ಬೆಂಗಳೂರು: ರಾಜ್ಯದ ಹಿರಿಯ ಐಎಎಸ್ ಅಧಿಕಾರಿಯ ತಂದೆಯ ಕಂಪನಿಗೆ ಸೇರಿದ್ದ ಅಪಾರ್ಟ್ಮೆಂಟ್ ಮೇಲೆ ಸಿಐಡಿ ಹಾಗೂ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಕೋಟ್ಯಾಂತರ ರೂ. ನಗದು, ಬಂಗಾರ ಹಾಗೂ ವಜ್ರದ ಆಭರಣಗಳು ಪತ್ತೆಯಾಗಿವೆ.
ಕ್ರೀಡೆ ಹಾಗೂ ಯುವಜನ ಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಅವರ ತಂದೆ ನರೇಶ್ ಮೋಹನ್ ಅವರ ಪಿ.ಎಸ್.ಕೆ. ಕಂಪನಿಗೆ ಸೇರಿದ್ದ ಫ್ಲಾಟ್ ಬೆಂಗಳೂರಿನ ಯಶವಂತಪುರದಲ್ಲಿರುವ ಗೋಲ್ಡನ್ ಗ್ರಾಂಡ್ ಅಪಾರ್ಟ್ಮೆಂಟ್ ನಲ್ಲಿದ್ದು, ಈ ಫ್ಲಾಟ್ ಮೇಲೆ ದಾಳಿ ನಡೆದ ವೇಳೆ ಭಾರೀ ಪ್ರಮಾಣದ ಆಸ್ತಿ ಪತ್ತೆಯಾಗಿದೆ.
ಈ ಫ್ಲಾಟ್ ನ ಮಾಸ್ಟರ್ ಬೆಡ್ ರೂಮಿನಲ್ಲಿರುವ ಕಬ್ಬಿಣದ ಕಪಾಟಿನಲ್ಲಿ 4 ಕೋಟಿ 37 ಲಕ್ಷದ 50 ಸಾವಿರ ರೂ.ನಗದು, 2 ಕೆ.ಜಿ. ಬಂಗಾರ, 34.7 ಕ್ಯಾರೆಟ್ ವಜ್ರಾಭರಣ ದೊರೆತಿರುವುದಲ್ಲದೇ ಸುಮಾರು 500 ಕೋಟಿ ರೂ. ಬೆಲೆ ಬಾಳುವ ಆಸ್ತಿ ಪತ್ರಗಳೂ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಹುಬ್ಬಳ್ಳಿಯಲ್ಲಿನ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ತನಿಖೆಯ ಜಾಡು ಹಿಡಿದು ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಇಷ್ಟು ಪ್ರಮಾಣದ ಹಣ ಐಎಎಸ್ ಅಧಿಕಾರಿಗೆ ಸೇರಿದ ಫ್ಲಾಟಿನಲ್ಲಿ ಪತ್ತೆಯಾಗಿರುವುದು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.