ಕರ್ನಾಟಕ

200 ಮಂದಿ ಬೌದ್ಧ ಧರ್ಮಕ್ಕೆ: ವಿನಯ ರಖ್ಖಿತ ಭಂತೇಜಿಯಿಂದ ಹಿಂದೂಧರ್ಮದ ವಿರುದ್ಧ ಉಗ್ರ ಟೀಕೆ

Pinterest LinkedIn Tumblr

budhhಬೆಂಗಳೂರು, ಆ.2: ‘ಹಿಂದೂಧರ್ಮ ಎನ್ನುವುದು ಒಂದು ವಿಷದ ಜಂತುವಿದ್ದಂತೆ. ಮೊದಲು ಅದನ್ನು ಮನೆಯಿಂದ ಹೊರಗೆ ಹಾಕಿ. ಅದು ಪ್ರೀತಿಯಿಂದ ಮುತ್ತು ಕೊಟ್ಟರೂ ಅಥವಾ ದ್ವೇಷದಿಂದ ಕಚ್ಚಿದರೂ ಸಾವು ನಿಶ್ಚಿತ’ ಎಂದು ಲೋಕರತ್ನ ಬುದ್ಧವಿಹಾರ ಸ್ಫೂರ್ತಿಧಾಮದ ವಿನಯ ರಖ್ಖಿತ ಭಂತೇಜಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಜೈ ಭೀಮ್ ಭವನದಲ್ಲಿ ಏರ್ಪಡಿಸಿದ್ದ ಕರ್ನಾಟಕ ಬೌದ್ಧ ಸಮಾಜದ ಉದ್ಘಾಟನೆ ಹಾಗೂ ಧಮ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಗವಾನ್ ಬುದ್ಧ, ಸಾಮ್ರಾಟ್ ಅಶೋಕ, ಡಾ.ಅಂಬೇಡ್ಕರ್ ಹಾಗೂ ಮಹಾತ್ಮಾ ಜ್ಯೋತಿಬಾ ಫುಲೆ ಸೇರಿದಂತೆ ಹಲವರು ಹಿಂದೂಧರ್ಮದಲ್ಲಿನ ಕೊಳಕು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರು. ಆದರೆ ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ ಎಂದರು.
ಹಿಂದೂಧರ್ಮ ಎಂಬ ನೀರಿನಲ್ಲಿ ಜಾತಿ ವ್ಯವಸ್ಥೆ ಎಂಬ ಮೊಸಳೆಯಿದ್ದು, ನೀರಿಗಿಳಿದರೆ ಆ ಮೊಸಳೆಯಿಂದ ಎಂತಹ ಪರಾಕ್ರಮಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಹಿಂದೂಧರ್ಮದಿಂದ ದೂರವಿರಿ ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಬ್ರಾಹ್ಮಣ್ಯ, ಹಿಂದೂಧರ್ಮ ಎಂಬುದು ಹಾವಿನ ಹಲ್ಲುಗಳಾಗಿದ್ದು, ಜಾತಿ ವ್ಯವಸ್ಥೆ ಎಂಬ ವಿಷ ಆ ಹಲ್ಲುಗಳಲ್ಲಿ ತುಂಬಿದೆ. ಆ ವಿಷವನ್ನು ತೆಗೆದರೂ ಒಂದು ವಾರದ ನಂತರ ವಿಷ ಮತ್ತೆ ಬರುತ್ತದೆ. ವಿಷ ಸಂರ್ಪೂವಾಗಿ ತೆಗೆಯಬೇಕೆಂದರೆ ಅದರ ಹಲ್ಲುಗಳನ್ನು ಕೀಳಬೇಕು. ಹಲ್ಲುಗಳನ್ನು ಕಿತ್ತರೆ ಹಾವು ಸಾಯುತ್ತದೆ. ಇಲ್ಲದಿದ್ದರೆ ಆ ಹಾವು ವಿಷಕಾರುತ್ತಲೇ ಇರುತ್ತದೆ ಎಂದು ಅವರು ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ವೈದಿಕ ಧರ್ಮವು ಧರ್ಮ ಎಂಬುದು ಸ್ಥಿರವಾದದ್ದು ಎಂದು ಪ್ರತಿಪಾದಿಸುತ್ತಿತ್ತು. ಆದರೆ, ಬೌದ್ಧಧರ್ಮ ಅದು ಸ್ಥಿರವಲ್ಲ ಚಲನ ಶೀಲತೆಯನ್ನು ಹೊಂದಿದೆ ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಬೌದ್ಧಧಮ್ಮಕ್ಕೆ ಸೇರಿದ್ದಾರೆಂದು ದಲಿತರು ಅಂಧ ನಂಬಿಕೆಯಿಂದ ಧಮ್ಮ ದೀಕ್ಷೆ ಪಡೆಯುವುದೂ ಒಂದು ಮೂಢ ನಂಬಿಕೆಯಾಗಿದೆ. ಹೀಗಾಗಿ ಮೊದಲು ಬೌದ್ಧಧರ್ಮದ ಸಿದ್ಧಾಂತ ಹಾಗೂ ಧಮ್ಮದ ಕುರಿತು ತಿಳಿದು ನಂತರ ದೀಕ್ಷೆ ಪಡೆಯಬೇಕು ಎಂದು ಸಲಹೆ ಮಾಡಿದರು.
ವೈದಿಕರು ಉದ್ದೇಶಪೂರ್ವಕವಾಗಿ ಬುದ್ಧನನ್ನು ದೇಶದಿಂದ ಓಡಿಸಿದರು. ಆದರೆ, ಬುದ್ಧ ದೇವರನ್ನು ಬಿಟ್ಟು ಹೋದ ಮೇಲೆ ಭಾರತ ಅಧೋಗತಿಗೆ ಇಳಿದಿದೆ. ದೇಶದಲ್ಲಿ ಬುದ್ಧನನ್ನು ಎಲ್ಲರೂ ಮರೆತ ಸಂದರ್ಭದಲ್ಲಿ ಅವರನ್ನು ಮತ್ತೆ ಪರಿಚಯಿಸಿದ್ದು, ಡಾ.ಅಂಬೇಡ್ಕರ್ ಎಂದು ವಿವರಿಸಿದರು.
ಆರಂಭದಲ್ಲೇ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್, ಜಗತ್ತಿಗೆ ಸಮಾನತೆಯನ್ನು ಸಾರಿದ ಮೊದಲ ವ್ಯಕ್ತಿ ಎಂದರೆ ಅದು ಬುದ್ಧ. ಅವರು ತಾನು ಎಲ್ಲಿಯೂ ತನ್ನನ್ನು ದೇವ ಮಾನವನಾಗಿ, ದೇವರ ಪ್ರತಿನಿಧಿಯಾಗಿ ಗುರುತಿಸಿಕೊಂಡಿಲ್ಲ. ನಾನು ನಿಮ್ಮಂತೆಯೇ ಒಬ್ಬ ಮನುಷ್ಯ ಎಂಬುದನ್ನು ಅವರು ಜಗತ್ತಿಗೆ ಸಾರಿ ಹೇಳುತ್ತಿದ್ದರು ಎಂದು ತಿಳಿಸಿದರು.
ಮನುಷ್ಯನನ್ನು ಮನುಷ್ಯನಾಗಿ ಕಾಣುವ ಏಕೈಕ ಧಮ್ಮ ಎಂದರೆ ಅದು ಬೌದ್ಧ ಧಮ್ಮ. ನಾನು ಮಾರ್ಗದಾತನೇ ಹೊರತು ಮೋಕ್ಷದಾತನಲ್ಲ ಎಂದು ಬುದ್ಧ ಹೇಳಿದ್ದರು ಎಂದು ಬಂಜಗೆರೆ ಜಯಪ್ರಕಾಶ್ ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 200ಕ್ಕೂ ಹೆಚ್ಚು ಮಂದಿ ಬೌದ್ಧಧಮ್ಮ ದೀಕ್ಷೆಯನ್ನು ಸ್ವೀಕರಿಸಿದರು. ಸಮಾರಂಭದಲ್ಲಿ ಕರ್ನಾಟಕ ಬೌದ್ಧ ಸಂಘಟನೆ ಅಧ್ಯಕ್ಷ ಹ.ರಾ.ಮಹೇಶ್, ಉಪಾಧ್ಯಕ್ಷ ಬಿ.ರಮೇಶ್, ಚಾಮರಾಜನಗರದ ನಳಂದ ಬುದ್ಧವಿಹಾರ ಬೋಧಿದತ್ತ ಭಂತೇಜಿ ಸೇರಿ ಪ್ರಮುಖರು ಭಾಗವಹಿಸಿದ್ದರು.

