ಭದ್ರಾವತಿ: ವಾಹನ ಸವಾರರು ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವುದು ಸಾಮಾನ್ಯ, ಇದರೊಂದಿಗೆ ಕ್ರಿಕೆಟ್ ಆಟಗಾರರು, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರೂ ಹೆಲ್ಮೆಟ್ ಧರಿಸುವುದನ್ನು ಕಂಡಿದ್ದೇವೆ. ಅವು ಸಾಮಾನ್ಯವಾಗಿ ಪ್ಲಾಸ್ಟಿಕ್ ನಲ್ಲಿ ಮಾಡಿದವು.
ಆದರೆ ಭದ್ರಾವತಿಯ ವ್ಯಕ್ತಿಯೊಬ್ಬರು ವಿಶೇಷವಾಗಿ ಚಿನ್ನದ ಹೆಲ್ಮೆಟ್ ತಯಾರಿಸಿ ಗಮನ ಸೆಳೆದಿದ್ದಾರೆ. ಅದೂ ಕೂಡ ಕೇವಲ 50 ಮಿಲಿ ಗ್ರಾಂ.ನಲ್ಲಿ. ತೇಜಸ್ವಿನಿ ಜ್ಯುವೆಲ್ಲರಿ ವರ್ಕ್ಸ್ ನ ರವಿಚಂದ್ರ ಅವರು ಇಂತಹ ಅಪರೂಪದ ಕುಸುರಿ ಕೆಲಸದ ಮೂಲಕ ಗಮನ ಸೆಳೆದಿದ್ದಾರೆ.
ಎರಡು ವಾರ ಕಾಲ ಶ್ರಮ ವಹಿಸಿ ತಯಾರಿಸಿರುವ ಈ ಚಿನ್ನದ ಹೆಲ್ಮೆಟ್ 2.5 ಮಿ.ಮೀ. ಎತ್ತರವಿದೆ. 3 ಮಿ.ಮೀ. ಅಗಲವಿದೆ. ಬೆಂಕಿಕಡ್ಡಿಯ ಮದ್ದಿಗಿಂತಲೂ ಚಿಕ್ಕದಾಗಿರುವ ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಕಲಾವಿದನ ಕೈಚಳಕ ಕಾಣುತ್ತದೆ.
ಈ ಕಾರ್ಯಕ್ಕಾಗಿ ಅವರಿಗೆ ತಮಿಳುನಾಡಿನ ತಿರುಚಿಯಲ್ಲಿರುವ ‘ಇಂಡಿಯನ್ ಅಚೀವರ್ ಬುಕ್ ಆಫ್ ರೆಕಾರ್ಡ್ಸ್’ ಪ್ರಶಸ್ತಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಹಿಂದೆ 5 ಗ್ರಾಂ ಬೆಳ್ಳಿಯಲ್ಲಿ ಟೇಬಲ್ ಫ್ಯಾನ್, 150 ಹಾಗೂ 20 ಮಿಲಿ ಗ್ರಾಂ ಚಿನ್ನದಲ್ಲಿ ಕ್ರಿಕೆಟ್ ವಿಶ್ವಕಪ್ ತಯಾರಿಸಿ ರವಿಚಂದ್ರ ಗಮನ ಸೆಳೆದಿದ್ದರು. ಚಿನ್ನದ ಹೆಲ್ಮೆಟ್ ಅನ್ನು ಮೈಕ್ರೋ ಆರ್ಟ್ ಸಂಸ್ಥೆ ಲಿಮ್ಕಾ, ಹಾಗೂ ಗಿನ್ನಿಸ್ ರೆಕಾರ್ಡ್ ಗೆ ಕಳಿಸುವ ಅಭಿಲಾಷೆ ರವಿಚಂದ್ರ ಅವರದು.