ಬೆಂಗಳೂರು: ಭೂಗತ ಪಾತಕಿ ಬನ್ನಂಜೆ ರಾಜನನ್ನು ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದ ತಂಡ ಶುಕ್ರವಾರ ಸಂಜೆ ನಗರಕ್ಕೆ ಕರೆತಂದಿದೆ.
ಈತ ಆಫ್ರಿಕಾ ದೇಶದ ಮೊರಕ್ಕೋದಲ್ಲಿ ಬಂಧಿತನಾಗಿದ್ದ. ದೆಹಲಿಗೆ ಕರೆತಂದಿದ್ದ ಈತನನ್ನು ಸಂಜೆ 4.45ರ ವಿಮಾನದಲ್ಲಿ ಬೆಂಗಳೂರಿಗೆ ಕರೆತಂದಿರುವುದಾಗಿ ಮೂಲಗಳು ತಿಳಿಸಿವೆ.
ಸುಮಾರು 44 ಪ್ರಕರಣಗಳಲ್ಲಿ ಬೇಕಾಗಿರುವ ಬನ್ನಂಜೆ ರಾಜನ ಪತ್ತೆಗೆ ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲಾಗಿತ್ತು. ಬೇರೆಯವರ ಹೆಸರಿನಲ್ಲಿ ರಹಸ್ಯವಾಗಿ ವಿದೇಶಗಳಲ್ಲಿ ಪ್ರಯಾಣಿಸುತ್ತಿದ್ದ ಈತನನ್ನು ಕಳೆದ ಫೆಬ್ರವರಿ 10ರಂದು ಸಿಬಿಐ ಮೊರಕ್ಕೋದಲ್ಲಿ ಬಂಧಿಸಿತ್ತು.
ಹಫ್ತಾ ವಸೂಲಿ ದಂಧೆ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬನ್ನಂಜೆ ರಾಜನ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದರ ಜತೆ ಹೊರ ರಾಜ್ಯಗಳಲ್ಲಿಯೂ ಈತನ ವಿರುದ್ಧ ಪ್ರಕರಣಗಳಿವೆ.
ಬನ್ನಂಜೆ ರಾಜನನ್ನು ನಿನ್ನೆ ದೆಹಲಿಗೆ ಕರೆತರಲಾಗಿತ್ತು. ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಆರು ಮಂದಿ ಪೊಲೀಸ್ ಅಧಿಕಾರಿಗಳು ಇವನನ್ನು ಕರೆತರುವಾಗ ಜತೆಗಿದ್ದರು.
ಖಚಿತ ಮಾಹಿತಿ ಪ್ರಕಾರ, ರಾಜನನ್ನು ನಿನ್ನೆ ದೆಹಲಿಯಲ್ಲಿ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ತಾನು ಬೆಂಗಳೂರು ಮತ್ತು ಮಂಗಳೂರಿನಲ್ಲಿ ಅಪರಾಧ ಕೃತ್ಯಗಳನ್ನು ನಡೆಸಲು ಕರ್ನಾಟಕದ ಮೂವರು ಪೊಲೀಸರು ಸಹಾಯ ಮಾಡಿದ್ದರು ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಬನ್ನಂಜೆ ರಾಜನ ಪತ್ನಿ ಸೋನಾ ಹೇಮಂತ್ ಹೆಗ್ಡೆ ದುಬೈಯಲ್ಲಿ ವಾಸಿಸುತ್ತಿದ್ದು, ಪತಿಗೆ ಮುಂದಿನ ದಿನಗಳಲ್ಲಿ ಕಾನೂನಿನ ಹೋರಾಟಕ್ಕೆ ನೆರವು ನೀಡಲು ಬರುವ ಸಾಧ್ಯತೆಯಿದೆ. ಆಕೆ ಭಾರತಕ್ಕೆ ವಾಪಾಸಾಗುವ ವೇಳೆ ಹೆಚ್ಚಿನ ಭದ್ರತೆ ಕಲ್ಪಿಸಲಾಗುತ್ತಿದ್ದು, ಆಕೆಯನ್ನು ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ.
ಸುರಕ್ಷಿತವಾಗಿ ಮತ್ತು ನಿರ್ಭೀತಿಯಿಂದ ಭೂಗತ ಕೃತ್ಯಗಳನ್ನು ನಡೆಸುತ್ತಿದ್ದ ಬನ್ನಂಜೆ ರಾಜಾ ಯಾವಾಗ ದಕ್ಷಿಣ ಕನ್ನಡ ಮೂಲದ ಹೊಟೇಲ್ ಉದ್ಯಮಿಗೆ ಬೆದರಿಕೆಯೊಡ್ಡಿ ಭಾರೀ ಮೊತ್ತ ನೀಡುವಂತೆ ಬೇಡಿಕೆಯಿಟ್ಟನೋ, ಅದು ಅವನಿಗೆ ಮುಳುವಾಗಿ ಪರಿಣಮಿಸಿತು.