ಸಾಮಾನ್ಯವಾಗಿ ಕರಿಬೇವು ಅಡುಗೆಯಲ್ಲಿ ಹೆಚ್ಚು ಬಳಕೆಯಾಗುವ ಪದಾರ್ಥ. ಕರಿಬೇವಿನ ಸೊಪ್ಪು ಒಗ್ಗರಣೆಗೆ ಹಾಕದಿದ್ದರೆ ಅಡುಗೆ ಪೂರ್ಣವಾದಂತೆ ಅನಿಸುವುದಿಲ್ಲ. ಕರಿಬೇವು ಅಡುಗೆಯಲ್ಲಿ ಬಳಸಿದರೂ ಅದನ್ನು ತಿನ್ನುವವರು ಕಡಿಮೆ ಎನ್ನಬಹುದು. ಆಹಾರದಲ್ಲಿ ಕರಿಬೇವು ಕಂಡ ಕೂಡಲೇ ಅದನ್ನು ತೆಗೆದು ಪಕ್ಕಕ್ಕೆ ಇಡುವವರೇ ಜಾಸ್ತಿ ಮಂದಿ.
ಹೀಗೆ ನಾವು ನಿತ್ಯವೂ ಅಡುಗೆಯಲ್ಲಿ ಬಳಸುವ ಕರಿಬೇವಿನಲ್ಲಿ ಏನುಂಟು? ಅದರಿಂದ ಆಗುವ ಪ್ರಯೋಜನವೇನು? ಇದನ್ನು ತಿಳಿಯುವ ಆಸಕ್ತಿ ಇದೆಯೇ? ಹಾಗಾದರೆ ಮುಂದೆ ಓದಿ. ಕರಿಬೇವಿನ ಕುರಿತು ಮಾಹಿತಿ ಪಡೆಯಿರಿ.
ಎಲ್ಲರಿಗೂ ನಿತ್ಯದ ಅಡುಗೆಯಲ್ಲಿ ಬಳಕೆಯಾಗುವ ಕರಿಬೇವಿಗೆ ಔಷಧೀಯ ಗುಣಗಳಿವೆ. ಮಧುಮೇಹ ಸೇರಿದಂತೆ ಹಲವು ರೋಗಗಳಿಗೆ ಇದು ರಾಮಬಾಣ ಎನ್ನುತ್ತಾರೆ ಇದರ ಮಹತ್ವ ತಿಳಿದವರು.
ಕರಿಬೇವು ಕಬ್ಬಿಣದ ಅಂಶವನ್ನು ಹೊಂದಿದೆ. ಇದರ ಸೇವನೆ ರಕ್ತಹೀನತೆಯನ್ನು ತಡೆಗಟ್ಟುತ್ತದೆ. ಪಚನ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರ ಎಲೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ತಯಾರಿಸಿದ ತೈಲವನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುವುದು ಅಲ್ಲದೆ ಬಾಲ ನರೆ ವಾಸಿಯಾಗುವುದು. ಕಣ್ಣಿಗೂ ಇದರಿಂದ ಅನುಕೂಲವಾಗುತ್ತದೆ.
ಕರಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಮಜ್ಜಿಗೆಯಲ್ಲಿ ಮಿಶ್ರಣ ಮಾಡಿ ಸ್ವಲ್ಪ ಉಪ್ಪು ಸೇರಿಸಿ ಕುಡಿಯುವುದರಿಂದ ಅತಿಸಾರ ಭೇದಿಯು ಕಡಿಮೆಯಾಗುತ್ತದೆ. ಒಂದು ಚಮಚ ಕರಿಬೇವಿನ ಎಲೆಯ ರಸಕ್ಕೆ ಅಷ್ಟೇ ಪ್ರಮಾಣದ ನಿಂಬೆ ರಸವನ್ನು ಬೆರೆಸಿ ಸೇವಿಸುವುದರಿಂದ ಗರ್ಭಿಣಿಯರ ವಾಕರಿಕೆ ನಿವಾರಣೆಯಾಗುತ್ತದೆ. ಈಗ ತಿಳಿಯಿತೇ ಕರಿಬೇವು ಏಕೆ ತಿನ್ನಬೇಕು ಎಂದು. ಇನ್ನುಮುಂದೆ ಊಟದಲ್ಲಿ ಕರಿಬೇವು ಸಿಕ್ಕರೆ ಪಕ್ಕಕ್ಕೆ ಇಡಲ್ಲ ತಾನೆ?