ಚಿಕ್ಕಮಗಳೂರು: ಆಟವಾಡುತ್ತಿದ್ದ ಬಾಲಕನನ್ನು ಅಪರಿಚಿತರು ಅಪಹರಿಸಿದ್ದರು. ಬಾಲಕನಿಗೆ ಏನಾಗುತ್ತಿದೆ ಎಂದು ತಿಳಿಯದಾಗಿತ್ತು. ಆದರೆ ಒಂದಷ್ಟು ದೂರ ಹೋದ ನಂತರ ಅಪಹರಣಕಾರರು ಪೋನ್ ನಲ್ಲಿ ಮಾತನಾಡುವಾಗ ತನ್ನನ್ನು ಅಪಹರಿಸಿರುವುದು ಬಾಲಕನ ಅರಿವಿಗೆ ಬಂದಿದೆ. ಆಗ ಅಪಹರಣಕಾರರ ಕೈ ಕಚ್ಚಿದ ಬಾಲಕ ಅವರಿಂದ ತಪ್ಪಿಸಿಕೊಂಡು ಬಂದಿದ್ದಾನೆ.
ಚಿಕ್ಕಮಗಳೂರಿನ ಬಸವನಹಳ್ಳಿಯ ಶಾಲೆಯ ಆಟದ ಮೈದಾನದಲ್ಲಿ ಆಟವಾಡುತ್ತಿದ್ದ ಇಮ್ರಾನ್(12) ಎಂಬ ಬಾಲಕನನ್ನು ಗೂಡ್ಸ್ ಆಟೋದಲ್ಲಿ ಬಂದ ಮೂವರು ಯುವಕರು ಅಪಹರಿಸಿದ್ದರು. ವಾಹನ ಬೈಪಾಸ್ ರಸ್ತೆ ಮೂಲಕ ಸಾಗಿ ರಾಮನಹಳ್ಳಿ ಹೊಸಕೋಟೆ ಬಳಿ ಬಂದಾಗ ಪೋನ್ ಬಂದಿದೆ. ಆಗ ಅಪಹರಣಕಾರ ಬಾಲಕನನ್ನು ಅಪಹರಿಸಲಾಗಿದೆ ಎಂದು ಅತ್ತ ಕಡೆಯವರಿಗೆ ಹೇಳಿದ್ದಾನೆ.
ಆದರೆ ಧೃತಿಗೆಡದ ಬಾಲಕ ಆತನ ಕೈಕಚ್ಚಿ ಆಟೋದಿಂದ ನೆಗೆದು ಕೆಳಗೆ ಬಿದ್ದಿದ್ದಾನೆ. ಅಲ್ಲೇ ಇದ್ದ ಗ್ರಾಮಸ್ಥರು ಬಾಲಕನ ಕೂಗು ಕೇಳಿ ಹತ್ತಿರ ಬಂದಿದ್ದು, ಅಪಹರಣಕಾರರು ಪರಾರಿಯಾಗಿದ್ದಾರೆ. ಬಾಲಕನನ್ನು ರಕ್ಷಿಸಿದ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗ ಅಪಹರಣಕಾರರ ಪತ್ತೆಗೆ ಬಲೆ ಬೀಸಿದ್ದಾರೆ.