ಬೆಂಗಳೂರು: ರೈತರ ಸರಣಿ ಆತ್ಮಹತ್ಯೆಗೆ ಕಾರಣರಾದ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಪಣತೊಟ್ಟಿದೆ. ಆದರೆ, ರಾಜಧಾನಿಯಲ್ಲಿ ಮಾತ್ರ ಮೀಟರ್ ಬಡ್ಡಿ ವ್ಯವಹಾರ ರಾಜಾರೋಷವಾಗಿ ನಡೆಯುತ್ತಿದೆ. ಇದಕ್ಕೆ ರೌಡಿಗಳು ಮತ್ತು ಕೆಲ ಖಾಕಿಗಳ ಅಭಯವಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿವೆ.
ದುಬಾರಿ ಬಡ್ಡಿ ಪಡೆಯುವ ಲೇವಾದೇವಿದಾರರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ ಬೆನ್ನಲ್ಲೆ ಮೀಟರ್ಬಡ್ಡಿ ದಂಧೆಕೋರರ ವಿರುದ್ಧ ಸಾರ್ವಜನಿಕರಿಂದ ನೂರಾರು ದೂರುಗಳು ಠಾಣೆಗೆ ಬರುತ್ತಿವೆ. ಹಾಗಾಗಿ ದುಬಾರಿ ಬಡ್ಡಿ ವಸೂಲಿಗಾರರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಕ್ಕೆ ವಿಶೇಷ ತಂಡ ಚುರುಕಿನ ಕಾರ್ಯಾಚರಣೆ ಕೈಗೊಂಡಿದೆ.
ದಿನದ ಬಡ್ಡಿ ವ್ಯವಹಾರ: ಕೆ.ಆರ್. ಮಾರುಕಟ್ಟೆ, ಯಶವಂತಪುರ, ಶಿವಾಜಿನಗರ, ಬನಶಂಕರಿ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರಸ್ಥರು ಮತ್ತು ಕೂಲಿ ಕಾರ್ವಿುಕರಿಗೆ ಬೆಳಗ್ಗೆ 900 ರೂ. ಸಾಲ ಕೊಟ್ಟು ಸಂಜೆ ವೇಳೆ 1,100 ರಿಂದ 1,200 ರೂ. ವಸೂಲಿ ಮಾಡುತ್ತಿದ್ದಾರೆ. ಒಂದು ವೇಳೆ ನೀಡದಿದ್ದರೆ ರೌಡಿಗಳ ಮೂಲಕ ದೌರ್ಜನ್ಯ ಮಾಡಿಸುತ್ತಿರುವುದು ಬೆಳಕಿಗೆ ಬಂದಿದೆ.
***
ಖಾಲಿ ಚೆಕ್ ಛಾಪಾ ಕಾಗದ ಭದ್ರತೆ
ಸಾಲಗಾರರು ಸಹಿ ಮಾಡಿದ ಖಾಲಿ ಚೆಕ್ ಮತ್ತು ಛಾಪಾ ಕಾಗದ ಪಡೆದುಕೊಳ್ಳುತ್ತಾರೆ. ಒಂದು ವೇಳೆ ಬಡ್ಡಿ ಮತ್ತು ಅಸಲು ವಾಪಸ್ ನೀಡದಿದ್ದಾಗ ಖಾಲಿ ಚೆಕ್ಗೆ ಇಷ್ಟ ಬಂದಷ್ಟು ನಗದು ಬರೆದುಕೊಂಡು ಬ್ಯಾಂಕ್ಗೆ ಜಮಾ ಮಾಡಿ ಬೌನ್ಸ್ ಮಾಡಿಸಿ ಸಾಲಗಾರರ ವಿರುದ್ಧ ಕೋರ್ಟ್ನಲ್ಲಿ ದೂರು ದಾಖಲಿಸುತ್ತಾರೆ. ಇಲ್ಲವಾದರೆ, ಖಾಲಿ ಛಾಪಾ ಕಾಗದದಲ್ಲಿ ತಮಗೆ ಅನುಕೂಲಕ್ಕೆ ತಕ್ಕಂತೆ ಬರೆದುಕೊಂಡು ಆಸ್ತಿಗೆ ತಮ್ಮ ಹೆಸರಿಗೆ ಬರೆದುಕೊಂಡು ದೌರ್ಜನ್ಯ ಎಸಗುತ್ತಿದ್ದಾರೆ.
