ಕರ್ನಾಟಕ

ಮುಟ್ಟಿನ ನೋವು ಮಾತ್ರೆಯಲ್ಲಿಲ್ಲ

Pinterest LinkedIn Tumblr

novuಇಂದು, ನಾಳೆ ಅಥವಾ ನಾಡಿದ್ದೇ ಆದರೂ ಅದು ಬರುವುದಂತೂ ಗ್ಯಾರಂಟಿ. ಅದನ್ನು ನೆನಪಿಸಿಕೊಂಡರೆ ಸಾಕು ಕ್ಕದೊಂದು ಕಂಪನ. ಹಣೆಯ ಮೇಲೆಲ್ಲ ಬೆವರಿನ ಸಿಂಚನ.

ಇನ್ನೇನು ಮುಟ್ಟು ಆರಂಭವಾಗಿ ಬಿಟ್ಟಿದೆ. ಹೊಟ್ಟೆ ಕಿವುಚಿದಂತಾಗಿ, ಮೈ ಮನವೆಲ್ಲ ಉಡುಗಿ ಹೋದಂತಹ ಅನುಭವ. ತೀರ ನಿತ್ರಾಣವಾಗಿಸುವ ವಾಂತಿ,ತಲೆಸುತ್ತು. ಅದು ನೋವಾ, ಉರಿಯಾ ಅಂತ ಹೇಳಲಿಕ್ಕಾಗದಂತಹ ವಿಚಿತ್ರ ವೇದನೆ ಸೊಂಟದಿಂದ ಮೊಣಕಾಲವರೆಗೂ ಆವರಿಸಿದಂತಾಗುತ್ತದೆ.

ಮುಟ್ಟಿನಲ್ಲಿ ಕಾಣಿಸಿಕೊಳ್ಳುವ ನೋವು ಸಹಜ. ಕೆಲವೊಮ್ಮೆ ಅಸಹಜವಾಗಬಹುದಾದರೂ ತೀರ ಸಾಮಾನ್ಯ ನೋವನ್ನು ನಿಯಂತ್ರಿಸಲಾಗದ ಮಹಿಳೆಯರು ಇತ್ತೀಚೆಗೆ ಹೆಚ್ಚೆಚ್ಚು ನೋವು ನಿವಾರಕ ಮಾತ್ರೆಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ.

ಡಿಸ್‌ಮೆನೋರಿಯಾ ಅಥವಾ ನೋವಿನ ಮುಟ್ಟು ದೇಹಕ್ಕಿಂತಲೂ ಮನಸ್ಸನ್ನು ಹೆಚ್ಚು ನಡುಗಿಸುತ್ತದೆ. ಅದೇ ಕಾರಣಕ್ಕೆ 2-3 ದಿನಗಳ ಮಟ್ಟಿಗೆ ನೋವನ್ನು ಮರೆಸುವ ಮಾತ್ರೆಯನ್ನು ತೆಗೆದುಕೊಳ್ಳುತ್ತಾರೆ. ಮುಟ್ಟಿನ ನೋವಿಗೆ ನೀಡುವ ಮಾತೆ ಅಥವಾ ಪ್ರಮಾಣ ಒಬ್ಬರಿಂದ ಒಬ್ಬರಿಗೆ ಬೇರೆಯಾಗಿರಬಹುದು. ಆದರೆ ಬಹುತೇಕ ಮಹಿಳೆಯರು ವೈದ್ಯರ ಸಲಹೆ ಇಲ್ಲದೆ ಮುಟ್ಟಿನ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುತ್ತಾರೆ. ಆದರೆ ಪ್ರತಿ ಮುಟ್ಟಿನ ಅವಧಿಗೂ ಇದರ ಮೇಲಿನ ಅವಲಂಬನೆ ಇದೆಯಲ್ಲ, ಅದೇ ಚಟವಾಗಿ ಪರಿಣಮಿಸುತ್ತದೆ.

