ಕರ್ನಾಟಕ

ಸಂಕಷ್ಟದ ಸುಳಿಗೆ ಸಿಲುಕಿರುವ ರೈತರ ನೆರವಿಗೆ ಕೇಂದ್ರ ಸರ್ಕಾರ ಕೂಡಲೇ ಧಾವಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ಗೌಡರ ಸತ್ಯಾಗ್ರಹ

Pinterest LinkedIn Tumblr

DSC_0432

ನವದೆಹಲಿ, ಜು.27: ಸಂಕಷ್ಟದ ಸುಳಿಗೆ ಸಿಲುಕಿರುವ ರೈತರ ನೆರವಿಗೆ ಕೇಂದ್ರ ಸರ್ಕಾರ ಕೂಡಲೇ ಧಾವಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ವರಿಷ್ಠ, ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಇಂದು ಇಲ್ಲಿನ ಜಂತರ್-ಮಂತರ್ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.

ದೇವೇಗೌಡರ ಜತೆಯಲ್ಲಿ ಪಕ್ಷದ ಸಂಸದರು ಹಾಗೂ ಶಾಸಕರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ ಜೆಡಿಎಸ್ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಶಾಸಕರಾದ ಚೆಲುವರಾಯಸ್ವಾಮಿ, ಜಮೀರ್ ಅಹಮದ್‌ಖಾನ್, ಬಂಡೆಪ್ಪ ಕಾಂಶಪೂರ್, ಎಂ.ಟಿ. ಕೃಷ್ಣಪ್ಪ ಸೇರಿದಂತೆ ಸುಮಾರು 30 ಶಾಸಕರು ದೇವೇಗೌಡರಿಗೆ ಸಾಥ್ ನೀಡಿದ್ದಾರೆ.

DSC_0451

DSC_0345

DSC_0238

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರೈತರು ಸಾಲದಬಾಧೆ, ಬೆಳೆ ನಷ್ಟ ಮತ್ತಿತರ ಕಾರಣಗಳಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ. ರಾಜ್ಯ ಸರ್ಕಾರವೂ ರೈತರ ನೆರವಿಗೆ ಧಾವಿಸುವಲ್ಲಿ ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ದೇವೇಗೌಡರು ಆಗ್ರಹಿಸಿದರು.

ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕೇಂದ್ರ ಕೃಷಿ ಸಚಿವ ರಾಧಮೋಹನ್‌ಸಿಂಗ್ ಬೇಜವಾಬ್ದಾರಿಯಿಂದ ಹೇಳಿಕೆ ನೀಡಿರುವುದನ್ನು ಖಂಡಿಸಿದ ದೇವೇಗೌಡರು, ಕೃಷಿ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸಂಸತ್‌ನಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ದೊರಕುತ್ತಿಲ್ಲ. ಆ ಕಾರಣಕ್ಕಾಗಿ ಜಂಥರ್ ಮಂಥರ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾಗಿದೆ ಎಂದು ದೇವೇಗೌಡರು ಹೇಳಿದರು.

ಸಂಸತ್‌ನ ಉಭಯ ಸದನಗಳಲ್ಲಿ ಇಂದಿನಿಂದ ಜನತಾ ಪರಿವಾರ ಕೇಂದ್ರ ಕೃಷಿ ಸಚಿವರ ಧೋರಣೆ ವಿರುದ್ಧ ಉಗ್ರ ಹೋರಾಟ ನಡೆಸಲು ತೀರ್ಮಾನಿಸಿದೆ ಎಂದು ಹೇಳಿದರು.

ಸಂಸತ್‌ನಲ್ಲಿ ನಮ್ಮ ಸಂಖ್ಯಾಬಲ ಕಡಿಮೆಯಿದೆ. ಈ ವಾರದ ಸಂಸತ್ ಕಲಾಪದ ಕಾರ್ಯಸೂಚಿಯಲ್ಲಿ ರೈತರ ಆತ್ಮಹತ್ಯೆ ವಿಚಾರದ ಚರ್ಚೆಗೆ ಅವಕಾಶ ನೀಡಿಲ್ಲ. ಬರುವ ಶುಕ್ರವಾರದವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇನೆ ಎಂದರು.

ಎಚ್.ಡಿ.ಕೆ. ವಾಗ್ದಾಳಿ; ಇದೇ ಸಂದರ್ಭದಲ್ಲಿ ಮಾತನಾ‌ಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರಾಜ್ಯದಲ್ಲಿ ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂ‌ಡಿದ್ದಾರೆ. ಈ ಬಗ್ಗೆ ಸಂಸತ್‌ನಲ್ಲಿ ಚರ್ಚೆಗೆ ಮುಂದಾಗಬೇಕು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಳಂಕಿತ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕಲಾಪ ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯವರು ರಾಜ್ಯದಲ್ಲಿ ರೈತರನ್ನು ಭೇಟಿ ಮಾಡಿ ಪರಿಹಾರ ನೀಡುವುದನ್ನು ಮುಂದಕ್ಕೆ ಹಾಕಿ ದೆಹಲಿಗೆ ಬಂದು ಪ್ರಧಾನಿಗಳ ಮೇಲೆ ಒತ್ತಡ ಹೇರಿ ರೈತರಿಗೆ ನೆರವು ದೊರಕಿಸಿ ಕೊಡಲಿ ಎಂದು ಅವರು ಹೇಳಿದರು.

ರೈತರ ಆತ್ಮಹತ್ಯೆಗೆ ರೋಗ-ರುಜಿನ, ಮಾದಕ ವ್ಯಸನ, ನಪುಂಸಕತೆ ಮತ್ತು ಪ್ರೇಮ ವೈಫಲ್ಯವೇ ಕಾರಣ ಎಂದು ಕೃಷಿ ಸಚಿವ ರಾಧಾಮೋಹನ್‌ಸಿಂಗ್ ನೀಡಿರುವ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ದೇವೇಗೌಡರು ನಡೆಸುತ್ತಿರುವ ಧರಣಿಗೆ ವಿಶೇಷ ಮಹತ್ವ ಬಂದಿದೆ.

ಕೇಂದ್ರ ಸಚಿವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಜನತಾಪರಿವಾರ ಮುಂದಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಸೀತಾರಾಂ ಯೆಚೂರಿ ಬೆಂಬಲ: ಜಂತರ್-ಮಂತರ್‌ನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನಡೆಸಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿರುವ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ದೇವೇಗೌಡರ ಈ ಹೋರಾಟ ಮುಂದಿನ ದಿನಗಳಲ್ಲಿ ರೈತ ಪರವಾದ ಉಗ್ರ ಹೋರಾಟಗಳಿಗೆ ಕಾರಣವಾಗಲಿದೆ ಎಂದಿದ್ದಾರೆ.

ಜಂತರ್ ಮಂತರ್‌ಗೆ ತೆರಳಿ ದೇವೇಗೌಡರ ಹೋರಾಟಕ್ಕೆ ಬೆಂಬಲ ಸೂಚಿಸಿದ ನಂತರ ಮಾತನಾಡಿದ ಅವರು, ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮೌನ ಪ್ರಧಾನಿ ಎಂದು ಬಿಜೆಪಿ ಟೀಕಿಸುತ್ತಿತ್ತು. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರೂ ರೈತರ ಸಮಸ್ಯೆಗಳ ಬಗ್ಗೆ ಮೌನ ವಹಿಸಿದ್ದಾರೆ. ಇವರು ಮೌನ ಮೌದಿ ಎಂದು ದೂರಿದ್ದರು.

Write A Comment