ಕರ್ನಾಟಕ

ನಟಿಯರ ಸೌಂದರ್ಯದ ಹಿಂದಿನ ಸತ್ಯ

Pinterest LinkedIn Tumblr

shilpa-್ಇಸಾಮಾನ್ಯವಾಗಿ ನಾವೆಲ್ಲ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ ಅವರಂಥ ಸೌಂದರ್ಯವತಿಯರ ಆರಾಧಕರಾಗಿರುತ್ತೇವೆ. ಅವರಂತೆ ನಾವೂ ಸುಂದರವಾಗಿ ಕಾಣಬೇಕೆಂದು ವಿವಿಧ ಪ್ರಯತ್ನ ಮಾಡಿ ವಿಫಲರಾಗುತ್ತೇವೆ. ನಾನೂ ಅವರ ಅಭಿಮಾನಿ. ಕಳೆದ 20 ವರ್ಷಗಳಿಂದ ಅವರ ವೃತ್ತಿ, ಜೀವನಶೈಲಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈಗಲೂ ಅವರು 20ರ ಯುವತಿಯಂರಂತೆ ಕಾಣಿಸುತ್ತಾರೆ. ಅವರು 35ರ ನಂತರ ಮದುವೆಯಾದರೂ, ಹೆರಿಗೆಗೆ ಸಿಝೇರಿಯನ್ ಅಗತ್ಯಬೀಳಲಿಲ್ಲ. ಈಚಿನ ದಿನಗಳಲ್ಲಿ ಸಿಝೇರಿಯನ್ ಸಾಮಾನ್ಯವಾಗಿದೆ. ಐಶ್ವರ್ಯಾ ರೈ ಹೆರಿಗೆಯಾಗಿ ಒಂದು ದಿನದ ಬಳಿಕ ಆಸ್ಪತ್ರೆಯಿಂದ ಮನೆಗೆ ವಾಪಸಾದರು ಮತ್ತು 15 ದಿನಗಳಲ್ಲಿ ಸಿನಿಮಾ ಶೂಟಿಂಗ್​ಗೆ ತೆರಳಿದರು.

ನಾನು ಅನೇಕ ನಟ-ನಟಿಯರ ಜೀವನಕ್ರಮ ಗಮನಿಸಿದ್ದೇನೆ. ಅವರ ಆರೋಗ್ಯಕ್ಕೆ ಆಹಾರಕ್ರಮ, ಯೋಗಕ್ಕೆ ನೀಡುವ ಮಹತ್ವವೂ ಕಾರಣವಾಗಿರುತ್ತದೆ. ನಾವು ಅಂಥ ನಟ-ನಟಿಯರ ಫೋಟೋವನ್ನು ಜೇಬಿನಲ್ಲಿಟ್ಟುಕೊಂಡು ಅಭಿಮಾನ ಪ್ರದರ್ಶಿಸುವ ಬದಲು ಅವರ ಆರೋಗ್ಯದ ಗುಟ್ಟು, ಪರಿಶ್ರಮದ ಜೀವನ, ಸಾಧನೆಯನ್ನು ಗಮನಿಸಿ ಅದನ್ನು ಅನುಸರಿಸಬೇಕು. ಅನೇಕ ಪ್ರಸಿದ್ಧ ನಟ-ನಟಿಯರು ನನಗಿಂತ 2-3 ಪಟ್ಟು ಹೆಚ್ಚು ಕೆಲಸ ಮಾಡುವುದು ನಿಮಗೂ ಗೊತ್ತು. ಇದು ನಿಜವಾಗಿಯೂ ಹೆಮ್ಮೆಯ ವಿಷಯ. ನಟನೆ ಕೇವಲ ದುಡ್ಡುಮಾಡುವ ವ್ಯವಹಾರವಲ್ಲ. ಅವರ ಶ್ರದ್ಧೆ, ಪ್ರಯತ್ನ ನಮಗೂ ಪ್ರೇರಣೆಯಾಗಬೇಕು.