ಪ್ರತಿ ತಿಂಗಳು ನೋವಿನ ತೀವ್ರತೆ ಹೆಚ್ಚು ಇರುತ್ತದೆಯಾ ಅಥವಾ ಕಮ್ಮಿ ಇರುತ್ತದೆ ಎನ್ನುವುದಲ್ಲ ಪ್ರಶ್ನೆಯೇ ಅಲ್ಲ, ಮುಟ್ಟು ಶುರುವಾಯ್ತು ಅಂತಾದ್ರೆ ಮಾತ್ರೆ ಜತೆಗಿರಬೇಕು ಅನ್ನುವ ಮಟ್ಟಿಗಿನ ಅವಲಂಬನೆ ಇದು. ನಿದ್ರೆ ಮಾತ್ರೆ ತೆಗೆದುಕೊಳ್ಳುವ ಚಟವಿದೆಯಲ್ಲ, ಅಂಥದ್ದೇ ಚಟ. ಆದರೆ ಇದು ತಿಂಗಳ ಕೆಲವೇ ದಿನಗಳಿಗೆ ಸೀಮಿತ ಅನ್ನುವುದು ಸಮಾಧಾನದ ಸಂಗತಿಯಾದರೂ ಇದರ ಅಡ್ಡ ಪರಿಣಾಮಗಳು ಸಾಕಷ್ಟಿವೆ.

ನೋವಿನ ಮಾತ್ರೆಯ ಅಡ್ಡ ಪರಿಣಾಮ

ಆ ದಿನಗಳ ನೋವಿಂದ ಪಾರಾಗಲು ಕೆಲವರು ನೋವು ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಅದು ಒಂದೆರಡು ಬಾರಿ ಅಲ್ಲ, ಪ್ರತಿ ಮುಟ್ಟಿನ ಅವಧಿಯಲ್ಲೂ ಆ ಮಾತ್ರೆ ಇಲ್ಲ ಅಂದರೆ ಪರದಾಡಿ ಬಿಡುತ್ತಾರೆ. ಇನ್ನೂ ಕೆಲವರು ಹೊಟ್ಟೆನೋವು ಅಂದರೆ ಎಂಥದ್ದೋ ರೋಗದ ಲಕ್ಷಣ ಅಂತ ಪದೇಪದೆ ವೈದ್ಯರ ಬಳಿ ಹೋಗಿ ಮಾತ್ರೆ, ಔಷಧ ಸೇವಿಸುವುದುಂಟು. ಹೀಗೆ ತೆಗೆದುಕೊಳ್ಳುವ ಮಾತ್ರೆಯ ಪ್ರಮಾಣದಲ್ಲಿ ವ್ಯತ್ಯಯವಾಗಿ ಅದು ಸಂತಾನೋತ್ಪತ್ತಿಯ ಮೇಲೆ ಕೂಡ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ವೈದ್ಯರನ್ನು ಸಂಪರ್ಕಿಸದೇ ನೋವು ನಿವಾರಕ ಮಾತ್ರೆ ಸೇವಿಸುವುದು ಇನ್ನಿತರ ಗಂಭೀರ ತಂದಿಡಬಹುದು ಎನ್ನುತ್ತಾರೆ ತಜ್ಞರು.

ಅತಿಯಾದ ಮಾತ್ರೆ ಸೇವನೆ ನೇರವಾಗಿ ಮೂತ್ರಪಿಂಡದ ಮೇಲಾಗುತ್ತದೆ. ಮೂತ್ರಪಿಂಡ ವೈಫಲ್ಯ ಕೂಡ ಆಗಬಹುದು. ಅದೇ ರೀತಿ ಕರುಳಿನ ಸಮಸ್ಯೆ ಕೂಡ ಇದು ಜತೆಗಿಟ್ಟುಕೊಂಡು ಬರುತ್ತದೆ.

ಹಾಗಂತ ನೋವು ತಡೆದುಕೊಂಡು ಬಿಡಿ ಅಂತಲ್ಲ, ಮನೆಯಲ್ಲೇ ಸಿಗುವ ನೈಸರ್ಗಿಕ ವಸ್ತುಗಳನ್ನು ಮುಟ್ಟಿನ ಸಂದರ್ಭದಲ್ಲಿ ಬಳಸಿಕೊಂಡು ನೋವಿನಿಂದ ಪಾರಾಗಿ. ಹೊಟ್ಟೆ ನೋವು ಅನ್ನೋದು ಗಂಭೀರ ಸಮಸ್ಯೆ ಅಲ್ವೇಅಲ್ಲ. ಅದ್ರಲ್ಲೂ ಹರೆಯದಲ್ಲಿ ಕಾಣಿಸಿಕೊಳ್ಳುವಂಥ ಪುಟ್ಟ ನೋವುಗಳ ಬಗ್ಗೆ ಚಿಂತಿಸಬೇಕಿಲ್ಲ. ಸಹಜ ನೋವು ಕಾಣಿಸಿಕೊಂಡಾಗ ಅಥವಾ ಮುಟ್ಟು ನಿಲ್ಲುವ ವಯಸ್ಸಿನಲ್ಲಿ ಗಂಭೀರ ನೋವು ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸಬೇಕು.

