕಿದಾಗ ಅಟ್ಟಿಸಿಕೊಂಡು ಹೋದ ಹುಲಿ, ಚಿರತೆ ಸಿಗದಿದ್ದಾಗ ಸಿಟ್ಟಿಗೆ ಗೋಡೆಗೆ ಗುದ್ದಿಕೊಂಡು ಸಾವನ್ನಪ್ಪಿರುವ ಘಟನೆ ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನ ಕರಡಿ ಹಳ್ಳ ಪ್ರದೇಶದಲ್ಲಿ ನಡೆದಿದೆ. ರಾಷ್ಟ್ರೀಯ ಉದ್ಯಾನವನದ ಡಿ.ಬಿ. ಕುಪ್ಪೆ ವನ್ಯಜೀವಿ ವಲಯದಲ್ಲಿ ಶನಿವಾರ ಮಧ್ಯರಾತ್ರಿ ಹುಲಿಯೊಂದು ಚಿರತೆಯನ್ನು ಅಟ್ಟಾಡಿಸಿಕೊಂಡು ಬಂದಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಚಿರತೆ, ಅರಣ್ಯ ಕಾವಲುಗಾರ ಶೇಖರಯ್ಯ ಅವರ ಅರಣ್ಯ ಪಾಲಕರ ಕ್ವಾಟ್ರಸ್‌ನ ಮನೆ ಮೇಲೇರಿದೆ.
ಆದರೆ ಮನೆ ಹತ್ತಲು ಆಗದ ಹಸಿದ ಹುಲಿ ರೋಷಗೊಂಡು ಹಾರಲು ಕಿಟಕಿ ಹಿಡಿದಿದೆ. ಕಿಟಕಿ ಗಾಜು ಹೊಡೆದು ಹಾಕಿದೆ. ನಂತರ ಕೋಪಗೊಂಡು ಮನೆಯ ಗೋಡೆಗೆ ಗುದ್ದಿ ತನ್ನ ಉಗುರು ಹಾಗೂ ಹಲ್ಲನ್ನು ಮುರಿದುಕೊಂಡಿದೆ. ಗಲಾಟೆಯಿಂದ ಎಚ್ಚೆತ್ತ ಅರಣ್ಯ ಪಾಲಕ ಶಬ್ಧ ಮಾಡಿದಾಗ ಚಿರತೆ ಓಡಿ ಹೋಗಿದ್ದು, ಗಾಯಗೊಂಡಿದ್ದ ಹುಲಿ ಕರಡಿ ಹಳ್ಳದ ಬಳಿ ಪ್ರಾಣ ಬಿಟ್ಟಿದೆ. ಹೀಗೆ ಸಿಟ್ಟಿನ ಕೈಗೆ ಬುದ್ದಿಕೊಟ್ಟ ತಪ್ಪಿಗೆ ಹುಲಿ ಸಾವು ಕಂಡಿದೆ. ಅರಣ್ಯ ಇಲಾಖೆಯವರು ತೀವ್ರ ಹುಡುಕಾಟ ನಡೆಸಿದಾಗ ಕರಡಿ ಹಳ್ಳದ ಬಳಿ ಹುಲಿ ಸಾವನ್ನಪ್ಪಿದ್ದು ಪತ್ತೆಯಾಗಿದೆ. ಶೇಖರಯ್ಯನ ಮನೆಯ ಹತ್ತಿರ ಮುರಿದು ಬಿದ್ದಿದ್ದ ಹುಲಿಯ ಹಲ್ಲು ಮತ್ತು ಉಗುರು ಹೋಲಿಕೆಯಾಗಿದೆ. ಈ ಹುಲಿ ಸುಮಾರು 7 ವರ್ಷ ವಯಸ್ಸಿನ ಗಂಡು ಹುಲಿಯಾಗಿದೆ.