***

* ಮನಸ್ಸು, ದೇಹ ಹಾಗೂ ಆಲೋಚನೆಗಳನ್ನು ಸ್ವಸ್ಥವಾಗಿರಿಸಲು ಯೋಗ ಸಹಕಾರಿ. ಅಷ್ಟೇ ಅಲ್ಲ ಇದು ಸೌಂದರ್ಯವರ್ಧಕ ಕೂಡ.

| ಶಿಲ್ಪಾ ಶೆಟ್ಟಿ

****

ಸನ್​ಬಾತ್

ಬಹಳಷ್ಟು ಜನರು ವಿಟಮಿನ್ ಬಿ-12 ಮತ್ತು ವಿಟಮಿನ್ ಡಿ ಬಗ್ಗೆ ಗಮನ ಕೊಡುವುದಿಲ್ಲ. ರಕ್ತಪರೀಕ್ಷೆ ಮಾಡಿಸುವಾಗ ವರ್ಷಕ್ಕೆ ಕನಿಷ್ಠಪಕ್ಷ ಒಂದು ಬಾರಿಯಾದರೂ ವಿಟಮಿನ್ ಬಿ-12 ಮತ್ತು ವಿಟಮಿನ್ ಡಿ ಪರೀಕ್ಷೆಯನ್ನೂ ಮಾಡಿಸಿದರೆ ಶೇ.80ರಷ್ಟು ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು. ವಿದೇಶಿಯರು ಲಕ್ಷಾಂತರ ರೂ. ಖರ್ಚುಮಾಡಿಯಾದರೂ ಸನ್​ಬಾತ್​ಗಾಗಿ ಭಾರತಕ್ಕೆ ಬರುವುದನ್ನು ನಾವು ಕಾಣುತ್ತೇವೆ. ಸಮುದ್ರತೀರಗಳಲ್ಲಿ ಇದು ಸಾಮಾನ್ಯ ದೃಶ್ಯ. ವಿಟಮಿನ್ ಡಿ ಪೂರೈಕೆಗೆ ಇದು ಉತ್ತಮ. ನಾನು ಕೂಡ ಮನೆಯ ಮೇಲೆ ಕುಳಿತು ವರ್ಷಕ್ಕೆ 50-60 ಬಾರಿ ಸನ್​ಬಾತ್ ಮಾಡುತ್ತೇನೆ.

***

ವಿಟಮಿನ್ ಡಿ

ಶರೀರಕ್ಕೆ ಸೂರ್ಯಕಿರಣ ಅತಿ ಅಗತ್ಯ. ಇದರಿಂದ ನೈಸರ್ಗಿಕವಾಗಿ ವಿಟಮಿನ್ ಡಿ ದೇಹಕ್ಕೆ ಲಭಿಸುತ್ತದೆ. ವಿಟಮಿನ್ ಡಿ ಕೊರತೆಯಿಂದ ಹಲವು ಆರೋಗ್ಯ ತೊಂದರೆ ಗಳಾಗುತ್ತವೆ. ಕ್ಯಾನ್ಸರ್, ಮೂಳೆ ಸವೆತ, ಮಧುಮೇಹ ಮುಂತಾದವನ್ನು ದೂರವಿಡಲು ನೆರವಾಗುತ್ತದೆ.

****

*ನಿಮ್ಮ ದೇಹವನ್ನು ಕಾಪಾಡಿಕೊಳ್ಳಿ. ಏಕೆಂದರೆ ನೀವು ಜೀವಿಸುವ ಏಕೈಕ ಸ್ಥಳ ಇದುವೇ! | ಅನಾಮಿಕ

***

*ಯೋಗವು ಜೀವನದ ಕುರಿತಾದ ನನ್ನ ದೃಷ್ಟಿಕೋನವನ್ನೇ ಬದಲಿಸಿತು. ಅದನ್ನು ಕಲಿತ ಅದೃಷ್ಟವಂತ ನಾನಾದೆ, ಫಲ ಪಡೆದೆ.

