ಬೆಂಗಳೂರು: ಇಲ್ಲಿನ ರಾಷ್ಟ್ರೀಯ ನರ ವಿಜ್ಞಾನ ಮತ್ತು ಮಾನಸಿಕ ರೋಗ ಸಂಸ್ಥೆ ( ನಿಮ್ಹಾನ್ಸ್)ಗೆ ಮಾನಸಿಕ ಚಿಕಿತ್ಸೆಗೆ ಕರೆ ತಂದಾಗ, ಭದ್ರತಾ ಸಿಬ್ಬಂದಿಯಿಂದ ಪಿಸ್ತೂಲ್ ಪಡೆದು ಗುಂಡು ಹಾರಿಸಿದ್ದ ವಿಚಾರಾಣಾಧೀನ ಕೈದಿ, ಗರುಡ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಮಾನಸಿಕ ಅಸ್ವಸ್ಥನಾಗಿದ್ದ ವಿಶ್ವನಾಥ್ (22) ಕೊಲೆ ಪ್ರಕರಣದಲ್ಲಿ ಬಂಧಿತನಾಗಿ, ವಿಚಾರಣೆ ಎದುರಿಸುತ್ತಿದ್ದ. ಪರಪ್ಪನ ಅಗ್ರಹಾರದಲ್ಲಿರಿಸಿದ್ದ ಈತನಿಗೆ ಕಳೆದ ಮೂರು ವರ್ಷಗಳಿಂದಲೂ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಭಾನುವಾರ ಪರೀಕ್ಷೆಗೆಂದು ಕರೆ ತಂದಾಗ, ಭದ್ರತಾ ಸಿಬ್ಬಂದಿಯಿಂದ ಪಿಸ್ತೂಲು ಕಸಿದು ಗುಂಡು ಹಾರಿಸಿದ್ದ.
ಶೌಚಾಲಯದಿಂದ ಮರಳುವಾಗ, ಪೊಲೀಸರಿಂದ 303 ಎಸ್‌ಎಲ್‌ಆರ್ ಪಿಸ್ತೂಲ್ ಹಾಗೂ ಮ್ಯಾಗಜಿನ್ ಕಸಿದುಕೊಂಡ ಆತ, 23 ಬಾರಿ ಗುಂಡು ಹಾರಿಸಿದ್ದ ಎನ್ನಲಾಗಿದೆ. ಚಾವಣಿ ಹಾಗೂ ಗೋಡೆ ಮೇಲೆ ಗುಂಡು ಹಾರಿಸಿದ್ದರಿಂದ ಯಾರಿಗೂ ಯಾವುದೇ ಅಪಾಯವಾಗಿಲ್ಲ.
ಪಿಸ್ತೂಲ್‌ನೊಂದಿಗೆ ಆತನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಆತನಿಂದ ಪಿಸ್ತೂಲ್ ಪಡೆದು, ಮನವೊಲಿಸಲು ಪೊಲೀಸ್ ಹಾಗೂ ಸಿಬ್ಬಂದಿ ವಿಫಲರಾದರು. ನಂತರ ಗರುಡ ಪೊಲೀಸರು ನಡೆಸಿದ ದಾಳಿಗೆ ಆತ ಮೃತಪಟ್ಟಿದ್ದಾನೆ. ಆಸ್ಪತ್ರೆ ಸುತ್ತ ಪೊಲೀಸ್ ಕಮಾಂಡೋಗಳು ಸುತ್ತುವರಿದಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ.