ಬೆಂಗಳೂರು: ರಾಜ್ಯದಲ್ಲಿನ್ನು ಭೂ ವಂಚನೆಗೆ ಕಡಿವಾಣ ಬೀಳಲಿದೆ. ಭೂವ್ಯಾಜ್ಯ, ಭೂ ಮಾಲೀಕತ್ವ ಸಂಬಂಧಿ ಅಕ್ರಮ ಹಾಗೂ ಸರ್ಕಾರಿ ಅಧಿಕಾರಿಗಳೊಂದಿಗೆ ಭೂಗಳ್ಳರು ಶಾಮೀಲಾಗಿ ನಕಲಿ ಭೂದಾಖಲೆ ಸೃಷ್ಟಿಸಿ ನಿವೇಶನ, ಮನೆ, ಆಸ್ತಿಗಳನ್ನು ಮಾರಾಟ ಮಾಡಿ ಅಮಾಯಕರನ್ನು ವಂಚಿಸುವ ದಂಧೆ ಇನ್ನು ಬಂದ್ ಆಗಲಿದೆ.
ಹೇಗಂತೀರಾ? ಭೂಮಾಪನ, ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ನಿರ್ದೇಶನಾಲಯವು ರಾಜ್ಯಾದ್ಯಂತ 1965ರ ಗ್ರಾಮಗಳ ದಾಖಲೆ ಹಾಗೂ ಮೂಲ ನಕಾಶೆಗಳನ್ನು ಗಣಕೀಕರಣ ಮಾಡಿ ಜಿಯೋ ರೆಫರೆನ್ಸ್ ಮೂಲಕ ಗೂಗಲ್ ಸೆಟಲೈಟ್ ಇಮೇಜ್ ಮೇಲೆ ಅಳವಡಿಸುತ್ತಿದೆ. ಈ ಮೂಲಕ ಆಸ್ತಿಗಳ ಮಾಲೀಕತ್ವ ಕುರಿತು ಸಾರ್ವಜನಿಕರಿಗೆ ಸ್ಪಷ್ಟತೆ ಸಿಗಲಿದ್ದು, ಕೆರೆ, ರಾಜಕಾಲುವೆ, ಸರ್ಕಾರಿ ಭೂಮಿಗೆ ಅಕ್ರಮ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ಮುಗ್ಧಜನರನ್ನು ವಂಚಿಸುವುದೂ ತಪ್ಪಲಿದೆ. ಭೂಮಾಪನ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ಪತ್ರಿಕಾಗೋಷ್ಠಿಯಲ್ಲಿ ಈ ವಿವರಗಳನ್ನು ಪ್ರಕಟಿಸಿದರು.
ಮುಂದಿನ ಆರು ತಿಂಗಳಲ್ಲಿ ಇಡೀ ರಾಜ್ಯದಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ. ಸಾರ್ವಜನಿಕರು ಮಾಡಬೇಕಾದ್ದು: ಯಾವುದೇ ಆಸ್ತಿ ಖರೀದಿಸುವ ಅಥವಾ ತಮ್ಮ ಆಸ್ತಿಯ ಕುರಿತಾದ ಸಂಶಯಗಳನ್ನು ನಿವಾರಿಸಿಕೊಳ್ಳಲು ಸಾರ್ವಜನಿಕರು ಭೂಮಾಪನ ಇಲಾಖೆಯ www.landrecords.karnataka.gov.in ವೆಬ್ಸೈಟ್ ಕ್ಲಿಕ್ಕಿಸಿದರೆ ವಾರ್ಡ್, ಗ್ರಾಮವಾರು ವಿಭಾಗಗಳು ಸಿಗುತ್ತವೆ. ನಿರ್ದಿಷ್ಟ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಗೂಗಲ್ ಸೆಟಲೈಟ್ ಇಮೇಜ್ನಲ್ಲಿ ಆಸ್ತಿ ಅಥವಾ ಮನೆ ಗುರುತಿಸಿ ಕೊಂಡು ಅದು ಯಾವ ಸರ್ವೆ ನಂಬರ್ಗೆ ಸೇರಿದೆ ಎಂಬುದನ್ನು ತಿಳಿದುಕೊಳ್ಳಬಹುದು.