| ಡಾ. ರಾಜ್​ಕುಮಾರ್

***

ಐದು ಬಿಳಿ ವಿಷಗಳು

ನಾವು ಸಾಮಾನ್ಯವಾಗಿ 5 ಬಿಳಿಪದಾರ್ಥಗಳನ್ನು ಹೆಚ್ಚು ಸೇವಿಸುತ್ತೇವೆ. ಆದರೆ ಈ ಐದೂ ನಮ್ಮ ಆರೋಗ್ಯಕ್ಕೆ ಅತಿ ಅಪಾಯಕಾರಿ. ಅವೆಂದರೆ- ಅಕ್ಕಿ, ಸಕ್ಕರೆ, ಉಪ್ಪು, ಮೈದಾ ಮತ್ತು ಹಾಲು. ಇಂದಿನ ದಿನಮಾನದಲ್ಲಿ ಇವನ್ನು ಪೂರ್ತಿ ಬಿಡಲಾಗದಿದ್ದರು ಕೂಡ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುವುದು ಉತ್ತಮ. ಯಾವುದೇ ದೊಡ್ಡ ವ್ಯಕ್ತಿ ಮನೆಗೆ ಬಂದಾಗ ಹೆಚ್ಚು ಉತ್ತಮ ಆಹಾರ ತೆಗೆದುಕೊಳ್ಳಲು ನಾವು ಒತ್ತಾಯಪಡಿಸಿದಾಗ, ಅವರು ‘ನನಗೆ ಊಟ ಬೇಡ, ಆರೋಗ್ಯ ಸರಿಯಿಲ್ಲ. ಒಂದು ಲೋಟ ಹಾಲು, ಎರಡು ಚಮಚ ಸಕ್ಕರೆ, ಎರಡು ಪೀಸ್ ಬ್ರೆಡ್ ಕೊಡಿ’ ಎಂದು ಹೇಳುವುದು ನಮ್ಮೆಲ್ಲರ ಸಾಮಾನ್ಯ ಅನುಭವ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ನಾವು ರೋಗಿಗಳಿಗೆ ಹಾಲು ಮತ್ತು ಬ್ರೆಡ್ ಹೆಚ್ಚು ಕೊಡುತ್ತೇವೆ. ಬ್ರೆಡ್ ತಿನ್ನುವ ಪ್ರಸಂಗ ಬಂದಾಗ ಹೋಲ್ ವೀಟ್ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಹಿತಕರ.

***

ತೂಕ ಇಳಿಸುವ ಉಪಾಯ

ದೇಹದ ತೂಕ ಕಡಿಮೆ ಮಾಡಲು ಬಿಸಿನೀರು, ಜೇನುತುಪ್ಪ ಮತ್ತು ನಿಂಬೆಹಣ್ಣು ಉಪಯುಕ್ತ. ಆದರೆ ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಅನೇಕರು ಬೆಳಗ್ಗೆ ಬಿಸಿನೀರಿನಲ್ಲಿ ಜೇನುತುಪ್ಪ ಮತ್ತು ನಿಂಬೆಯನ್ನು ತೆಗೆದುಕೊಳ್ಳುತ್ತಾರೆ. ಇದು ಅಪಾಯಕಾರಿ. ಏಕೆಂದರೆ ಬೆಳಗಿನ ಖಾಲಿಹೊಟ್ಟೆಯಲ್ಲಿ ಆಸಿಡ್ ಮಾತ್ರ ಇರುತ್ತದೆ. ಅದರ ಮೇಲೆ ನಿಂಬೆರಸ ಬಿದ್ದರೆ ಆಸಿಡ್ ದ್ವಿಗುಣವಾಗುತ್ತದೆ. ಬಿಸಿಪದಾರ್ಥ ತೆಗೆದುಕೊಂಡಾಗ ಆಸಿಡ್ ಮಟ್ಟ ಹೆಚ್ಚಾಗುತ್ತದೆ. ಆದ್ದರಿಂದ ಬೆಳಗ್ಗೆ ಸಾದಾನೀರಿನಲ್ಲಿ ಜೇನುತುಪ್ಪ ತೆಗೆದುಕೊಳ್ಳಬೇಕು. ನಿಂಬೆಯೂ ಬೇಕು. ಆದರೆ ಅದನ್ನು ಅಡುಗೆಯಲ್ಲಿ ಅಥವಾ ಊಟದಲ್ಲಿ ಬಳಸಬೇಕು. ಊಟದ ಅರ್ಧಗಂಟೆ ನಂತರ ಬಿಸಿನೀರಿನಲ್ಲಿ ನಿಂಬೆರಸ ಸೇವಿಸಿದರೆ ತೊಂದರೆ ಇಲ್ಲ. ಹೊಟ್ಟೆಯ ಬೊಜ್ಜನ್ನು ಮತ್ತು ತೂಕವನ್ನು ಕಡಿಮೆ ಮಾಡಲು ಚನೇಕಾ ರೊಟ್ಟಿ (ಕಡ್ಲಹಿಟ್ಟಿನ ರೊಟ್ಟಿ) ಬಹಳ ಪ್ರಯೋಜನಕಾರಿ ಎಂದು ಬಾಬಾ ರಾಮದೇವರು ಹೇಳುತ್ತಾರೆ.