ಹೀಗ್ಮಾಡಿ
* ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಿ.

* ಆಹಾರದಲ್ಲಿ ಕಬ್ಬಿಣಾಂಶ, ವಿಟಮಿನ್ ಹೆಚ್ಚಿರಲಿ.

* ಹಸಿ ಹೊಟ್ಟೆಯಲ್ಲಿ ಬಿಸಿ ನೀರಲ್ಲಿ ಚೂರು ಇಂಗು ತೆಗೆದುಕೊಂಡರೆ ನೋವು ನಿವಾರಣೆಯಾಗುತ್ತದೆ.

* ನಿಮ್ಮ ಕಿಬ್ಬೊಟ್ಟೆ ಮೇಲೆ ಬಿಸಿ ನೀರಿನ ಬಾಟಲ್ ಇರಿಸಿ ಶಾಖ ತೆಗೆದುಕೊಳ್ಳಿ.

* ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ತುಪ್ಪವನ್ನು ಬೆರೆಸಿ ಕುಡಿದರೆ ನೋವು ನಿಯಂತ್ರಣಕ್ಕೆ ಬರುತ್ತದೆ.

* ಹೆಚ್ಚು ಹಣ್ಣು ಸೇವಿಸಿ.

* ನೀರಿಗೆ ಅರಿಶಿನ ಹಾಕಿಕೊಂಡು ಕುಡಿಯಬಹುದು.

* ಆಗಾಗ ಎಳೆನೀರು ಕುಡಿಯಿರಿ.

* ಬಿಸಿಯಾದ ಪದಾರ್ಥ ಸೇವಿಸಿ.

* ನಾರಿನಾಂಶವಿರುವ ತರಕಾರಿಗಳನ್ನು ಹೆಚ್ಚೆಚ್ಚು ತಿನ್ನಿ.

—–

ನೋವು ಕಾಮನ್ ಮುಟ್ಟು ಆರಂಭವಾದ ಕೆಲವು ವರ್ಷಗಳ ನಂತರ ಹಾರ್ಮೋನ್ ಪ್ರಭಾವ, ಸಂತಾನೋತ್ಪತ್ತಿ ಪ್ರಕ್ರಿಯೆಗೆ ಸಿದ್ಧವಾಗುವ ಹಂತದಲ್ಲಿ ಮುಟ್ಟಿನ ನೋವು ಶುರುವಾಗುತ್ತದೆ. ಸಾಮಾನ್ಯವಾದ ನೋವು ಎಲ್ಲರಲ್ಲೂ ಸಹಜ. ಅದನ್ನು ತಡೆದುಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು. ಅನಗತ್ಯವಾಗಿ ಅದಕ್ಕೆ ಔಷಧೋಪಚಾರ ಬೇಡ. ಆದರೆ ಅತಿಯಾದ ನೋವು ಕ್ಯಾನ್ಸರ್ , ಗಡ್ಡೆ, ಸೋಂಕು ಮತ್ತಿತರ ಗಂಭೀರ ಸಮಸ್ಯೆ ಇರಬಹುದು. ನೋವು ನಿವಾರಕ ಮಾತ್ರೆ ಆ ಕ್ಷಣದ ನೋವು ನಿವಾರಿಸಿ ಗಂಭೀರ ರೋಗವನ್ನು ಪತ್ತೆ ಹಚ್ಚುವ ಅವಧಿಯನ್ನು ಮುಂದೂಡಬಹುದು. ಅದಲ್ಲದೆ ಪ್ರತಿಯೊಬ್ಬರ ನೋವು ಬೇರೆಯದೇ ಆಗಿರುತ್ತದೆ. ಆದ್ದರಿಂದ ಮುಟ್ಟಿನ ನೋವಿನ ಮಾತ್ರೆ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯುವುದು ಮುಖ್ಯ. ವೈದ್ಯರೇ ಒಪ್ಪಿಗೆ ಸೂಚಿಸಿದ್ದರೂ ಕೂಡ ತೀರ ಅನಿವಾರ‌್ಯ ಸಂದರ್ಭದಲ್ಲಿ ಅಪರೂಪಕ್ಕೊಮ್ಮೆ ಉಪಯೋಗಿಸಿದರೆ ಸಾಕಷ್ಟೆ. * ಡಾ. ಪದ್ಮಿನಿ ಪ್ರಸಾದ್, ಸ್ತ್ರೀ ರೋಗ ತಜ್ಞೆ

Write A Comment