ಕರ್ನಾಟಕ

ನರಹಂತಕ ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ 6 ಮಂದಿ ಸಿಬ್ಬಂದಿಗೆ ಬಹುಮಾನ, ಉಚಿತ ನಿವೇಶನ ಹಾಗೂ ವೇತನ ಬಡ್ತಿ

Pinterest LinkedIn Tumblr

veerappan

ಬೆಂಗಳೂರು, ಆ.20: ಕಾಡುಗಳ್ಳ, ನರಹಂತಕ ವೀರಪ್ಪನ್ ಮತ್ತು ಆತನ ತಂಡದ ವಿರುದ್ಧ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಅರಣ್ಯ ಇಲಾಖೆಯ ಆರು ಮಂದಿ ಸಿಬ್ಬಂದಿಗೆ ಸರ್ಕಾರ ನಗದು ಬಹುಮಾನ, ಉಚಿತ ನಿವೇಶನ ಹಾಗೂ ವೇತನ ಬಡ್ತಿ ಸೌಲಭ್ಯವನ್ನು ನೀಡಲು ಆದೇಶಿಸಿದೆ.

ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಕಾರ್ಯನಿರ್ವಹಿಸಿದ ಅರಣ್ಯ ರಕ್ಷಕ ಎಂ.ಸಂತೋಷ್‌ಕುಮಾರ್, ಅರಣ್ಯ ವೀಕ್ಷಕರಾದ ಎಂ.ಆರ್.ಸುಬ್ರಹ್ಮಣ್ಯ, ಮಾಣಿಕ್ಯ ಅವರಿಗೆ 3 ಲಕ್ಷ ರೂ. ನಗದು ಬಹುಮಾನ, ಜಿಲ್ಲಾ ಮಟ್ಟದಲ್ಲಿ ನಿವೇಶನ ಹಾಗೂ ಒಂದು ಬಾರಿ ವೇತನ ಬಡ್ತಿ ಪಡೆಯಲಿದ್ದಾರೆ.

ದಿನಗೂಲಿ ನೌಕರ ದುಮ್ಮಡ ಎಂಬುವರಿಗೆ ವೇತನ ಬಡ್ತಿ ಹೊರತುಪಡಿಸಿ ಉಳಿದ ಬಹುಮಾನದ ಸೌಲಭ್ಯಗಳು ದೊರೆಯಲಿವೆ. ಒಂದರಿಂದ ಎರಡು ವರ್ಷಗಳ ಅವಧಿಗೆ ಕರ್ತವ್ಯ ನಿರ್ವಹಿಸಿರುವ ದಿನಗೂಲಿ ನೌಕರರಾದ ರಾಜು, ಹುಚ್ಚಯ್ಯ ಎಂಬುವರಿಗೆ ಒಂದು ಲಕ್ಷ ರೂ. ನಗದು ಬಹುಮಾನ ಹಾಗೂ ಉಚಿತ ನಿವೇಶನ ದೊರೆಯಲಿದೆ. ನಿವೇಶನ ಲಭ್ಯವಿಲ್ಲದಿದ್ದಲ್ಲಿ, ಬಿಡಿಎ ಪ್ರತಿ ಚದರಡಿಗೆ ನಿಗದಿಪಡಿಸಿರುವ 210ರೂ.ನಂತೆ. ನಿವೇಶನದ ಹಣ ಪಾವತಿಸಲು ಆದೇಶಿಸಲಾಗಿದೆ.

ಆದರೆ 166 ಅರಣ್ಯ ಇಲಾಖೆ ಸಿಬ್ಬಂದಿಗೆ ಬಹುಮಾನ ನೀಡಲು ಸರ್ಕಾರ ನಿರಾಕರಿಸಿದೆ. ಬಹುಮಾನಕ್ಕೆ ಅರ್ಹವಾಗಿರುವ ಆರು ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ವೀರಪ್ಪನ್ ಮತ್ತು ಆತನ ತಂಡದ ಮೂವರು ಸದಸ್ಯರನ್ನು ಸಂಹಾರ ಮಾಡಿದ 2004, ಅ.18ರಂದು ವೀರಪ್ಪನ್ ವಿರುದ್ಧದ ವಿಶೇಷ ಕಾರ್ಯಾಚರಣೆ ಪಡೆಯಲ್ಲಿ ಅಧಿಕೃತವಾಗಿ ಮತ್ತು ಅವಿರತವಾಗಿ ಕರ್ತವ್ಯ ನಿರ್ವಹಿಸಿರುವ ಬಗ್ಗೆ ಅಂದಿನ ವಿಶೇಷ ಕಾರ್ಯಾಚರಣೆ ಪಡೆಯ ಕಮಾಂಡರ್ ನೀಡಿರುವ ವರದಿ ಆಧರಿಸಿ ಬಹುಮಾನ ವನ್ನು ಸರ್ಕಾರ ಮಂಜೂರು ಮಾಡಿದೆ.

2006ರ ಜು.27ರಂದು ಅರಣ್ಯ ಇಲಾಖೆಯ 51 ಅಧಿಕಾರಿ ಮತ್ತು ಸಿಬ್ಬಂದಿಗೆ ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಬಹುಮಾನ ನೀಡಲಾಗಿದೆ. ಹೀಗಾಗಿ ಮತ್ತೆ 146 ಅರಣ್ಯ ಇಲಾಖೆ ಸಿಬ್ಬಂದಿಗೆ ಬಹುಮಾನ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ತಿರಸ್ಕರಿಸಿದೆ.

Write A Comment