****

ಹಾಲಿನಲ್ಲಿ ಹಾಲಾಹಲ

ಸುಮಾರು 12 ವರ್ಷದ ಹಿಂದೆ ಕನ್ನಡಪ್ರಭ ಪತ್ರಿಕೆಯಲ್ಲಿ, ಹಾಲು ಎಷ್ಟು ಅಪಾಯಕಾರಿ ಎಂಬ ಬಗ್ಗೆ ಪೂರ್ತಿ ಪುಟ ಲೇಖನ ಪ್ರಕಟವಾಗಿತ್ತು. ಜಗತ್ತಿನ ಎಲ್ಲ ಪ್ರಾಣಿಗಳು ಚಿಕ್ಕವಾಗಿದ್ದಾಗ ತಾಯಿಯ ಹಾಲು ಮಾತ್ರ ಸೇವಿಸುತ್ತವೆ. ಆದರೆ ಮಾನವ ಮಾತ್ರ ಅನೇಕ ಪ್ರಕಾರದ ಹಾಲುಗಳನ್ನು ಕೊನೆ ಉಸಿರಿನವರೆಗೂ ಸೇವಿಸುತ್ತಾನೆ. ನಮ್ಮ ರೇಖಿ ಗುರುಗಳಾದ ದೆಹಲಿಯ ಶರ್ವ ಅವರು, ‘ಮಿಲ್ಕ್ ಎ ಸೈಲಂಟ್ ಕಿಲ್ಲರ್’ ಎಂಬ ಅದ್ಭುತ ಪುಸ್ತಕವನ್ನು ಬರೆದಿದ್ದಾರೆ. ನಾನು ಈವರೆಗೆ 500ಕ್ಕೂ ಹೆಚ್ಚು ಜನರಿಗೆ ಆ ಪುಸ್ತಕವನ್ನು ನೀಡಿದ್ದೇನೆ.

***

ರಾಗಿ,ಜೋಳ ಉತ್ತಮ

ವಿಶೇಷವಾಗಿ ದಕ್ಷಿಣ ಭಾರತದ ಜನರಿಗೆ ಪಾಲಿಷ್ ಮಾಡದ ಅಕ್ಕಿ, ರಾಗಿ ಮತ್ತು ಜೋಳ ಉತ್ತಮ ಆಹಾರ. ಹಾಗೆನೋಡಿದರೆ ಗೋಧಿ ಉತ್ತಮ ಆಹಾರವಲ್ಲ. ಏಕೆಂದರೆ, ಗೋಧಿಯಲ್ಲಿ ಗ್ಲುಟೇನ್ ಎಂಬ ಅಂಶ ಇದ್ದು, ಇದು ಲಿವರ್​ಗೆ ಹಾನಿಮಾಡುತ್ತದೆ.