ಆ ನಿರ್ದಿಷ್ಟ ಸರ್ವೆ ನಂಬರ್ ಮಾಲೀಕತ್ವ ಯಾರ ಹೆಸರಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ‘ಭೂಮಿ’ ವೆಬ್ಸೈಟ್ www.bhoomi.karnataka.gov.in ನಲ್ಲಿ ಆರ್ಟಿಸಿ ಮಾಹಿತಿ ಸಿಗಲಿದೆ. ಆದರೆ, ಸದ್ಯಕ್ಕೆ ಬೆಂಗಳರಿನ ಕೆಲವು ಸರ್ವೆ ನಂಬರ್ಗಳ ಆರ್ಟಿಸಿ ಮಾಹಿತಿ ಲಭ್ಯವಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಈ ಮಾಹಿತಿ ವೆಬ್ಸೈಟ್ನಲ್ಲಿ ಲಭ್ಯವಾಗುತ್ತದೆ.
ಮೊಬೈಲ್ ಆಪ್ನಲ್ಲೇ ಮಾಹಿತಿ: ನಕಲಿ ಆರ್ಟಿಸಿ ಮೂಲಕ ಸರ್ಕಾರಿ ಜಾಗವನ್ನು ಮಾರಾಟ ಮಾಡುವ, ಯಾವುದೋ ಆಸ್ತಿಗೆ ಬೇರಾವುದೋ ಜಾಗವನ್ನು ತೋರಿಸಿ ಮಾರಾಟ ಮಾಡುವಂತಹ ವಂಚನೆಗಳಿಗೆ ಕಡಿವಾಣ ಹಾಕಲು ಮೊಬೈಲ್ ಆಪ್ನ್ನು ಮಾಡಲಾಗುತ್ತಿದೆ. ಈ ಸೌಲಭ್ಯ ಜಾರಿಯಾದ ಬಳಿಕ ನಿರ್ದಿಷ್ಟ ಜಾಗದಲ್ಲಿ ನಿಂತುಕೊಂಡು ಹೆಸರು, ಮೊಬೈಲ್ ನಂಬರ್ ನಮೂದಿಸಿ ಕ್ಲಿಕ್ ಮಾಡಿದರೆ ಆ ಸ್ಥಳದ ಸರ್ವೇ ನಂಬರ್ ಎಸ್ಎಂಎಸ್ ಮೂಲಕ ಬರುತ್ತದೆ. ಈ ವ್ಯವಸ್ಥೆ ಸಿದ್ಧವಾಗುತ್ತಿದ್ದು, ಸದ್ಯದಲ್ಲೇ ಜಾರಿಗೆ ಬರಲಿದೆ ಎಂದು ಮೌದ್ಗಿಲ್ ತಿಳಿಸಿದರು.
ಮೊದಲು ಸಮಿತಿ, ಬಳಿಕ ವೆಬ್ಸೈಟ್ಗೆ!
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಒಟ್ಟು 1,800 ಕೆರೆಗಳ ಮೂಲನಕ್ಷೆ ಗುರುತಿಸಲಾಗುತ್ತಿದೆ. ಎರಡೂ ಜಿಲ್ಲೆಗಳಲ್ಲಿ ಪ್ರತಿದಿನ 50 ಕೆರೆಗಳ ಸರ್ವೆ ಕಾರ್ಯ ನಡೆಯುತ್ತಿದ್ದು, 320 ಸರ್ವೇಯರ್ಗಳು ಈ ಕೆಲಸದಲ್ಲಿ ತೊಡಗಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಎಲ್ಲ ಕೆರೆಗಳ ಸರ್ವೆ ಕಾರ್ಯ ಮುಗಿಯಲಿದೆ. ಈಗಾಗಲೇ 300 ಕೆರೆಗಳ ಗಡಿ ಗುರುತಿಸಿ ಕಲ್ಲು ಹಾಕಲಾಗಿದೆ ಮತ್ತು ಈ ರೀತಿ ಸ್ಪಷ್ಟವಾಗಿ ಗುರುತಿಸಿದ ಬಳಿಕ ಜಿಲ್ಲಾಧಿಕಾರಿ, ಬಿಡಿಎ, ಪಾಲಿಕೆಗೆ ಮಾಹಿತಿ ನೀಡಿ ರಕ್ಷಣೆ ಮಾಡಿಕೊಳ್ಳಲು ತಿಳಿವಳಿಕೆ ನೀಡಲಾಗುತ್ತಿದೆ. 