***
ಮಧ್ಯಮ ವರ್ಗವೇ ಟಾರ್ಗೆಟ್
ಸಣ್ಣ ಉದ್ಯಮಿಗಳು ಮತ್ತು ವ್ಯಾಪಾರಸ್ಥರು ದಂಧೆಕೋರರ ಬಹುಪಾಲು ಗ್ರಾಹಕರು. ಶೇ.15 ರಿಂದ 20ರ ಮೊತ್ತಕ್ಕೆ ಸಾಲ ಕೊಡುತ್ತಾರೆ. ಪ್ರತಿಯಾಗಿ ವಾಹನ, ಮನೆ, ಸೈಟು ಮತ್ತಿತರ ಸ್ಥಿರ ಅಥವಾ ಚರಾಸ್ತಿಯ ದಾಖಲೆ ಪತ್ರಗಳನ್ನು ಪಡೆದುಕೊಳ್ಳುತ್ತಾರೆ. ಒಂದು ವೇಳೆ ನಿಗದಿತ ದಿನಾಂಕಕ್ಕೆ ಬಡ್ಡಿ ಕಟ್ಟದಿದ್ದರೆ ಚಕ್ರ ಬಡ್ಡಿ ಬರೆದುಕೊಂಡು ಆಸ್ತಿ ಕಬಳಿಸುತ್ತಿದ್ದಾರೆ.
***
ಬಡ್ಡಿ ವ್ಯವಹಾರಕ್ಕೆ ರೌಡಿ ಪಡೆ, ಖಾಕಿ ಸಾಥ್
ಅಕ್ರಮ ಬಡ್ಡಿ ವ್ಯವಹಾರ ನಡೆಸುವವರಿಗೆ ರೌಡಿಗಳ ಪಡೆ ಮತ್ತು ಕೆಲ ಪೊಲೀಸರು ಸಾಥ್ ನೀಡುತ್ತಿದ್ದಾರೆ. ಹಣ ವಾಪಸ್ ನೀಡದಿರುವ ಸಾಲಗಾರರ ಮನೆ ಬಳಿಗೆ ರೌಡಿಗಳನ್ನು ಕಳುಹಿಸಿ ಜೀವ ಬೆದರಿಕೆ ಒಡ್ಡಲಾಗುತ್ತಿದೆ. ಇಲ್ಲವಾದರೆ, ಪೊಲೀಸರಿಂದ ದೂರವಾಣಿ ಕರೆ ಮಾಡಿಸಿ ಬಂಧನದ ಭೀತಿ ಹುಟ್ಟಿಸಲಾಗುತ್ತದೆ. ಕೆಲವು ಕಡೆ ಸ್ಥಳೀಯ ಪೊಲೀಸರ ಕುಮ್ಮಕ್ಕಿನಿಂದಲೇ ಬಡ್ಡಿ ವ್ಯವಹಾರ ಅವ್ಯಾಹತವಾಗಿ ನಡೆಯುತ್ತಿರುವುದು ಸಾರ್ವಜನಿಕರ ದೂರಿನಿಂದ ತಿಳಿದುಬಂದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
***
ಮೂರು ವರ್ಷ ಸಜೆ
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ ಲೇವಾದೇವಿದಾರರು ವಾರ್ಷಿಕ ಶೇ. 18 ಅಥವಾ ಅದಕ್ಕಿಂತ ಕಡಿಮೆ ಬಡ್ಡಿಗೆ ಸಾಲ ನೀಡಬೇಕು. ಇದಕ್ಕಿಂತ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅಂತವರ ವಿರುದ್ಧ ಕರ್ನಾಟಕ ಲೇವಾದೇವಿ ಕಾಯ್ದೆ-1961 ಹಾಗೂ ಕರ್ನಾಟಕ ದುಬಾರಿ ಬಡ್ಡಿ ತಡೆ ಕಾಯ್ದೆ ಅನ್ವಯ ದೂರು ದಾಖಲಿಸಬಹುದು. ಅಪರಾಧಿಗೆ ಕನಿಷ್ಠ 3 ವರ್ಷ ಸಜೆ ವಿಧಿಸಲಾಗುತ್ತದೆ.
