ಬೆಂಗಳೂರು: ಭಾನುವಾರ ಮಧ್ಯಾಹ್ನವಷ್ಟೇ ಮಾನಸಿಕ ಅಸ್ವಸ್ಥ ಕೈದಿಯೊಬ್ಬ ಪೊಲೀಸರ ರೈಫಲ್ ಕಸಿದುಕೊಂಡು ಮನಬಂದಂತೆ ಗುಂಡು ಹಾರಿಸಿ ನಂತರ ನಡೆದ ಕಾರ್ಯಾಚರಣೆಯಲ್ಲಿ ಹತನಾದ ಬಳಿಕ ರಾತ್ರಿ ಬಾರ್ ಒಂದರಲ್ಲಿ ಗುಂಡಿನ ದಾಳಿ ನಡೆಸಲಾಗಿದೆ.
ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರೆಸಿಡೆನ್ಸಿ ರಸ್ತೆಯ ‘ಟೈಮ್ಸ್ ಬಾರ್’ ಗೆ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಬಾರ್ ಮಾಲೀಕ ಚೇತನ್ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಈ ಪೈಕಿ ಒಂದು ಗುಂಡು ಚೇತನ್ ಅವರ ಬೆನ್ನಿಗೆ ತಗುಲಿದ್ದು, ಅವರನ್ನು ಈಗ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ರಾತ್ರಿ 10-30 ರ ಸುಮಾರಿಗೆ ಬಾರ್ ಗೆ ಗ್ರಾಹಕರಂತೆ ಬಂದ ದುಷ್ಕರ್ಮಿಗಳು ಡ್ರಿಂಕ್ಸ್ ಆರ್ಡರ್ ಮಾಡಿದ್ದಾರೆ. ಬಾರ್ ಮಾಲೀಕ ಚೇತನ್ ಕಾಣಿಸಿಕೊಳ್ಳುತ್ತಿದ್ದಂತೆಯೇ ತಮ್ಮ ಬಳಿ ಇದ್ದ ರಿವಾಲ್ವರಿನಿಂದ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಒಂದು ಗುಂಡು ಚೇತನ್ ಅವರ ಬೆನ್ನಿಗೆ ಹೊಕ್ಕಿದೆ ಎನ್ನಲಾಗಿದೆ. ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಬಾರ್ ಸಿಬ್ಬಂದಿ ದುಷ್ಕರ್ಮಿಗಳನ್ನು ಹಿಡಿಯಲು ಯತ್ನಿಸಿದ್ದು, ಆದರೂ ಅವರು ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಬಾರ್ ಮಾಲೀಕ ಚೇತನ್ ಮಂಗಳೂರು ಮೂಲದವರೆಂದು ಹೇಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಅಶೋಕ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.