ಶಿವಮೊಗ್ಗ: ಭಕ್ತಿಯ ಪರಕಾಷ್ಟೆಯಲ್ಲಿ ದೇವರ ಧ್ಯಾನ ಮಾಡುತ್ತಾ ತ್ರಿಶೂಲವನ್ನು ಕೆನ್ನೆಗೆ, ನಾಲಿಗೆಗೆ ಚುಚ್ಚಿಕೊಂಡ ಭಕ್ತರು ಹಾಗೂ ಬೆನ್ನಿಗೆ ಉದ್ದನೆಯ ಕೊಕ್ಕೆ ಸಿಕ್ಕಿಸಿಕೊಂಡು ರಥವನ್ನು ಎಳೆಯುತ್ತಿದ್ದರೆ ಅಲ್ಲಿದ್ದವರೆಲ್ಲ ಹರೋಹರ ಹರೋಹರ ಎಂದು ದೇವರ ನಾಮ ಸ್ಮರಣೆ ಮಾಡುತ್ತಿದ್ದರು.
ಈ ದೃಶ್ಯ ಕಂಡು ಬಂದಿದ್ದು ಶಿವಮೊಗ್ಗದ ಗುಡ್ಡೆಕಲ್ ಶ್ರೀ ಬಾಲ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆಯಲ್ಲಿ. ಅಡಿ ಕೃತಿಕೆ ಮಹೋತ್ವವ ಅಂಗವಾಗಿ ಭಕ್ತರು ಕಾವಡಿಯನ್ನು ಹೊತ್ತು ದೇವರ ಸ್ಮರಣೆ ಮಾಡುತ್ತ ಬೆಟ್ಟದ ಕಡೆ ಸಾಗುತ್ತಿದ್ದರೆ ಭಕ್ತರ ಭಕ್ತಿಯನ್ನು ಕಂಡ ಜನ ಭಾವ ಪರವಶರಾದರು. ದೇವರ ಹರಕೆ ತೀರಿಸಲು ಹಲವಾರು ಕಿ.ಮೀ. ದೂರದಿಂದ ಸುರಿಯುವ ಮಳೆಯನ್ನು ಲೆಕ್ಕಿಸದೆ ಭಕ್ತರು ಕಾವಡಿ ಹೊತ್ತು ಸಾಗಿದ್ದು ವಿಶೇಷವಾಗಿತ್ತು.
ಗುಡ್ಡೆಕಲ್ ಶ್ರೀ ಬಾಲ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆಗೆ ಭಕ್ತರು ಅಗಮಿಸಿ ಹರಕೆಯನ್ನು ತೀರಿಸುತ್ತಾರೆ. ಕೆಲವರು ಕಾವಡಿ ಹೊತ್ತು ಸಾಗಿದರೆ ಮತ್ತೆ ಕೆಲವರು ಶೂಲ ತಂತಿಯನ್ನು ಚುಚ್ಚಿಕೊಂಡಿದ್ದರು ಮತ್ತೆ ಕೆಲವರು ಬೆನ್ನಿಗೆ ಕೊಕ್ಕೆಯಿಂದ ಸಿಕ್ಕಿಸಿಕೊಂಡು ಸಣ್ಣ ರಥ ಎಳೆದರು. ಈ ಸಂದರ್ಭದಲ್ಲಿ ಕಿವಿಗಡುಚಿಕ್ಕುತ್ತಿದ್ದ ವಾದ್ಯ ಮೇಳಕ್ಕೆ ದೇವ ನಾಮ ಸ್ಮರಣೆಯಿಂದ ಹರಕೆ ತೀರಿಸುವವರು ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರು.