ಕರ್ನಾಟಕ

ಪ್ರತಿಪಕ್ಷಗಳನ್ನು ಕೆಣಕಿ ಮಜಾ ತೆಗೆದುಕೊಂಡ ಮುಖ್ಯಮಂತ್ರಿ

Pinterest LinkedIn Tumblr

sidduಬೆಂಗಳೂರು, ಜು.24-ಪ್ರತಿಪಕ್ಷಗಳು ತಮ್ಮ ಮಾತಿನ ಬಾಣದಿಂದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಸದನದಲ್ಲಿ ಸಾಮಾನ್ಯವಾಗಿ ನಡೆಯುವ ಪ್ರಸಂಗ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳನ್ನೇ ಕೆಣಕಿ ಮಜಾ ತೆಗೆದುಕೊಂಡ ಪ್ರಸಂಗ ನಡೆಯಿತು. ವಿವಿಧ ಇಲಾಖೆಗಳ ಅನುದಾನದ ಬೇಡಿಕೆ ಮೇಲೆ ಸುದೀರ್ಘ ಚರ್ಚೆಗೆ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉತ್ತರ ನೀಡಲು ಮುಂದಾದರು.  ಈ ಸಂದರ್ಭದಲ್ಲಿ ಕೇಂದ್ರದಿಂದ ರಾಜ್ಯಕ್ಕೆ

ಬರಬೇಕಾದ ಅನುದಾನಗಳ ಕೊರತೆ ಕುರಿತು ವಿವರಣೆ ನೀಡುವ ಹಂತದಲ್ಲಿ ಪ್ರತಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ತಮ್ಮ ಕೈಯಲ್ಲಿದ್ದ ಬಜೆಟ್ ಪುಸ್ತಕವನ್ನು ಬಿಸಾಕುವ ಮೂಲಕ ಅಸಹನೆ ಪ್ರದರ್ಶಿಸಿದರು. ಇದರಿಂದ ಇನ್ನಷ್ಟು ಸಿಟ್ಟಾದ ಬಿಜೆಪಿ ಸದಸ್ಯರು ಮುಖ್ಯಮಂತ್ರಿಯವರ ಪ್ರತಿ ಮಾತಿಗೂ ಅಡ್ಡಿಪಡಿಸಲಾರಂಭಿಸಿದರು.  ಉದ್ದೇಶಪೂರ್ವಕವಾಗಿಯೇ ಕೇಂದ್ರದಿಂದ ಅನುದಾನ ಕಡಿಮೆಯಾಗಿರುವುದನ್ನು ಒತ್ತಿ ಹೇಳಿದ ಸಿದ್ದರಾಮಯ್ಯ ಅವರು ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ 8230 ಕೋಟಿ ರೂ. ಹೆಚ್ಚು ಹಣ ಸಿಗುತ್ತಿದೆ. ಆದರೆ  ಒಟ್ಟಾರೆ ಅನುದಾನದಲ್ಲಿ 4690 ಕೋಟಿ ಕಡಿಮೆಯಾಗಿದೆ. ತೆರಿಗೆ ಹೆಚ್ಚಳದಿಂದ 16 ಸಾವಿರ ಕೋಟಿ ಬರಬೇಕಾಗಿತ್ತು. 8146 ಕೋಟಿ ದೊರೆತಿದ್ದು, 8480 ಕೋಟಿ ಕಡಿಮೆಯಾಗಿದೆ. 13ನೇ ಹಣಕಾಸು ಆಯೋಗದಿಂದ 1987 ಕೋಟಿ ಕಡಿಮೆಯಾಗಿದೆ. ಇನ್ನು ಮಧ್ಯಾಹ್ನ ಬಿಸಿಯೂಟ, ಮಾಧ್ಯಮ ಶಿಕ್ಷಣ ಅಭಿಯಾನ, ಸರ್ವ ಶಿಕ್ಷಣ ಅಭಿಯಾನ,

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಯಂತಹ ಸಾಮಾಜಿಕ ಕ್ಷೇತ್ರಕ್ಕೆ ಗಣನೀಯವಾಗಿ ಅನುದಾನ ಕಡಿಮೆಯಾಗಿದೆ ಎಂದು ವಿವರಿಸಲಾರಂಭಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಕೇಂದ್ರದಿಂದ ತೆರಿಗೆ ಪಾಲು ಹೆಚ್ಚಾಗಿರುವುದು 8 ಸಾವಿರ ಕೋಟಿ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅದು 10 ಸಾವಿರ ಕೋಟಿ. ಸದನಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿತಪ್ಪಿಸುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು. ಬಿಜೆಪಿ ಶಾಸಕ ಸಿ.ಟಿ.ರವಿ, ಕೂಡ ನೀವು ನೀಡುತ್ತಿರುವ ಮಾಹಿತಿ ಸುಳ್ಳು. ಅದು ತಪ್ಪೆಂದು ನಾನು ಸಾಬೀತು ಪಡಿಸುತ್ತೇನೆ. ಇಲ್ಲವಾದರೆ ಈ ಸದನದಲ್ಲೇ ಇರುವುದಿಲ್ಲ ಎಂದು ಸವಾಲು ಹಾಕಿದರು. ಈ ಸದನದಲ್ಲಿ ಹೇಳಿದ ಅಷ್ಟೂ ಮಾಹಿತಿಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಮುಖೇನ ವಿವರಿಸಿದ್ದೇನೆ. ತಪ್ಪಾಗಿದ್ದರೆ ಅವರು ಸುಮ್ಮನಿರುತ್ತಿರಲಿಲ್ಲ. ಅರುಣ್ ಜೇಟ್ಲಿ ನಿಮ್ಮ ಪತ್ರಕ್ಕೆ ಉತ್ತರ ಕೊಟ್ಟು 14ನೇ ಹಣಕಾಸು ಆಯೋಗ ವರದಿಯಲ್ಲಿ ಅನ್ಯಾಯವಾಗುತ್ತಿದೆ ಎಂಬ ಭಾವನೆ ಇದ್ದರೆ, 13ನೇ ಹಣಕಾಸು ಆಯೋಗದ ವರದಿಯಲ್ಲೇ ಮುಂದುವರೆಯಲು ಅವಕಾಶವಿದೆ ಎಂದು ಉತ್ತರ ಕೊಟ್ಟಿದ್ದಾರೆ. ನಿಮ್ಮ ಸರ್ಕಾರ ಅದಕ್ಕೆ ಉತ್ತರ ಕೊಟ್ಟಿಲ್ಲ ಎಂದರು.

