ಕರ್ನಾಟಕ

ರೈತರ ಆತ್ಮಹತ್ಯೆ; ಎಚ್ಚೆತ್ತು ಕೊಂಡ ರಾಜ್ಯ ಸರ್ಕಾರ; ರೈತರ ಬಳಿ ತೆರಳಿ ಸಮಸ್ಯೆ ಆಲಿಸಲು ಸಿದ್ಧರಾಮಯ್ಯ ಸೂಚನೆ

Pinterest LinkedIn Tumblr

cpl

ಬೆಂಗಳೂರು, ಜು.22: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರೈತರ ಸರಣಿ ಆತ್ಮಹತ್ಯೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ವಿಧಾನಮಂಡಲದ ಅಧಿವೇಶನದ ನಂತರ ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ ರೈತರು ಹಾಗೂ ಶ್ರೀಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಆತ್ಮಸ್ಥೈರ್ಯ ತುಂಬಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.

ಶಾಸಕರು ಬೆಂಗಳೂರಿನಲ್ಲಿ ಮೊಕ್ಕಂ ಹೂಡುವುದನ್ನು ಕೈಬಿಟ್ಟು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಬೇಕು. ರೈತಾಪಿ ವರ್ಗ ಮತ್ತು ಶ್ರೀಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಬೇಕು. ರೈತರೊಂದಿಗೆ ಸಂವಾದ ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಸರ್ಕಾರದ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವಿ ಮಾಡಿಕೊಳ್ಳಬೇಕೆಂದು ಸಿದ್ಧರಾಮಯ್ಯನವರು ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರೈತರು ಸೇರಿದಂತೆ ಎಲ್ಲ ವರ್ಗದ ಜನರ ನೋವು-ನಲಿವುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಶಾಸಕರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪರ್ಯಟನೆ ಮಾಡಬೇಕು. ಶಾಸಕರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಅವರು ಸೂಚಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಡಿಪಿ ಸಭೆಗಳಲ್ಲಿ ಸಚಿವರು, ಶಾಸಕರು ಸಕ್ರಿಯವಾಗಿ ಪಾಲ್ಗೊಂಡು ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮುಂತಾದ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಹಾಗೂ ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿರುವ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರು, ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿದ್ದು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಸದಸ್ಯತ್ವ ನೋಂದಣಿ

ಪಕ್ಷಕ್ಕೆ ಸದಸ್ಯರ ನೋಂದಣಿ ಅಭಿಯಾನ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿಲ್ಲ. ಶಾಸಕರು ಮತ್ತು ಮಂತ್ರಿಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸೂಚಿಸಿದರೆಂದು ಅವರು ತಿಳಿಸಿದರು.

ಕ್ಷೇತ್ರಗಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಒತ್ತಾಯ

ಭೂಮಿ ಖರೀದಿಸಲು ನಿಯಮ 79ಎ ಮತ್ತು ಬಿ ಅಡಿಯಲ್ಲಿ ನಿಗದಿಪಡಿಸಿರುವ ಆದಾಯ ಮಿತಿಯನ್ನು 2 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಏರಿಸಬೇಕು ಎಂದು ಕೆಲವು ಶಾಸಕರು ಒತ್ತಾಯ ಮಾಡಿದರು. ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಸೂದೆ ಕರಡನ್ನು ಸಿದ್ದಪಡಿಸುವಂತೆ ಕಂದಾಯ ಸಚಿವರಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ 20×30 ಮತ್ತು 30×40 ನಿವೇಶನದಲ್ಲಿ ಬಡವರು ನಿರ್ಮಿಸಿಕೊಂಡಿರುವ ಮನೆಗಳಿಗೆ ಹಕ್ಕುಪತ್ರ ನೀಡುವ ಅಕ್ರಮ-ಸಕ್ರಮ (94ಸಿ ನಿಯಮದನ್ವಯ) ನಿಗದಿಪಡಿಸಿರುವ ಶುಲ್ಕವನ್ನು ಕಡಿಮೆ ಮಾಡಬೇಕು. ಸಾಧ್ಯವಾದರೆ ಉಚಿತವಾಗಿ ಹಕ್ಕುಪತ್ರ ನೀಡಬೇಕೆ ಎಂದು ಬಹುತೇಕ ಶಾಸಕರು ಒತ್ತಾಯಿಸಿದರೆಂದು ಅವರು ಹೇಳಿದರು.

