ಹಳಿಯಾಳ: ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಯುವಕನೊಬ್ಬ ಹಾಕಿದ್ದ ಸ್ಟೇಟಸ್ ಗೆ ಕೆಲವರು ಕಮೆಂಟ್ ಮಾಡಿದ್ದು, ಅದೀಗ ಬಂದ್ ಘೋಷಣೆಯಾಗುವಂತಹ ವಾತಾವರಣ ನಿರ್ಮಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ರೆಹಾನ್ ಮಲ್ಲಿಕ್ ಎಂಬಾತ ಮುಂಬೈ ಸರಣಿ ಸ್ಪೋಟದ ಅಪರಾಧಿ ಯಾಕೂಬ್ ಮೆಮನ್ ನನ್ನು ಗಲ್ಲಿಗೇರಿಸಿದ್ದರ ಕುರಿತು ತನ್ನ ಫೇಸ್ ಬುಕ್ ಪುಟದಲ್ಲಿ ಆಗಸ್ಟ್ 13 ರಂದು ಪ್ರತಿಕ್ರಿಯಿಸಿ ಇದಕ್ಕೆ ಸೇಡು ತೀರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದ. ಅಲ್ಲದೇ ಯಾಕೂಬ್ ಮೆಮನ್ ಫೋಟೋದ ಜೊತೆ ತನ್ನ ಫೋಟೋವನ್ನೂ ಹಾಕಿಕೊಂಡಿದ್ದ.
ಈ ಕುರಿತು ದೂರು ದಾಖಲಾದ ಹಿನ್ನೆಲೆಯಲ್ಲಿ ಹಳಿಯಾಳ ಪೊಲೀಸರು ಆಗಸ್ಟ್ 14 ರಂದು ರೆಹಾನ್ ಮಲ್ಲಿಕ್ ನನ್ನು ಬಂಧಿಸಿದ್ದರು. ಆದರೆ ರೆಹಾನ್ ಮಲ್ಲಿಕ್ ಹಾಕಿದ್ದ ಪೋಸ್ಟ್ ಗೆ ಇನ್ನೂ 10 ಮಂದಿ ಕಮೆಂಟ್ ಮಾಡಿದ್ದು ಅವರನ್ನೂ ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಇಂದು ಹಳಿಯಾಳ ಬಂದ್ ಗೆ ಕರೆ ನೀಡಿದ್ದು, ಉತ್ತಮ ಬೆಂಬಲ ವ್ಯಕ್ತವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಈಗ ಹಳಿಯಾಳ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.