ಶ್ರೀರಂಗಪಟ್ಟಣ: ದೇವಸ್ಥಾನದ ಖಜಾನೆಯಲ್ಲಿ ಕೋಟಿಗಟ್ಟಲೆ ಹಣವಿದ್ದರೂ ಕಲಶ ಪ್ರತಿಷ್ಠಾಪನೆಗೆ ಮುಜರಾಯಿ ಇಲಾಖೆ ಅಧಿಕಾರಿಗಳು ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಹೌದು, ಇತಿಹಾಸ ಪ್ರಸಿದ್ಧ ಧಾರ್ವಿುಕ ಸ್ಥಳ ಶ್ರೀರಂಗನಾಥಸ್ವಾಮಿ ದೇವಾಲಯದ ರಾಜಗೋಪುರ ದಲ್ಲಿನ ಕಳಶ ನೆಲಕ್ಕೆ ಬಿದ್ದು ಬರೋಬ್ಬರಿ 2.5 ವರ್ಷ (2013, ಮಾ.1). ಆದರೂ ಕಲಶ ಸ್ಥಾಪನೆಗೆ ಕ್ರಮ ಕೈಗೊಳ್ಳದೆ ಈವರೆಗೆ ನಿದ್ರಾವಸ್ಥೆಯಲ್ಲಿದ್ದ ಅಧಿಕಾರಿಗಳು, ಇದೀಗ ಕಲಶ ಸ್ಥಾಪನೆ ಮುಂದಿಟ್ಟುಕೊಂಡು ಹೊಸ ರೀತಿಯ ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಕಲಶ ಪ್ರತಿಷ್ಠಾಪನೆಗಾಗಿ ದಾನಿಗಳು ಬೇಕಾಗಿದ್ದಾರೆ. ಧನ ಸಹಾಯ ಮಾಡಲಿಚ್ಛಿಸುವವರು ಧಾರ್ವಿುಕ ಆಯುಕ್ತರು ಬೆಂಗಳೂರು, ಮುಜರಾಯಿ ತಹಸೀಲ್ದಾರ್, ಮಂಡ್ಯ ಅಥವಾ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಸಂರ್ಪಸುವಂತೆ ಕೋರಿ ಪ್ರಕಟಣೆ ಹೊರಡಿಸಿದ್ದಾರೆ.
ವಂತಿಗೆ ಪಡೆಯಲು ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶ ಪ್ರತಿ ‘ವಿಜಯವಾಣಿ’ಗೆ ಲಭ್ಯವಾಗಿದೆ. ಈ ಪತ್ರವನ್ನು ದೇವಾಲಯದ ಕಾರ್ಯನಿರ್ವಾಹಕಿ ಧನಲಕ್ಷ್ಮಿಮಾಧ್ಯಮದ ಮುಂದಿಟ್ಟಿದ್ದಾರೆ.
ಕೋಟ್ಯಂತರ ಹಣವಿದೆ: ಶ್ರೀ ರಂಗನಾಥಸ್ವಾಮಿ ದೇವಾಲಯದ ಖಜಾನೆಯಲ್ಲಿ 7,60,02,329 ರೂ.ಗಳಿದೆ. ಆದರೆ 50 ರಿಂದ 60 ಲಕ್ಷ ರೂ. ವೆಚ್ಚದಲ್ಲಿ ಕಲಶ ಪ್ರತಿಷ್ಠಾಪನೆ ಮಾಡಲು ಆ ಹಣ ಬಳಸಿಕೊಳ್ಳದಿರಲು ಕಾರಣವೇನು ಎಂಬುದಕ್ಕೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ದೇವಾಲಯದ ಹುಂಡಿಗೆ ಪ್ರತಿ ನಿತ್ಯ ಲಕ್ಷಾಂತರ ರೂ. ಹರಿದು ಬರುತ್ತಿದ್ದರೂ, ಇಲಾಖೆ ಕಲಶ ಸ್ಥಾಪನೆಗೆ ಕ್ರಮ ವಹಿಸಿಲ್ಲ. ಕಲಶ ಪ್ರತಿಷ್ಠಾಪನೆಗೆ ಆಗ್ರಹಿಸಿ ದೇವಾಲಯದ ಎದುರು ಸಾಲು ಸಾಲು ಪ್ರತಿಭಟನೆಗಳು, ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆದಿದ್ದರೂ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿಯೇ ಇದ್ದಾರೆ.
* ದೇವಾಲಯಕ್ಕೆ ಹರಿದು ಬರುತ್ತಿರುವ ಆದಾಯ ಮತ್ತು ಖರ್ಚಿನ ವಿವರ…
– ವರ್ಷ ಆದಾಯ ಖರ್ಚು
(ಕೋಟಿ ರೂ.ಗಳಲ್ಲಿ) (ಲಕ್ಷ ರೂ.ಗಳಲ್ಲಿ)
2010-11 1,00,66,522 57,92,635
2011-12 1,95,26,471 64,32,816
2012-13 2,24,79,514 75,78,018
2013-14 2,73,91,673 91,69,514
2014-15 2,35,50,492 64,59,095
* ದೇವಸ್ಥಾನದ ರಾಜಗೋಪುರದಲ್ಲಿನ ಕಲಶ ಪ್ರತಿಷ್ಠಾಪನೆಗಾಗಿ 50 ರಿಂದ 60 ಲಕ್ಷ ರೂ. ಖರ್ಚಾಗಲಿದೆ. 2 ಕಳಶದ ಜವಾಬ್ದಾರಿಯನ್ನು ದಾನಿಗಳಿಬ್ಬರು ವಹಿಸಿಕೊಂಡಿದ್ದಾರೆ. ಉಳಿದ 3 ಕಲಶದ ಪ್ರತಿಷ್ಠಾಪನೆಗಾಗಿ ಸಾರ್ವಜನಿಕರಿಂದ ವಂತಿಗೆ ಪಡೆಯುವಂತೆ ಧಾರ್ವಿುಕ ದತ್ತಿ ಆಯುಕ್ತರು ಆದೇಶ ಹೊರಡಿಸಿದ್ದು, ಅಗತ್ಯವಿದ್ದರೆ ದೇವಾಲಯದ ಖಜಾನೆಯಲ್ಲಿನ ಹಣ ಬಳಸಿಕೊಳ್ಳುವಂತೆ ಸೂಚಿಸಿದ್ದಾರೆ.
| ಧನಲಕ್ಷ್ಮಿ ಶ್ರೀರಂಗನಾಥಸ್ವಾಮಿ ದೇವಾಲಯದ ಕಾರ್ಯನಿವಾಹಕ ಅಧಿಕಾರಿ.