ಮಾತಿನ ಚಕಮಕಿ, ಗದ್ದಲದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳನ್ನು ಕೆಣಕಿ ಮಜಾ ತೆಗೆದುಕೊಳ್ಳುತ್ತಿದ್ದರು. ಪದೇ ಪದೇ ತಮ್ಮದೇ ಭಾವ-ಭಂಗಿಯಲ್ಲಿ ತಮ್ಮ ಪಕ್ಷದ ಶಾಸಕರತ್ತ ತಿರುಗಿ ಪ್ರಚೋದನೆ ನೀಡುತ್ತಿದ್ದರು. ಆಡಳಿತ ಪಕ್ಷದ ಶಾಸಕರು ಸಚಿವರು ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ಪ್ರತಿಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಆರಂಭದಲ್ಲಿ ಗಡುಸಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಕೊನೆ ಕೊನೆಗೆ ನಗುಮುಖದಲ್ಲೇ ರಾಜಕೀಯ ಎದುರಾಳಿಗಳಿಗೆ ತಿರುಗೇಟು ನೀಡಲಾರಂಭಿಸಿದರು. ಪ್ರತಿ ಹಂತದಲ್ಲೂ ತಮ್ಮ ಪಕ್ಷದ ಶಾಸಕರ ಬೆಂಬಲಕ್ಕೆ ಹಿಂತಿರುಗಿ ನೋಡುತ್ತಿದ್ದರು.  ಇತ್ತೀಚಿನ ರಾಜಕೀಯ ಜಂಜಾಟದಲ್ಲಿ ಹೈರಾಣದಂತೆ ಕಂಡು ಬಂದ ಸಿದ್ದರಾಮಯ್ಯ ಅವರು ಇಂದು ಪ್ರತಿಪಕ್ಷಗಳನ್ನು ಮಣಿಸುವ ಭರದಲ್ಲಿ ತಮ್ಮ ಶಾಸಕರಿಂದಲೂ ಸಂಪೂರ್ಣ ಬೆಂಬಲ ಪಡೆದುಕೊಂಡಿದ್ದು ವಿಶೇಷವಾಗಿತ್ತು.
ಸಿದ್ದರಾಮಯ್ಯ ರಾಜಕೀಯ ಮುತ್ಸದ್ಧಿತನಕ್ಕೆ ವಿಧಾನಸಭೆಯಲ್ಲಿ ಇಂದು ನಡೆದುಕೊಂಡ ರೀತಿ ಉದಾಹರಣೆ ಎಂಬಂತೆ ಕಾಣುತ್ತಿತ್ತು. ಒಂದು ಹಂತದಲ್ಲಿ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರನ್ನು ನಾನು ನಿಮಗಿಂತ 12 ವರ್ಷ ಮೊದಲು ಶಾಸನ ಸಭೆಗೆ ಬಂದಿದ್ದೇನೆ. ನಿಮಗೇನು ಗೊತ್ತಿಲ್ಲ ಸುಮ್ನೆ ಕೂತ್ಕೊಳ್ರಿ ಎಂದು ಮೂದಲಿಸಿದರು. ಕೊನೆಗೆ ತಾಳ್ಮೆ ಕಳೆದುಕೊಂಡು ಬಿಜೆಪಿ ಶಾಸಕರು ಮುಖ್ಯಮಂತ್ರಿಯವರ ಉತ್ತರಕ್ಕೆ ಅವಕಾಶ ನೀಡಬಾರದೆಂಬ ಉದ್ದೇಶದಿಂದ ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು. ಈ ಹಂತದಲ್ಲಿ ಧ್ವನಿ ಮತದ ಮೂಲಕ ಬಜೆಟ್‌ಗೆ ಅಂಗೀಕಾರ ಕೊಡಿಸುವಂತೆ ಮುಖ್ಯಮಂತ್ರಿಯವರ ಮನವಿಗೆ ಸ್ಪಂದಿಸಿದ ಸಭಾಧ್ಯಕ್ಷರು ಬಜೆಟ್ ಅಂಗೀಕಾರ ಪ್ರಸ್ತಾವವನ್ನು ಮತಕ್ಕೆ ಹಾಕಿ ಅಂಗೀಕಾರ ಕೊಡಿಸಿದರು. ನಂತರ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

Write A Comment