***

* ಆರೋಗ್ಯವನ್ನು ಸಕ್ಷಮವಾಗಿರಿಸಿಕೊಳ್ಳುವುದು ಎಲ್ಲರ ಕರ್ತವ್ಯ. ಏಕೆಂದರೆ, ಸದೃಢ ದೇಹದ ಹೊರತು ಮನಸ್ಸು ಹಾಗೂ ಬುದ್ಧಿಯನ್ನು ಶಕ್ತಿಶಾಲಿಯಾಗಿರಿಸಿಕೊಳ್ಳಲು ಸಾಧ್ಯವಿಲ್ಲ.

| ಗೌತಮ ಬುದ್ಧ

***

ದೀಕ್ಷಿತರು ನೀಡಿದ ದೀಕ್ಷೆ

ಸ್ವದೇಶಿ ಆಂದೋಲನದಲ್ಲಿ ದೊಡ್ಡ ಹೆಸರಾಗಿದ್ದ ದಿ.ರಾಜೀವ ದೀಕ್ಷಿತರು ನನ್ನ ಆತ್ಮೀಯ ಮಿತ್ರರಲ್ಲೊಬ್ಬರಾಗಿದ್ದರು. ಅವರ ಅನೇಕ ಕ್ಯಾಸೆಟ್​ಗಳನ್ನು ನಾನು ಕೇಳಿದ್ದೇನೆ. ಜೀವನಶೈಲಿ ಮತ್ತಿತರ ಸಂಗತಿಗಳ ಬಗ್ಗೆ ಅವರು ಉದ್ಭೋದಕವಾಗಿ ವಿಚಾರಗಳನ್ನು ಮಂಡಿಸುತ್ತಿದ್ದರು. ಅವರ ಜೀವನದಿಂದ ಪ್ರೇರಣೆ ಪಡೆದರೆ ನಮ್ಮ ಬದುಕಿನಲ್ಲಿಯೂ ಅದ್ಭುತ ಬದಲಾವಣೆಗಳನ್ನು ತಂದುಕೊಳ್ಳಲು ಸಾಧ್ಯ ಎಂಬುದು ನನ್ನ ಅನಿಸಿಕೆ.

***

ಹೃದಯ ರಕ್ತನಾಳ ಬ್ಲಾಕೇಜ್ ನಿವಾರಣೆಗೆ

ಒಂದು ಲೋಟ ತಾಜಾ ನಿಂಬೆರಸ, ಒಂದು ಲೋಟ ತಾಜಾ ಶುಂಠಿ ರಸ, ಒಂದು ಲೋಟ ತಾಜಾ ಬೆಳ್ಳುಳ್ಳಿ ರಸ, ಒಂದು ಲೋಟ ಆಪಲ್ ಸೈಡರ್ ವಿನೇಗರ್ ಇವನ್ನು ಸರಿಯಾಗಿ ಮಿಶ್ರ ಮಾಡಿ, ಅರ್ಧಗಂಟೆ ನಿಧಾನವಾಗಿ ಕಡಿಮೆ ಬೆಂಕಿಯಲ್ಲಿ ಕುದಿಸಿ, ನಾಲ್ಕು ಲೋಟದಿಂದ ಮೂರು ಲೋಟಕ್ಕೆ ತರಬೇಕು. ನಂತರ ಆರಿಸಿ ಮೂರು ಲೋಟ ಜೇನುತುಪ್ಪದಲ್ಲಿ ಸೇರಿಸಿ ಮಿಶ್ರ ಮಾಡಿ ಬಾಟಲಿಯಲ್ಲಿ ಶೇಖರಿಸಿಡಬೇಕು. ನಿತ್ಯ ಖಾಲಿಹೊಟ್ಟೆಯಲ್ಲಿ ಮೂರು ಚಮಚ ಸೇವನೆ ಮಾಡುತ್ತ ಬಂದರೆ ಹೃದಯ ರಕ್ತನಾಳಗಳ ಬ್ಲಾಕೇಜ್ ಕ್ಲಿಯರ್ ಆಗುತ್ತದೆ.