1965ರ ಮೂಲದಾಖಲೆಗಳನ್ನು ಆಧರಿಸಿ ಸರ್ವೆ ಕಾರ್ಯ ನಡೆಯುತ್ತಿದ್ದು, ಕೆರೆ ಅಂಗಳಗಳ ಒಟ್ಟು ವಿಸ್ತೀರ್ಣ ಗುರುತಿಸಿ ಗಡಿ ನಿರ್ಧರಿಸಲಾಗುತ್ತಿದೆ. ಈ ಕೆರೆಗಳ ಎಷ್ಟು ವಿಸ್ತೀರ್ಣವನ್ನು ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ವಿವರಗಳನ್ನೂ ನಕ್ಷೆ ಜತೆಗೆ ದಾಖಲಿಸಲಾಗುತ್ತಿದೆ. ಈ ಒತ್ತುವರಿಯನ್ನು ಕೆಂಪುಶಾಯಿಯಲ್ಲಿ ಗುರುತಿಸಲಾಗಿದೆ. ಈ ಕಾರ್ಯವು ನಗರದ ಕೆರೆಗಳ ಒತ್ತುವರಿಗೆ ಸಂಬಂಧಿಸಿದ ಕೆರೆಗಳ ವಿಧಾನಮಂಡಲ ಸಮಿತಿ ಸೂಚನೆ ಆಧರಿಸಿ ನಡೆಯುತ್ತಿದ್ದು, ನಗರದ ಎಲ್ಲ ಕೆರೆಗಳ ಸರ್ವೇ ಮಾಹಿತಿಯನ್ನು ಮೊದಲು ಸಮಿತಿಗೆ ಸಲ್ಲಿಸಲಾಗುವುದು. ಆ ಬಳಿಕ, ಸಾರ್ವಜನಿಕ ಮಾಹಿತಿಗಾಗಿ ವೆಬ್ಸೈಟ್ಗೆ ಹಾಕಲಾಗುವುದು ಎಂದು ಮೌದ್ಗಿಲ್ ತಿಳಿಸಿದರು.
ಬೆಂಗಳೂರಲ್ಲಿ ಜಾರಿ
ಬೆಂಗಳೂರು ನಗರದಲ್ಲಿ ಮೊದಲ ಹಂತದಲ್ಲೇ ಎಲ್ಲ ಭೂದಾಖಲೆ ವಿವರಗಳನ್ನು ಗೂಗಲ್ ಸೆಟಲೈಟ್ ಇಮೇಜ್ಗೆ ಜೋಡಿಸಲಾಗಿದೆ. 340 ಗ್ರಾಮಗಳನ್ನು ಒಳಗೊಂಡಿರುವ ಬೆಂಗಳೂರು ನಗರದ ಮೂಲ ನಕ್ಷೆಯು ಭೂಮಾಪನ ಇಲಾಖೆಯ ವೆಬ್ಸೈಟ್ www.landrecords.karnataka.gov.in ನಲ್ಲಿ ಲಭ್ಯವಿದೆ. ಬೆಂಗಳೂರಿನಲ್ಲಿ ಕೆಲವರಿಗೆ ಹಿಂದಿನ ಗ್ರಾಮಗಳ ಹೆಸರು ತಿಳಿದಿಲ್ಲವಾದ ಕಾರಣ ವಾರ್ಡ್ವಾರು ಮಾಹಿತಿಯನ್ನೂ ಪ್ರಕಟಿಸಲಾಗಿದೆ. ವಾರ್ಡ್, ಗ್ರಾಮ, ಕೆರೆ ಮತ್ತು ರಾಜಕಾಲುವೆ ಹೀಗೆ ವಿವಿಧ ವಿಭಾಗಗಳಲ್ಲಿ ಮಾಹಿತಿ ಲಭ್ಯವಿದೆ. ಸಾರ್ವಜನಿಕರು ಈ ವೆಬ್ಸೈಟ್ನಲ್ಲಿ ಸಂಬಂಧಪಟ್ಟ ವಿಭಾಗವನ್ನು ಕ್ಲಿಕ್ ಮಾಡಿ ಆಸ್ತಿಗಳ ಸರ್ವೆ ನಂಬರ್ ತಿಳಿಯಬಹುದು.
ಆಸ್ತಿ ದೃಢೀಕರಣಕ್ಕೆ ಸಹಕಾರಿ
ವಿಶೇಷವಾಗಿ ಬೆಂಗಳೂರು ನಗರದಲ್ಲಿ ಮನೆ ಮತ್ತು ನಿವೇಶನ ಗಳನ್ನು ಕೆರೆ, ರಾಜಕಾಲುವೆ, ಸರ್ಕಾರಿ ಜಾಗಗಳನ್ನು ಅತಿಕ್ರಮಿಸಿ ನಿರ್ವಿುಸಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲೂ ಈ ವೆಬ್ಸೈಟ್ ನೋಡಿಕೊಳ್ಳಬಹುದು. ಭವಿಷ್ಯದಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಈ ವೆಬ್ಸೈಟ್ ಹೆಚ್ಚು ನೆರವಿಗೆ ಬರಲಿದೆ.