ಬ್ರಾಹ್ಮಣ್ಯ, ಹಿಂದೂಧರ್ಮ ಎಂಬುದು ಹಾವಿನ ಹಲ್ಲುಗಳಾಗಿದ್ದು, ಜಾತಿ ವ್ಯವಸ್ಥೆ ಎಂಬ ವಿಷ ಆ ಹಲ್ಲುಗಳಲ್ಲಿ ತುಂಬಿದೆ. ಆ ವಿಷವನ್ನು ತೆಗೆದರೂ ಒಂದು ವಾರದ ನಂತರ ವಿಷ ಮತ್ತೆ ಬರುತ್ತದೆ. ವಿಷ ಸಂಪೂರ್ಣವಾಗಿ ತೆಗೆಯಬೇಕೆಂದರೆ ಅದರ ಹಲ್ಲುಗಳನ್ನು ಕೀಳಬೇಕು. ಹಲ್ಲುಗಳನ್ನು ಕಿತ್ತರೆ ಹಾವು ಸಾಯುತ್ತದೆ. ಇಲ್ಲದಿದ್ದರೆ ಆ ಹಾವು ವಿಷಕಾರುತ್ತಲೇ ಇರುತ್ತದೆ.
ವಿನಯ ರಖ್ಖಿತ ಭಂತೇಜಿ, ಲೋಕರತ್ನ ಬುದ್ಧವಿಹಾರ, ಸ್ಫೂರ್ತಿಧಾಮ

ನಮ್ಮಲ್ಲಿ ದಲಿತ ರಾಜಕೀಯ ನಾಯಕರು ಹಲವರಿದ್ದು, ನಮಗೆ ಸಾಂಸ್ಕೃತಿಕ ನಾಯಕರ ಅಗತ್ಯವಿದೆ. ಕವಿ ಡಾ.ಸಿದ್ದಲಿಂಗಯ್ಯ ಹಾಗೂ ಸಾಹಿತಿ ದೇವನೂರ ಮಹದೇವ ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, ದಲಿತರ ಸಾಂಸ್ಕೃತಿಕ ನಾಯಕರಂತೆ ಕೆಲಸ ಮಾಡುವುದನ್ನು ಮರೆಯಬಾರದು.
ಡಾ.ಬಿ.ಕೆ.ಎಸ್.ವರ್ಧನ್, ಬೌದ್ಧ ಸಂಶೋಧಕ

Write A Comment