ಕರ್ನಾಟಕ

ಉಸ್ತುವಾರಿ ಸಚಿವರುಗಳ ನಿರ್ಲಕ್ಷ್ಯ : ಅನಾಥವಾದ ಹಾವೇರಿ, ಧಾರವಾಡ ಜಿಲ್ಲೆಗಳು

Pinterest LinkedIn Tumblr

dar ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಸಾಲದ ಬಾಧೆ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ಗಮನ ಹರಿಸದಿರುವುದು ಆಶ್ಚರ್ಯ ಮೂಡಿಸಿದೆ. ಹಾವೇರಿ ಜಿಲ್ಲೆಯಲ್ಲಿ ಎರಡು ತಿಂಗಳಲ್ಲಿ ಸುಮಾರು 12 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಉಸ್ತುವಾರಿ ಹೊತ್ತಿರುವ ಸಹಕಾರ ಸಚಿವ ಮಹದೇವ ಪ್ರಸಾದ್ ಅವರು ಕ್ಯಾರೆ ಎನ್ನುತ್ತಿಲ್ಲ. ಇವರು ಉಸ್ತುವಾರಿ ಸಚಿವರು ಹೌದೋ, ಅಲ್ಲವೋ ಎಂಬಂತಾಗಿದೆ. ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿಲ್ಲ. ಇದುವರೆಗೂ ಅಧಿಕಾರಿಗಳ ಸಭೆಯನ್ನೂ ನಡೆಸಿಲ್ಲ. ಕಾಟಾಚಾರಕ್ಕೆ ತಮಗೆ ತಿಳಿದಾಗ ಮಾತ್ರ ಬಂದು ಹೋಗುತ್ತಿದ್ದಾರೆ. ಹೀಗಾಗಿ ಹಾವೇರಿ ಜಿಲ್ಲೆ ಅನಾಥವಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಬೆಂಗಳೂರಿನ ದಿನೇಶ್ ಗುಂಡೂರಾವ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಅವರಿಗೇನು ಗೊತ್ತು, ಧಾರವಾಡ ಜಿಲ್ಲೆಯ ಸಮಸ್ಯೆ. ