ಕರ್ನಾಟಕ

ಪಾಲಿಕೆ ತ್ರಿಭಜನೆಗೆ ಒಪ್ಪಿಗೆ ಬೇಡ; ಬಿಜೆಪಿ – ಜೆಡಿಎಸ್

Pinterest LinkedIn Tumblr

bjp

ಬೆಂಗಳೂರು, ಜು. 22: ಬಿಬಿಎಂಪಿಯನ್ನು ವಿಭಜಿಸುವ ಕಾಯ್ದೆಗೆ ಅಂಕಿತ ಹಾಕದಂತೆ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯಪಾಲರಿಗೆ ಮನವಿಮಾಡಿವೆ. ಬಿಬಿಎಂಪಿ ವಿಭಜಿಸುವ ಕಾಯ್ದೆ ಸಂವಿಧಾನ ಬಾಹಿರವಾಗಿದ್ದು, ಯಾವುದೇ ಕಾರಣಕ್ಕೂ ಈ ಕಾಯ್ದೆಗೆ ಅಂಕಿತ ಹಾಕದಂತೆ ಬಿಜೆಪಿ ಹಾಗೂ ಜೆಡಿಎಸ್ ಶಾಸಕರುಗಳ ನಿಯೋಗ ಇಂದು ಪ್ರತ್ಯೇಕವಾಗಿ ರಾಜ್ಯಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದವು.

ಇಂದು ಬೆಳಿಗ್ಗೆ ವಿರೋಧ ಪಕ್ಷದ ನಾಯಕರುಗಳಾದ ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರುಗಳ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಚುನಾವಣೆಯನ್ನು ಮುಂದೂಡುವ ಒಂದೇ ಉದ್ದೇಶದಿಂದ ಸರ್ಕಾರ ಬಿಬಿಎಂಪಿಯನ್ನು ವಿಭಜಿಸುವ ಕಾಯ್ದೆಯನ್ನು ಜಾರಿಗೊಳಿಸಿದೆ.

ಇದರಿಂದ ಬಿಬಿಎಂಪಿ ಚುನಾವಣೆಗಳು ವಿಳಂಬವಾಗಲಿದ್ದು, ಯಾವುದೇ ಕಾರಣಕ್ಕೂ ಈ ಕಾಯ್ದೆಗೆ ಒಪ್ಪಿಗೆ ನೀಡಬೇಡಿ ಎಂದು ಮನವಿ ಮಾಡಿದರು. ವಿಧಾನ ಪರಿಷತ್‌ನಲ್ಲಿ ಈ ಕಾಯ್ದೆಗೆ ಸೋಲುಂಟಾಗಿದೆ ಬಹುಮತವಿದೆ ಎಂಬ ಕಾರಣಕ್ಕೆ ಮತ್ತೆ ವಿಧಾನಸಭೆಯಲ್ಲಿ ಈ ಕಾಯ್ದೆಯನ್ನು ಮಂಡಿಸಿ ಒಪ್ಪಿಗೆ ಪಡೆದಿದೆ. ಇದು ಸರಿಯಲ್ಲ, ಹಾಗಾಗಿ ಈ ಕಾಯ್ದೆಗೆ ಅಂಕಿತ ಹಾಕದಂತೆ ರಾಜ್ಯಪಾಲರನ್ನು ಮನವೊಲಿಸುವ ಪ್ರಯತ್ನವನ್ನು ಬಿಜೆಪಿ ಮುಖಂಡರು ಭೇಟಿಯ ಸಂದರ್ಭದಲ್ಲಿ ನಡೆಸಿದರು.

ಜೆಡಿಎಸ್ ಮನವಿ

ಬಿಜೆಪಿ ಶಾಸಕರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕರುಗಳು ರಾಜ್ಯಪಾಲರನ್ನು ಭೇಟಿ ಮಾಡಿ ಬಿಬಿಎಂಪಿ ವಿಭಜನೆ ಕಾಯ್ದೆಗೆ ಸಹಿ ಹಾಕದಂತೆ ಮನವಿ ಮಾಡಿದರು.

ಜೆಡಿಎಸ್ ಶಾಸಕರುಗಳೊಂದಿಗೆ ರಾಜಭಾವನಕ್ಕೆ ಆಗಮಿಸಿದ ಕುಮಾರಸ್ವಾಮಿ, ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಕಾಂಗ್ರೆಸ್ ಪಕ್ಷ ನಡೆಸಿರುವ ತಂತ್ರಗಳನ್ನು ರಾಜ್ಯಪಾಲರ ಗಮನಕ್ಕೆ ತಂದು ಬಿಬಿಎಂಪಿ ವಿಭಜನೆ ಕಾಯ್ದೆಗೆ ಒಪ್ಪಿಗೆ ನೀಡಬೇಡಿ ಎಂದು ಮನವಿ ಮಾಡಿದರು.

