ಕರ್ನಾಟಕ

ಅಭಿಮಾನ್ ಸ್ಟುಡಿಯೋದಲ್ಲೇ ಡಾ.ವಿಷ್ಣುವರ್ಧನ್ ಸ್ಮಾರಕ

Pinterest LinkedIn Tumblr

viಬೆಂಗಳೂರು, ಆ.1- ನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ವಿವಾದ ಕೊನೆಗೂ ಬಗೆಹರಿದಿದ್ದು ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಾಣವಾಗಲಿದೆ. ಸ್ಮಾರಕ ನಿರ್ಮಾಣಕ್ಕೆ ಕೆಂಗೇರಿ-ಉತ್ತರಹಳ್ಳಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲೇ 2 ಎಕರೆ ಜಾಗ ನೀಡಲು ಮಾಲೀಕರು ಒಪ್ಪಿಗೆ ನೀಡಿದ್ದಾರೆ.

ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಅಭಿಮಾನ್ ಸ್ಟುಡಿಯೋ ಮಾಲೀಕರು ನಟ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಶಂಕರ್ ಅವರಿಗೆ ಈ ಕುರಿತು ಲಿಖಿತ ಸಮ್ಮತಿ ಪತ್ರ  ನೀಡಿದ್ದಾರೆ.

ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಆರಂಭದಲ್ಲಿ ತಗಾದೆ ತೆಗೆದು ಭೂಮಿ ನೀಡಲು ಮಾಲೀಕರು ವಿರೋಧ ವ್ಯಕ್ತಪಡಿಸಿದ್ದರು. ಆ ನಂತರ ಸರ್ಕಾರ ಸಮೀಪದ ಮೈಲಸಂದ್ರ ಗ್ರಾಮದಲ್ಲಿ ಭೂಮಿ ನೀಡಿತ್ತು. ಆಗ ಭೂ ಮಾಲೀಕರು ಕೋರ್ಟ್ ಮೆಟ್ಟಿಲು ಏರಿದ್ದರಿಂದ ಆ ಜಾಗವೂ ಸ್ಮಾರಕ ನಿರ್ಮಾಣಕ್ಕೆ ಸಿಗಲಿಲ್ಲ. ನಂತರದ ಬೆಳವಣಿಗೆಯಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮೈಸೂರಿನಲ್ಲಿ ಜಾಗ ನೀಡಲು ಸರ್ಕಾರ ಚಿಂತನೆ ನಡೆಸಿತ್ತು. ಇದಕ್ಕೆ ವಿಷ್ಣು ಕುಟುಂಬದವರು ಸಮ್ಮತಿಸಿದ್ದರು.

ಈಗ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಲು ಅಭಿಮಾನ್ ಸ್ಟುಡಿಯೋ ಮಾಲೀಕರು ಸಮ್ಮತಿ ನೀಡಿದ್ದಾರೆ. ಭಾರತಿ ವಿಷ್ಣುವರ್ಧನ್ ಅವರು ಜಿಲ್ಲಾಧಿಕಾರಿ ವಿ.ಶಂಕರ್ ಅವರನ್ನು ಭೇಟಿಯಾಗಿ ಈಗಿರುವ ಸ್ಥಳದಲ್ಲೇ ವಿಷ್ಣು ಸ್ಮಾರಕ ನಿರ್ಮಾಣ ಸಂಬಂಧ ಚರ್ಚೆ ನಡೆಸಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದು ಶೀಘ್ರವೇ ಸ್ಮಾರಕ ನಿರ್ಮಾಣ ಕಾರ್ಯಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಶಂಕರ್ ತಿಳಿಸಿದ್ದಾರೆ.

Write A Comment