ತಿದ್ದುಪಡಿ

ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಭೆಗೆ ತಿಳಿಸಿದರು ಎಂದು ನಾಡಗೌಡರು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಪ್ರಸ್ತಾಪವಾಗಲಿಲ್ಲವೆ ಎಂದಾಗ, ಎಲ್ಲ ಶಾಸಕರಿಗೂ ಸಚಿವರಾಗಬೇಕೆಂಬ ಆಸೆ ಇರುತ್ತದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ತೀರ್ಮಾನಿಸುತ್ತಾರೆ ಎಂದರು.

ಬಿಬಿಎಂಪಿ ಚುನಾವಣೆಗೆ ಹೆದರಿ ವಿಭಜನೆ ವಿಧೇಯಕಯವನ್ನು ತಂದಿಲ್ಲ. ಅಧಿಕಾರ ವೀಕೇಂದ್ರೀಕರಣ ಮತ್ತು ಆಡಳಿತ ಸುಸೂತ್ರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ವಿಧೇಯಕ ತರಲಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು ಎಂದು ಅವರು ಹೇಳಿದರು.

ತಿರುಗುಬಾಣ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಸರ್ಕಾರದಲ್ಲಿ ವಿಶ್ವಾಸ ಇಲ್ಲ ಎಂದು ವಿಧಾನಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಹೀನಾಯ ಸೋಲು ಉಂಟಾಗಿದೆ. ಅವರ ಪಕ್ಷದಲ್ಲೇ ಅವರ ನಿರ್ಣಯಕ್ಕೆ ಸಹಮತ ಇರಲಿಲ್ಲ. ತಮಗೆ ಮುಜುಗರ ಉಂಟು ಮಾಡಬೇಕು ಎಂಬ ಏಕೈಕ ಉದ್ದೇಶದಿಂದ ನಿರ್ಣಯ ಮಂಡಿಸಲಾಗಿತ್ತು. ಇದು ಅವರಿಗೆ ತಿರುಗುಬಾಣ ಆಗಿದೆ ಎಂದು ಸಿದ್ಧರಾಮಯ್ಯ ಸಭೆಯಲ್ಲಿ ಪ್ರಸ್ತಾಪಿಸಿದರು.

ತಮ್ಮ ಹಾಗೂ ಸರ್ಕಾರದ ವಿರುದ್ಧ ಯಾವುದೇ ರೀತಿಯ ಗುರುತರ ಆರೋಪಗಳು ಇರಲಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದನ್ನೇ ಕುಮಾರಸ್ವಾಮಿ ಹೇಳಿದ್ದಾರೆ. ಹಾವು ಬಿಡ್ತೇವೆ ಎಂದು ಹೇಳಿ ಖಾಲಿ ಬುಟ್ಟಿ ಪ್ರದರ್ಶಿಸಿದ್ದಾರೆ ಎಂದು ಅವರು ಹೇಳಿದರು.

ಶಾಸಕ ಎ.ಎಸ್. ನಡಹಳ್ಳಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ವಿಚಾರ ಪ್ರಸ್ತಾಪವಾಗಿಲ್ಲ. ಈ ಬಗ್ಗೆ ಪಕ್ಷದ ಅಧ್ಯಕ್ಷರನ್ನು ಕೇಳಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಸರ್ಕಾರಿ ಮುಖ್ಯ ಸಚೇತಕರಾಗಿರುವ ಅಶೋಕ್ ಪಟ್ಟಣ್, ಶಾಸಕ ಪಿ.ಎಂ. ನರೇಂದ್ರಸ್ವಾಮಿ, ವಿಧಾನಪರಿಷತ್ ಸದಸ್ಯ ಹೆಚ್.ಎಂ. ರೇವಣ್ಣ ಉಪಸ್ಥಿತರಿದ್ದರು.

ರಾಹುಲ್ ಆಗಮನ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ಈ ವಾರಾಂತ್ಯಕ್ಕೆ ಆಂಧ್ರ ಮತ್ತು ತಮಿಳುನಾಡುಗಳಿಗೆ ಭೇಟಿ ನೀಡಲಿದ್ದು, ಇದೇ ಸಂದರ್ಭದಲ್ಲಿ ರಾಜ್ಯಕ್ಕೂ ಭೇಟಿ ನೀಡುವ ಸಂಭವ ಇದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ವಿವಿಧ ರಾಜ್ಯಗಳಿಗೆ ಭೇಟಿ ನೀಡಲಿರುವ ರಾಹುಲ್‌ಗಾಂಧಿ, ರಾಜ್ಯಕ್ಕೆ ಒಂದು ದಿನದ ಮಟ್ಟಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

Write A Comment