ಕರ್ನಾಟಕ

ಎತ್ತುಗಳ ದರ ಕೇಳಿಯೇ ರೈತರು ಸುಸ್ತೋ ಸುಸ್ತು !

Pinterest LinkedIn Tumblr

ettu-fi

ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಎತ್ತುಗಳ ದರ ದುಬಾರಿಯಾಗಿದ್ದು, ಸಣ್ಣ ಹಿಡುವಳಿದಾರರು ಅವುಗಳನ್ನು ಖರೀದಿಸುವುದಿರಲಿ, ಬಾಡಿಗೆ ಪಡೆಯಲೂ ಪರದಾಡುವ ಸ್ಥಿತಿ ನಿರ್ವಣವಾಗಿದೆ. ಸಾವಿರಾರು ರೂ. ತೆತ್ತು ಎತ್ತುಗಳನ್ನು ಬಾಡಿಗೆ ಪಡೆಯಲಾಗದ ರೈತರು, ಅನಿವಾರ್ಯವಾಗಿ ತಾವೇ ಕೂರಿಗೆಗೆ ಹೆಗಲು ಕೊಟ್ಟು ಉಳುಮೆ ಮಾಡುತ್ತಿದ್ದಾರೆ.

ಗಟ್ಟಿಮುಟ್ಟಾದ ಒಂದು ಜೋಡಿ ಎತ್ತುಗಳ ಬೆಲೆ 1 ಲಕ್ಷ ರೂ.ಗಳ ಗಡಿ ದಾಟಿದೆ. ಎತ್ತುಗಳನ್ನು ಖರೀದಿಸುವ ಬದಲು ಬಾಡಿಗೆ ಪಡೆಯಲು ಹೋದರೆ ಇದು ಸಹ ದುಬಾರಿ. ಜೋಡಿ ಎತ್ತುಗಳ ಪ್ರತಿದಿನದ ಬಾಡಿಗೆ 1,500 ರೂ.ಗಿಂತ ಹೆಚ್ಚಿದೆ. ಹಾಗಾಗಿ ತಾಲೂಕಿನ ಸಾಂಬ್ರಾ, ಮಾರಿಹಾಳ, ಮೋದಗಾ ಹಾಗೂ ಬೈಲಹೊಂಗಲ, ಸವದತ್ತಿ, ರಾಮದುರ್ಗ ಮತ್ತಿತರ ತಾಲೂಕುಗಳಲ್ಲಿ ರೈತರು ಹಾಗೂ ಕೂಲಿಯಾಳುಗಳೇ ಕೂರಿಗೆಗೆ ಹೆಗಲು ಕೊಟ್ಟು, ಭೂಮಿ ಹದಗೊಳಿಸುತ್ತಿದ್ದಾರೆ.

‘ಹೋದ ವರ್ಷ ಜೋಡಿ ಎತ್ತಿಗೆ 700ರಿಂದ 1,000 ರೂ. ಬಾಡ್ಗಿ ಇತ್ತು. ಆದ್ರ ಈ ವರ್ಷ ಬಾಡ್ಗಿ ದರ ದುಪ್ಪಟ್ಟಾಗೇತಿ. 1,500 ರೂ. ಕೊಟ್ರು ನಾವ್ ಹೇಳಿದ ದಿನಾ ಎತ್ತಗೋಳ್ನ ಕೊಡೋದಿಲ್ಲ. ಪಾಳೀಕ ಹಚ್ಚಿ ಅವುಗಳ್ನ ಪಡೀಬೇಕು. ಹೀಂಗಾಗಿ ಎತ್ತಗೋಳ್ ಉಸಾಬರೀನ್ ಬ್ಯಾಡ್ ಅಂತ ನಾವ್ ಕೂರಿಗೆಗೆ ಹೆಗಲ ಕೊಡಾಕತ್ತೇವಿ’ ಎನ್ನುತ್ತಾರೆ ಸಾಂಬ್ರಾದ ರೈತ ಕಲ್ಲಪ್ಪ ಪಾಟೀಲ.

ಎತ್ತಿನ ಮಾಲೀಕರಿಗೆ ಬೇಡಿಕೆ: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಜಮೀನಿನ ಮಾಲೀಕರಿಗಿಂತ ಎತ್ತುಗಳ ಮಾಲೀಕರಿಗೇ ಹೆಚ್ಚಿನ ಬೇಡಿಕೆ ಬಂದಿದೆ. ದಿನದ ಆಧಾರದಲ್ಲಿ ಎತ್ತುಗಳನ್ನು ಬಾಡಿಗೆಗೆ ನೀಡುತ್ತಿರುವ ಮಾಲೀಕರು, ಪ್ರತಿನಿತ್ಯ ಸಂಜೆಯಾಗುತ್ತಿದ್ದಂತೆ ಸಾವಿರಾರು ರೂ. ಜೇಬಿಗಿಳಿಸುತ್ತಿದ್ದಾರೆ.

ಕೊರತೆಗೆ ಕಾರಣ

3 ವರ್ಷಗಳಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಕೃಷಿ ಚಟುವಟಿಕೆ ಕೈಗೊಳ್ಳುವ ರೈತರಿಗೆ ಜಾನುವಾರುಗಳ ಕೊರತೆ ಎದುರಾಗಿದೆ. ಯಾಂತ್ರಿಕ ಕೃಷಿ ಸಲಕರಣೆಗಳ ಬಳಕೆ ಮತ್ತಿತರ ಕಾರಣಗಳಿಂದ ಪ್ರತಿವರ್ಷ ದನಗಳ ಸಂಖ್ಯೆ ಇಳಿಮುಖವಾಗುತ್ತಲೇ ಸಾಗಿದೆ. ಅದರಲ್ಲೂ ಎತ್ತುಗಳ ಸಂಖ್ಯೆ ಅತಿ ಕಡಿಮೆಯಾಗಿದೆ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

-ಇಮಾಮಹುಸೇನ್ ಗೂಡುನವರ

Write A Comment