ಕರ್ನಾಟಕ

ಆಮಿಷದ ಎಸ್ಸೆಮ್ಮೆಸ್ ಬಗ್ಗೆ ಎಚ್ಚರ

Pinterest LinkedIn Tumblr

sms– ಡಿ.ಎಸ್. ಶಿವರುದ್ರಪ್ಪ

ಬೆಂಗಳೂರು: ಸಾರ್ವಜನಿಕರೇ ಎಚ್ಚರ…! ಬಹುಮಾನ ಬಂದಿದೆ ಎಂದು ಮೊಬೈಲ್ ಫೋನ್​ನಲ್ಲಿ ಧುತ್ತನೆ ಕಾಣಿಸಿಕೊಳ್ಳುವ ಮೆಸೇಜ್ ನೋಡಿ ಬೇಸ್ತು ಬಿದ್ದಿರೋ, ಅಲ್ಲಿಗೆ ನೀವು ವಂಚನೆ ಜಾಲದ ಇಕ್ಕಳಕ್ಕೆ ಸಿಕ್ಕಿಕೊಂಡಂತೆ.

ಬಹುಮಾನವಿರಲಿ, ನೀವು ಬ್ಯಾಂಕ್ ಖಾತೆಗೆ ಕಟ್ಟುವ ಠೇವಣಿ ಹಣವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಇದು ರಾಜ್ಯದಲ್ಲಿ ವ್ಯಾಪಕವಾಗಿ ವಿಸ್ತರಿಸಿರುವ ‘ನೈಜೀರಿಯನ್ ಫ್ರಾಡ್’ ಜಾಲದ ಕೈಚಳಕ. ಈ ಜಾಲಕ್ಕೆ ಸಿಲುಕಿ ನೂರಾರು ಜನರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.

ಲಕ್ಷಾಂತರ (ಸಾಮಾನ್ಯವಾಗಿ 5ರಿಂದ 50 ಲಕ್ಷದವರೆಗೆ) ಅಮೆರಿಕನ್ ಡಾಲರ್ ಬಹುಮಾನ ಬಂದಿದೆ. ಕೂಡಲೇ 0041773125004 ಅಥವಾ 0043820899534 ಈ ನಂಬರಿಗೆ ಸಂರ್ಪಸಿ ಎಂದು ಮೊಬೈಲ್​ಗೆ ಸಂದೇಶ ಬರುತ್ತದೆ. ಇದನ್ನು ಅದೃಷ್ಟದ ಸಂದೇಶವೆಂದು ಪರಿಗಣಿಸಿದರೆ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.

ನೈಜೀರಿಯಾ ವಂಚಕರು: ನೈಜೀರಿಯಾ ವಂಚಕರ ಜಾಲ ಅನೇಕ ವರ್ಷಗಳಿಂದ ಇ-ಮೇಲ್ ಮೂಲಕ ಸಂದೇಶ ರವಾನಿಸಿ ಹಣ ಲಪಟಾಯಿಸುವುದನ್ನೇ ವೃತ್ತಿಯನ್ನಾಗಿಸಿಕೊಂಡಿದೆ. ಇತ್ತೀಚೆಗೆ ಇಮೇಲ್ ಜತೆಗೆ ಎಸ್​ಎಂಎಸ್ ಮಾರ್ಗವನ್ನೂ ಕಂಡು ಕೊಂಡಿದೆ. ನಿಮಗೆ ನಗದು ಬಹುಮಾನ ಬಂದಿದೆ ಈ ನಂಬರಿಗೆ ಕರೆ ಮಾಡಿ ಎಂದು ವಂಚಕರು ಎಸ್​ಎಂಎಸ್ ಕಳುಹಿಸುತ್ತಾರೆ. ಇದನ್ನು ನಂಬಿ ಕರೆ ಮಾಡಿದರೆ ಬ್ಯಾಂಕ್​ವೊಂದರ ಚಾಲ್ತಿ ಖಾತೆ ನಂಬರ್ ನೀಡಿ ಇದಕ್ಕೆ ಇಂತಿಷ್ಟು ಶುಲ್ಕ ಕಟ್ಟಬೇಕು ಎಂದು ಸೂಚಿಸುತ್ತಾರೆ. ಮಾಡಿದ ಕರೆಗೆ ಐಎಸ್​ಡಿ ದರ ತಗುಲುತ್ತದೆ. ದರ ಕೂಡ ಹೆಚ್ಚಿರುತ್ತದೆ. ಬಹುಮಾನದ ಆಸೆಯಿಂದ ಬ್ಯಾಂಕ್ ಖಾತೆಗೆ ಹಣ ಕಟ್ಟಿದರೆ ಅಲ್ಲಿಗೆ ಮುಗಿಯಿತು, ಬಹುಮಾನ ಇರಲಿ ಬ್ಯಾಂಕ್​ಗೆ ಕಟ್ಟಿದ ಹಣದ ಜತೆಗೆ ದೂರವಾಣಿ ಶುಲ್ಕವೂ ಸಿಗುವುದಿಲ್ಲ.

ವಂಚನೆಗೊಳಿಸುವ ಪರಿ ಹೇಗೆ ?