***
10 ಸಾವಿರ ಮಂದಿ
ದುಬಾರಿ ಬಡ್ಡಿ ಮತ್ತು ಮೀಟರ್ ಬಡ್ಡಿ ದಂಧೆ ನಡೆಸುವ ದೊಡ್ಡ ಪಡೆಯೇ ಬೆಂಗಳೂರಿನಲ್ಲಿದೆ. 10 ಸಾವಿರಕ್ಕೂ ಅಧಿಕ ಮಂದಿ ಅಕ್ರಮ ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದಾರೆ. ಬ್ಯಾಂಕ್ನಲ್ಲಿ ಸಾಲ ಪಡೆಯಲು ಸೂಕ್ತ ದಾಖಲೆ ಒದಗಿಸಲು ಸಾಧ್ಯವಾಗದಿದ್ದಾಗ ಅಥವಾ ತುರ್ತ ಹಣದ ಅಗತ್ಯ ಇರುವ ವ್ಯಕ್ತಿಗಳು ಹೆಚ್ಚಾಗಿ ದಂಧೆಕೋರರನ್ನು ಅವಲಂಬಿಸಿದ್ದಾರೆ.
* ದುಬಾರಿ ಬಡ್ಡಿ, ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಸಾರ್ವಜನಿಕರು ಸ್ಥಳೀಯ ಅಥವಾ ನೇರವಾಗಿ ಮಾಹಿತಿ ನೀಡಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿಟ್ಟು ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳ ಲಾಗುತ್ತದೆ.
| ಆರ್. ರಮೇಶ್ ಡಿಸಿಪಿ, ಅಪರಾಧ ವಿಭಾಗ
***
ಸಿಸಿಬಿಯಿಂದ ಮೀಟರ್ ಬಡ್ಡಿ ದಂಧೆಕೋರ ಸೆರೆ
ಬೆಂಗಳೂರು: ಮೀಟರ್ ಬಡ್ಡಿ ಹಣ ಕಟ್ಟಲಾರದೆ ಕಿರುಕುಳ ಅನುಭವಿಸುತ್ತಿದ್ದ ಸಾಲಗಾರರು ನೀಡಿದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ನಾಗರಬಾವಿ 2ನೇ ಹಂತ ವಿದ್ಯಾಗಿರಿ ಬಡಾವಣೆ ನಿವಾಸಿ ಕೆ.ಬಾಲು ಬಂಧಿತ. ಈತನಿಂದ ಮೀಟರ್ ಬಡ್ಡಿ ದಂಧೆಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದು ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಸಿಸಿಬಿ ಡಿಸಿಪಿ ಆರ್.ರಮೇಶ್ ತಿಳಿಸಿದ್ದಾರೆ. 2013ರಲ್ಲಿ ಆರತಿ ರಾಜೇಶ್ ಎಂಬುವರು ಬಾಲು ಬಳಿ 8 ಲಕ್ಷ ರೂ. ಸಾಲ ಪಡೆದಿದ್ದರು. 5.27 ಲಕ್ಷ ರೂ. ಬಡ್ಡಿ ರೂಪದಲ್ಲಿ ಹಣ ಪಾವತಿ ಮಾಡಿದ್ದರು. ಅಲ್ಲದೇ, 50 ಸಾವಿರ ರೂ. ಮರುಪಾವತಿ ಮಾಡಿದ್ದರು. ಆದರೂ ಆರೋಪಿ 13 ಲಕ್ಷ ರೂ. ನೀಡುವಂತೆ ಬೆದರಿಕೆ ಒಡ್ಡಿದ್ದ. ಈ ಸಂಬಂಧ ಆರತಿ ನೀಡಿದ ದೂರಿನ ಮೇರೆಗೆ ಬಾಲು ಮನೆ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ.