ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಕೈಕೊಟ್ಟಿರುವ ಮುಂಗಾರು ಮುಂದಿನ ದಿನಗಳಲ್ಲೂ ಚೇತರಿಸಿಕೊಳ್ಳುವ ಲಕ್ಷಣ ಕಾಣುತ್ತಿಲ್ಲ. ಸರಾಸರಿ ಮಳೆಯಂತೆ ರಾಜ್ಯದಲ್ಲಿ ಈಗಾಗಲೇ ಶೇ.25ರಷ್ಟು ಮಳೆ ಕೊರತೆ ಉಂಟಾಗಿದೆ. ಇದರ ಮಧ್ಯೆ ಮುಂದಿನ ಐದು ದಿನಗಳಲ್ಲಿ ಕರಾವಳಿ ಹೊರತುಪಡಿಸಿದರೆ ಹೆಚ್ಚಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಕ್ಷೀಣಿಸಿದೆ. ಆದರೆ, ಮಧ್ಯಪ್ರದೇಶದ ಬಳಿ ಉಂಟಾಗಿರುವ ಕೊಮೆನ್ ಚಂಡಮಾರುತ ಈಗ ದುರ್ಬಲವಾಗಿ ವಾಯುಭಾರ ಕುಸಿತ ಕಂಡುಬಂದಿದೆ. ಇದರ ಪ್ರಭಾವ ಸದ್ಯ ಮಧ್ಯಪ್ರದೇಶದಲ್ಲಿ ತೀವ್ರವಾಗಿದ್ದು, ಉತ್ತರ ಕರ್ನಾಟಕದ ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಜೂನ್‍ನಿಂದ ಆಗಸ್ಟ್ 4ರವರೆಗೂ ರಾಜ್ಯದಲ್ಲಿ
ಸರಾಸರಿ 455 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಕೇವಲ 355 ಮಿ.ಮೀ. ಮಾತ್ರ ಮಳೆಯಾಗಿದೆ.
ಅಂದರೆ ಸುಮಾರು ಶೇ.25ರಷ್ಟು ಮಳೆ ಕೊರತೆ ಉಂಟಾಗಿದೆ. ಇದೇ ರೀತಿ ಕರಾವಳಿಯಲ್ಲಿಶೇ.27ರಷ್ಟು ಮಳೆ ಕೊರತೆಯಾಗಿದ್ದು, ಉತ್ತರ ಕರ್ನಾಟಕದಲ್ಲಿ ಶೇ.47ರಷ್ಟು ಕಡಿಮೆಯಾಗಿದೆ. ಹಾಗೆ ನೋಡಿದರೆ ದಕ್ಷಿಣ ಕರ್ನಾಟಕದ ಕೆಲವೆಡೆ ಮಳೆಯಾಗಿದ್ದು, ಇಲ್ಲಿ ಶೇ.11ರಷ್ಟು ಮಾತ್ರ ಕೊರತೆ ಉಂಟಾಗಿದೆ. ಈಗಾಗಲೇ ಸಂಪೂರ್ಣ ದುರ್ಬಲವಾಗಿರುವ ಮುಂಗಾರು ಮುಂದಿನ ದಿನಗಳಲ್ಲಿ ಚೇತರಿಸಿಕೊಳ್ಳುತ್ತದೆ ಎಂಬ ರೈತರ ಆಶಾಭಾವನೆಗೂ ನೀರೆರೆಯುವಂತೆ ಕಾಣುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಕರಾವಳಿ ಮತ್ತು ಮಲೆನಾಡಿನ ಕೆಲವು ಕಡೆ ಭಾರಿ ಮಳೆಯಾಗುತ್ತದೆ. ಅದೇ ರೀತಿ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತದೆ. ಆದ್ದರಿಂದ ಸದ್ಯಕ್ಕೆ ರಾಜ್ಯಾದ್ಯಂತ ಹೆಚ್ಚಿನ ಮಳೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹವಾಮಾನ ಇಲಾಖೆ ಪ್ರಭಾರ ನಿರ್ದೇಶಕಿ ಗೀತಾ ಹೇಳಿದ್ದಾರೆ.