ಬೆಂಗಳೂರು: ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಇಂದು ವಜಾಗೊಳಿಸಿದೆ.
ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಜಾಮೀನು ಅರ್ಜಿಯನ್ನು ವಜಾಗೊಳಿಸಿದರಲ್ಲದೇ ಆರೋಪಿ ಅಶ್ವಿನ್ ರಾವ್ ಅವರನ್ನು ಆಗಸ್ಟ್ 27 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಭಾಸ್ಕರನ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಈ ಮಧ್ಯೆ ತಮ್ಮ ಮಗ ಬಂಧನಕ್ಕೊಳಗಾದಾಗಿನಿಂದಲೂ ರಜೆ ಮೇಲಿರುವ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್, ತಮ್ಮ ರಜೆಯನ್ನು ಮತ್ತೆ 15 ದಿನಗಳ ಕಾಲ ವಿಸ್ತರಿಸಿದ್ದಾರೆ. ಲೋಕಾಯುಕ್ತ ಕಛೇರಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಭಾಸ್ಕರ್ ರಾವ್ ಅವರನ್ನೂ ವಿಚಾರಣೆಗೊಳಪಡಿಸಲಿದೆ ಎನ್ನಲಾಗಿದೆ. ಈ ಹಿಂದೆ ಬಂಧಿತರಾಗಿದ್ದ ಸೈಯ್ಯದ್ ರಿಯಾಜ್ ಸೇರಿದಂತೆ ಇತರೆ ನಾಲ್ವರು ಆರೋಪಿಗಳ ಜಾಮೀನು ಅರ್ಜಿಯನ್ನೂ ಈ ಹಿಂದೆ ನ್ಯಾಯಾಲಯ ವಜಾಗೊಳಿಸಿತ್ತು.