ವಿವಿಧ ಕಂಪನಿಗಳ ಗ್ರಾಹಕರ ಮೊಬೈಲ್ ಫೋನ್ ನಂಬರ್​ಗಳನ್ನು ಕಂಪ್ಯೂಟರ್​ನಲ್ಲಿ ಹ್ಯಾಕ್ ಮಾಡುವ ವಂಚಕರು, ಪ್ರತಿ ದಿನ ಆಯ್ದ ಸಂಖ್ಯೆಗಳಿಗೆ ಸಂದೇಶ ರವಾನಿಸುತ್ತಾರೆ. ಅದರಲ್ಲಿ ಎರಡು ನಂಬರ್ ನಮೂದಿಸಿ ಹೆಚ್ಚಿನ ಮಾಹಿತಿಗೆ ಸಂರ್ಪಸಿ ಎಂದು ಹೇಳುತ್ತಾರೆ. ಕರೆ ಮಾಡಿದಾಗ ಬಹುಮಾನದ ಹಣ ವರ್ಗಾಯಿಸುತ್ತೇವೆ ಎಂದು ಬ್ಯಾಂಕ್ ಖಾತೆಯ ನಂಬರ್ ಪಡೆದುಕೊಳ್ಳುತ್ತಾರೆ. ಬಹುಮಾನದ ಹಣ ವರ್ಗಾಯಿಸಲು ಪ್ರೊಸೆಸಿಂಗ್ ಶುಲ್ಕ, ಸೀಮಾ ಶುಲ್ಕ ಕಟ್ಟಬೇಕು. ಅದನ್ನು ನಾವು ಹೇಳಿದ ಖಾತೆಗೆ ಜಮಾ ಮಾಡುತ್ತಿದ್ದಂತೆ ಬಹುಮಾನದ ಹಣ ಕೊಡುತ್ತೇವೆ ಎಂದು ನಂಬಿಸುತ್ತಾರೆ. ಇವರ ಮಾತು ನಂಬಿ ಹಣ ಜಮಾ ಮಾಡಿದ್ದೇ ಆದಲ್ಲಿ ಮೋಸ ಹೋದೀರೆಂದೇ ಅರ್ಥ. ಹಣ ಜಮಾ ಆಗುತ್ತಿದ್ದಂತೆ ವಂಚಕರು ಖಾತೆಯನ್ನೇ ಮುಕ್ತಾಯಗೊಳಿಸಿಬಿಡುತ್ತಾರೆ. ಸಂಪರ್ಕಕ್ಕೆ ಸಿಗದೆ ತಪ್ಪಿಸಿಕೊಳ್ಳುತ್ತಾರೆ. ನಕಲಿ ದಾಖಲೆ ನೀಡಿ ಬ್ಯಾಂಕ್ ಖಾತೆಗಳನ್ನು ಮಾಡಿಸಿಕೊಂಡಿರುವುದರಿಂದ ಅವರನ್ನು ಪತ್ತೆ ಹಚ್ಚುವುದೂ ಕಷ್ಟ. ಇಂತಹ ನೂರಾರು ಪ್ರಕರಣಗಳನ್ನು ತನಿಖೆ ನಡೆಸಿದರೆ ನಾಲ್ಕೈದರಲ್ಲಿ ಆರೋಪಿಗಳು ಸಿಕ್ಕಿ ಬೀಳಬಹುದು. ಆದರೂ ಹಣ ವಾಪಸು ಸಿಗುವ ಖಾತ್ರಿ ಇರುವುದಿಲ್ಲ.

ಬ್ಯಾಂಕ್ ಖಾತೆ ಹೊಂದಿರುವ ವಂಚಕರು

ಪ್ರತಿ ನಿತ್ಯ ಬೆಂಗಳೂರು ಸೇರಿ ರಾಜ್ಯಾದ್ಯಂತ 50 ರಿಂದ 60 ಮಂದಿ ಈ ರೀತಿಯ ವಂಚನೆಗೊಳಗಾಗುತ್ತಿದ್ದಾರೆ. ನೈಜೀರಿಯಾ ವಂಚಕರ ಜಾಲ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಖಾತೆ ಹೊಂದಿರುವುದು ಬೆಳಕಿಗೆ ಬಂದಿದೆ. ಈ ಮಾದರಿಯ ವಂಚನೆಗೆ ಸಂಬಂಧಿಸಿದಂತೆ ಕರ್ನಾಟಕ, ಕೇರಳ ಹಾಗೂ ಮೇಘಾಲಯದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಅಪರಿಚಿತರಿಗೆ ಮಾಹಿತಿ ಕೊಡದಿರಿ

ಕೆಲವೊಮ್ಮೆ ವಂಚಕರು ಇ-ಮೇಲ್ ಪಾಸ್​ವರ್ಡ್, ಎಟಿಎಂ ಪಿನ್​ಕೋಡ್ ಇನ್ನಿತರ ಮಾಹಿತಿ ಕೇಳಿ ದುರ್ಬಳಕೆ ಮಾಡಿಕೊಂಡಿದ್ದೂ ಉಂಟು. ಯಾವುದೇ ಕಾರಣಕ್ಕೂ ಅಪರಿಚಿತ ವ್ಯಕ್ತಿಗಳಿಗೆ ಇಂಥ ಮಾಹಿತಿ ಕೊಡಬಾರದು ಎಂದು ಸೈಬರ್ ಅಪರಾಧ ವಿಭಾಗದ ಹಿರಿಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

Write A Comment