***

ಮಧುಮೇಹ ನಿಯಂತ್ರಣಕ್ಕೆ

ಮೆಂತೆಯನ್ನು ರಾತ್ರಿ ನೆನೆಸಿಟ್ಟು, ನೀರನ್ನು ಚೆಲ್ಲಿ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಮೆಂತ್ಯಕಾಳನ್ನು ಮಾತ್ರ ಸೇವಿಸಬೇಕು. ಇದು ಮಧುಮೇಹ ನಿಯಂತ್ರಣಕ್ಕೆ ಉತ್ತಮ. ನೆನೆಸಿದ ಮೆಂತೆ ಮತ್ತು ಬೆಳ್ಳುಳ್ಳಿ ಸೇರಿಸಿ ಚಟ್ನಿ ತರಹ ರುಬ್ಬಿ ದೋಸೆ ಮತ್ತಿತರ ತಿನಿಸಿಗೆ ಹಚ್ಚಿಕೊಂಡು ತಿಂದರೆ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ.

***

ನವಣಕ್ಕಿ (Millet)

ಎಲ್ಲ ಆಹಾರದಲ್ಲಿ ಸಕ್ಕರೆ ಅಂಶ ಇರುತ್ತದೆ. ವಿಶೇಷವಾಗಿ ಅಕ್ಕಿಯಲ್ಲಿ ಸಕ್ಕರೆ ಅಂಶ ಹೆಚ್ಚಿಗೆಯಿರುತ್ತದೆ. ಹೀಗಾಗಿ ಅಕ್ಕಿಯನ್ನು ಬಳಸುವ ಜನ ಹೆಚ್ಚಿರುವ ಭಾಗದಲ್ಲಿ ಸಕ್ಕರೆಕಾಯಿಲೆ ಪ್ರಮಾಣ ಹೆಚ್ಚು. ಗೋಧಿ, ಜೋಳ ಈ ತರಹದ ಧಾನ್ಯಗಳಲ್ಲಿ ಸಕ್ಕರೆ ಪ್ರಮಾಣ ಕಡಿಮೆ. ಸಕ್ಕರೆಗೆ ಕಾರ್ಬೆಹೈಡ್ರೇಟ್ ಎನ್ನುತ್ತೇವೆ. ಅಂದರೆ ಅಕ್ಕಿಯಲ್ಲಿ ಅತಿಹೆಚ್ಚು ಕಾರ್ಬೆಹೈಡ್ರೇಟ್. ಆದರೆ ನವಣಕ್ಕಿಯಲ್ಲಿ ಕಾರ್ಬೆಹೈಡ್ರೇಟ್ ಇರುವುದಿಲ್ಲ. ಅಷ್ಟೇ ಅಲ್ಲ, ಸಾಮಾನ್ಯವಾಗಿ, ಪ್ರೋಟೀನ್ ಸಲುವಾಗಿ ಕೆಲವರಿಗೆ ಹಾಲು, ತತ್ತಿ, ಕೋಳಿ, ಮಾಂಸ, ಮೀನು ಮುಂತಾದವನ್ನು ಸೇವಿಸಲು ವೈದ್ಯರು ಸಲಹೆ ಮಾಡುತ್ತಾರೆ. ಇದು ಎಲ್ಲರಿಗೂ ಸಾಧ್ಯವಾಗದ ಮಾತು. ಇದಲ್ಲದೆ, ಮಾಂಸಾಹಾರಕ್ಕಿಂತಲೂ ಹೆಚ್ಚಿನ ಪ್ರೋಟೀನ್ ನವಣಕ್ಕಿಯಲ್ಲಿರುತ್ತದೆ. ಹೀಗಾಗಿ ಸಕ್ಕರೆಕಾಯಿಲೆ ಇರುವ ಅನೇಕರಿಗೆ ನಾನು ನವಣಕ್ಕಿಯನ್ನು ತಿನ್ನಲು ಸಲಹೆ ನೀಡುತ್ತೇನೆ. ಇದರಿಂದ ಅವರಿಗೆ ತುಂಬ ಪ್ರಯೋಜನವಾಗಿದೆ. ನನ್ನ ಆತ್ಮೀಯ ಮಿತ್ರರಲ್ಲೊಬ್ಬರಾದ, ಅಹಮದಾಬಾದಿನ ಡಾ.ಪ್ರವೀಣಭಾಯಿ ತೊಗಾಡಿಯಾ (ವಿಶ್ವ ಹಿಂದು ಪರಿಷತ್ ನಾಯಕರು) ಶ್ರೇಷ್ಠ ಕ್ಯಾನ್ಸರ್ ತಜ್ಞರು. ಅವರಿಗೆ ಸಕ್ಕರೆಕಾಯಿಲೆ ಇದೆ. ನಾನು ಅವರಿಗೆ ಜೇನುತುಪ್ಪ (ಮಾಮೂಲಿ ಅಲ್ಲ, ನೇರಳೆತೋಪಿನಲ್ಲಿ ಸಂಗ್ರಹಿಸಲಾಗಿದ್ದು) ಹಾಗೂ ನವಣಕ್ಕಿಯನ್ನು ಕಳುಹಿಸಿಕೊಟ್ಟಿದ್ದೆ. ಕಳೆದ ಒಂದು ವರ್ಷದಿಂದ ಅದರ ಉಪಯೋಗ ಮಾಡಿದ್ದರಿಂದ ಅದ್ಭುತ ಫಲಿತಾಂಶ ಸಿಕ್ಕಿದೆಯೆಂದು ನನಗೆ ಅವರು ತಿಳಿಸಿದ್ದಾರೆ.

