ಚಿಕ್ಕೋಡಿ: ಆಕೆ ಐದನೇ ತರಗತಿ ಓದುವ ಬಾಲಕಿ. ಪೆನ್ಸಿಲ್ ತರಲು ಅಂಗಡಿಗೆ ಹೋಗಿದ್ದಳು. ಆಗ ಕೆಲ ದುರುಳರು ಆಕೆಯನ್ನು ಅಪಹರಿಸಿ ಎಳೆದೊಯ್ಯತೊಡಗಿದ್ದಾರೆ. ಇದರಿಂದೇನು ಬಾಲಕಿ ವಿಚಲಿತಲಾಗಲಿಲ್ಲ. ಬದಲಿಗೆ ಅಪಹರಣಕಾರರಿಗೆ ಚಳ್ಳೆಹಣ್ಣು ತಿನ್ನಿಸಿ ಅವರಿಂದ ತಪ್ಪಿಸಿಕೊಂಡು ಬಂದಿದ್ದಾಳೆ.
ಅದು ಗೋಕಾಕ್ ತಾಲ್ಲೂಕಿನ ಮಲ್ಲಾಪುರ ಗ್ರಾಮ. ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ಪೆನ್ಸಿಲ್ ತರಲೆಂದು ಅಂಗಡಿಗೆ ಹೋಗಿದ್ದಳು. ಅಲ್ಲಿ ಮಹಿಳೆಯರ ವೇಷದಲ್ಲಿದ್ದ ಅಪರಿಚಿತರಿಬ್ಬರು ಆಕೆಯ ಬಾಯಿ ಮುಚ್ಚಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ಯಲು ಮುಂದಾಗಿದ್ದಾರೆ.
ಇದನ್ನು ಕಂಡ ಯುವಕನೊಬ್ಬ ಅಪಹರಣಕಾರರ ಹಿಡಿಯಲು ಬೆನ್ನಟ್ಟಿದ್ದಾನೆ. ಆಗ ಬಾಲಕಿ ತನ್ನನ್ನು ಎಳೆದೊಯ್ಯುತ್ತಿದ್ದ ಅಪಹರಣಕಾರನೊಬ್ಬನ ಕೈ ಕಚ್ಚಿದ್ದಾಳೆ. ಆಗ ಆತ ಬಾಲಕಿಯ ಕೈಬಿಟ್ಟಿದ್ದು ಕೂಡಲೇ ಅಲ್ಲಿಂದ ಓಡಿ ಹೋಗಿ ಮನೆ ಸೇರಿದ್ದಾಳೆ. ಈ ವಿಷಯ ತಿಳಿದು ಜನ ಸೇರುತ್ತಿದ್ದಂತೆ ಅಪಹರಣಕಾರರು ಪರಾರಿಯಾಗಿದ್ದಾರೆ. ಬಾಲಕಿ ತೋರಿದ ಧೈರ್ಯ, ಸಮಯ ಪ್ರಜ್ಞೆಯಿಂದ ಅಪಹರಣಕಾರರ ಕಪಿಮುಷ್ಠಿಯಿಂದ ಪಾರಾಗಿದ್ದಾಳೆ.