ಕರ್ನಾಟಕ

ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಐದು ಮಂದಿ ದುರ್ಮರಣ

Pinterest LinkedIn Tumblr

accident

ಬೇಲೂರು, ಜು.27: ಇಂದು ಬೆಳ್ಳಂಬೆಳಗ್ಗೆ ಟೆಂಪೋ ಟ್ರ್ಯಾವಲ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಐದು ಮಂದಿ ಮೃತಪಟ್ಟಿರುವ ಧಾರುಣ ಘಟನೆ ಚಿಕ್ಕಮಗಳೂರು ರಸ್ತೆಯ ಕನಾಯಕನಹಳ್ಳಿ ಬಳಿ ಸಂಭವಿಸಿದೆ.

ಮೃತಪಟ್ಟವರು ಕೆಂಗೇರಿ ಬಳಿಯ ವಸಂತನಗರದ ನಿವಾಸಿಗಳೆಂದು ಹೇಳಲಾಗಿದ್ದು, ಇವರ ಹೆಸರು ಸಧ್ಯ ತಿಳಿದುಬಂದಿಲ್ಲ. ಘಟನೆಯಲ್ಲಿ ಮಣಿಕಂಠ (24), ಶ್ರೀನಿವಾಸ್ (26), ಭರತ್ (24), ವಿಜಯ್ (30), ಪ್ರಕಾಶ್ (20), ಪ್ರವೀಣ್ (20) ಹಾಗೂ ಉಮೇಶ್ (20) ಎಂಬುವವರು ಗಂಭೀರ ಗಾಯಗೊಂಡಿದ್ದು, ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನ ಕೆಂಗೇರಿ ಬಳಿಯ ವಸಂತನಗರದಿಂದ ಮುಂಜಾನೆ ಕುಟುಂಬಸ್ಥರು ಶೃಂಗೇರಿ ಪ್ರವಾಸಕ್ಕೆಂದು ಟೆಂಪೋ ಟ್ರ್ಯಾವಲ್ ವಾಹನದಲ್ಲಿ ತೆರಳುತ್ತಿದ್ದರು. ಬೆಳಗ್ಗೆ 6.30ರ ಸಂದರ್ಭದಲ್ಲಿ ಚಿಕ್ಕಮಗಳೂರು ರಸ್ತೆಯ ಕನಾಯಕನಹಳ್ಳಿ ಬಳಿ ಬರುತ್ತಿದ್ದಂತೆ ಚಿಕ್ಕಮಗಳೂರು ಕಡೆಯಿಂದ ಅತಿ ವೇಗವಾಗಿ ಯಮನಂತೆ ಬಂದ ಲಾರಿ ಟೆಂಪೋಗೆ ಅಪ್ಪಳಿಸಿ ಕೆಲ ದೂರು ಎಳೆದುಕೊಂಡು ಹೋದ ಪರಿಣಾಮ ಟೆಂಪೋ ವಾಹನದೊಳಗೆ ಸಿಕ್ಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಸಿಪಿಐ ವೆಂಕಟೇಶ್, ಪಿಎಸ್‌ಐ ಆನಂದ್ ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ನೆರವಿನಿಂದ

ವಾಹನದೊಳಗೆ ಸಿಕ್ಕಿ ನರಳುತ್ತಿದ್ದ ಗಾಯಾಳುಗಳನ್ನು ಹೊರ ಕರೆತರಲು ಹರಸಾಹಸ ಪಡುತ್ತಿದ್ದಾಗ ಯುವಕನೊಬ್ಬ ನನ್ನನ್ನು ಕಾಪಾಡಿ ಎಂದು ಗೋಗರೆಯುತ್ತಿದ್ದಾಗ ಆತನನ್ನು ಹೊರತೆಗೆಯುವುದರೊಳಗೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಎಂಟು ಮಂದಿಯನ್ನು ಹಾಸನದ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮತ್ತೊಬ್ಬ ಮಾರ್ಗಮಧ್ಯ ಮೃತಪಟ್ಟಿದ್ದಾನೆ. ಉಳಿದ ಏಳು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಇವರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಾರಿ ಚಾಲಕನಿಗಾಗಿ ಶೋಧ ಮುಂದುವರೆಸಿದ್ದಾರೆ.

ಆಕ್ರೋಶ :

ಅಪಘಾತದಲ್ಲಿ ತೀವ್ರ ಗಾಯಗೊಂಡ ಗಾಯಾಳುಗಳನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆಯಲ್ಲಿ ತೇಜಮಣಿ ಎಂಬ ಒಬ್ಬರೇ ವೈದ್ಯರು ಮಾತ್ರ ಇದ್ದುದು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಗಾಯಾಳುಗಳ ಚಿಕಿತ್ಸೆಗೆ ಪೂರಕ ವಾತಾವರಣ ಇರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Write A Comment