ಬೇಗ ಪಚನವಾಗುತ್ತದೆ, ಬ್ಲಡ್ ಶುಗರ್ ನಿಯಂತ್ರಣಕ್ಕೆ ಸಹಕಾರಿ. ಮಲಬದ್ಧತೆ ಸಮಸ್ಯೆಗೆ ಪರಿಹಾರ. ಇದರಲ್ಲಿ ನಾರಿನಂಶ ಹೆಚ್ಚಿರುತ್ತದೆ. ಕೊಲೆಸ್ಟರಾಲ್ ತಗ್ಗಿಸಲು ಸಹಕಾರಿ, ಹೃದ್ರೋಗ ಅಪಾಯವನ್ನು ಕಡಿಮೆ ಮಾಡುತ್ತದೆ. ಆಂಟಿಆಕ್ಸಿಡಂಟ್, ಹೇರಳ ಪ್ರೋಟೀನ್ ಇರುತ್ತದೆ, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ, ಮಧುಮೇಹಿಗಳಿಗೆ ಉತ್ತಮ.

*****

ಹೆಲ್ದಿ ಟಿಪ್ಸ್

* ಕಬ್ಬಿನ ಹಾಲು (ಮಂಜುಗಡ್ಡೆ ರಹಿತ) ಆರೋಗ್ಯಕ್ಕೆ ಉತ್ತಮ. ಇದನ್ನು ಆಗಾಗ ಸೇವಿಸಬೇಕು.

* ಕಪ್ಪುದ್ರಾಕ್ಷಿಯನ್ನು ಬೀಜಸಹಿತ ಸೇವಿಸಬೇಕು. ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುವ ಜತೆಗೆ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಬಲ್ಲದು (ಕಪ್ಪುದ್ರಾಕ್ಷಿ ಬೀಜದಲ್ಲಿ ಕ್ಯಾನ್ಸರ್ ನಿರೋಧಕ ಅಂಶಗಳು ಹೇರಳವಾಗಿರುತ್ತವೆ).

* ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ಉಪ್ಪು ನೀರಿನ ಸ್ನಾನ( ಒಂದು ಬಕೆಟ್ ನೀರಿಗೆ ನಾಲ್ಕು ಚಮಚ ಶುದ್ಧೀಕರಿಸದ ಉಪ್ಪು ಹಾಕಿರುವುದು) ಮಾಡಬೇಕು.

* ಕಡಿಮೆ ಆಹಾರ ಸೇವಿಸಿದಷ್ಟು ಆರೋಗ್ಯಕ್ಕೆ ಒಳ್ಳೆಯದು. ಪಾಲಿಷ್ ಮಾಡದ ಅಕ್ಕಿ ಉತ್ತಮ.

* ಆಹಾರ ಸೇವನೆಯ ಅರ್ಧಗಂಟೆ ಮುನ್ನ ಹಾಗೂ ಅರ್ಧಗಂಟೆ ನಂತರ ನೀರು ಕುಡಿಯಬಹುದು.

Write A Comment