ವಾಗ್ದಾಳಿ

ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ರಾಜಭವನದ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂವಿಧಾನ ಬಾಹಿರವಾಗಿ ಬಿಬಿಎಂಪಿಯನ್ನು ವಿಭಜಿಸಲು ಕಾಯ್ದೆ ರೂಪಿಸಿದೆ. ಈ ಕಾಯ್ದೆಯಲ್ಲಿ ಬೆಂಗಳೂರನ್ನು ಎಷ್ಟು ಭಾಗಗಳನ್ನಾಗಿ ವಿಭಜಿಸಲಾಗುವುದು ಎಂದು ಸ್ಪಷ್ಟತೆ ಇಲ್ಲ, ಚುನಾವಣೆಯನ್ನು ಮುಂದೂಡುವ ದುರದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಟೀಕಿಸಿದರು.

jds

ಸರ್ಕಾರದ ಹುನ್ನಾರವನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ, ಕಾಯ್ದೆಗೆ ಸಹಿ ಹಾಕದಂತೆ ಮನವಿ ಮಾಡಿದ್ದೇವೆ ರಾಜ್ಯಪಾಲರು ಎಲ್ಲವನ್ನೂ ಪರಿಶೀಲಿಸುವಾಗಿ ಭರವಸೆ ನೀಡಿದ್ದಾರೆ ಎಂದರು.

ಬಿಬಿಎಂಪಿಗೆ ಈಗ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಲಿದೆ ಎಂಬ ಭೀತಿಯಿಂದ ಕಾಂಗ್ರೆಸ್ ಸರ್ಕಾರ ಚುನಾವಣೆಗಳನ್ನು ಮುಂದೂಡಲು ಬಿಬಿಎಂಪಿ ವಿಭಜನೆ ಕಾಯ್ದೆಗೆ ಒಪ್ಪಿಗೆ ಪಡೆದಿದೆ. ನ್ಯಾಯಾಲಯಗಳಲ್ಲಿ ಛೀಮಾರಿ ಹಾಕಿಸಿಕೊಂಡು ದಂಡ ಕಟ್ಟಿದ್ದರೂ ಈ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ, ನಾಚಿಕೆಯಾಗಬೇಕು ಎಂದು ಶೆಟ್ಟರ್ ಹರಿಹಾಯ್ದರು.

ಈ ಸಂದರ್ಭದಲ್ಲಿ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಸಚಿವ ವಿ. ಸೋಮಣ್ಣ, ಸುರೇಶ್ ಕುಮಾರ್, ಗೋವಿಂದ ಕಾರಜೋಳ, ಶಾಸಕರುಗಳಾದ ಎಸ್.ಆರ್ ವಿಶ್ವನಾಥ್, ವಿಜಯಕುಮಾರ್, ಯು.ಬಿ ಬಣಕಾರ್ ಸೇರಿದಂತೆ ಬಿಜೆಪಿಯ ಬಹುತೇಕ ಶಾಸಕರು ಇದ್ದರು.

ರಾಷ್ಟ್ರಪತಿಗೆ ಕಳುಹಿಸಿ ಹೆಚ್.‌ಡಿ.ಕೆ ಆಗ್ರಹ

ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎನ್ನುವ ದಿ. ರಾಜೀವ್ ಗಾಂಧಿ ಅವರ ಆಶಯಕ್ಕೆ ಈ ಕಾಂಗ್ರೆಸ್ ಸರ್ಕಾರ ವಿರುದ್ಧವಾಗಿಯೇ ನಡೆದುಕೊಳ್ಳುತ್ತಿದೆ.

ಬಿಬಿಎಂಪಿಯನ್ನು ವಿಭಜಿಸುವ ಹಿಂದೆ ಇರುವ ಸರ್ಕಾರದ ಕುತಂತ್ರಗಳನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.

ಚುನಾವಣೆಯನ್ನು ಮುಂದೂಡಲು ಸರ್ಕಾರ ಬಿಬಿಎಂಪಿ ವಿಭಜನೆಗೆ ಮುಂದಾಗಿದೆ. ಈ ಕಾಯ್ದೆಗೆ ಅಂಕಿತಹಾಕಬೇಡಿ, ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸಿ ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ನ ಶಾಸಕರುಗಳಾದ ವೈ.ಎಸ್.ವಿ ದತ್ತ, ಎಚ್.ಸಿ. ಬಾಲಕೃಷ್ಣ, ಚೆಲುವರಾಯಸ್ವಾಮಿ, ಎಚ್.ಕೆ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಶಾಸಕರುಗಳು ಉಪಸ್ಥಿತರಿದ್ದರು.

Write A Comment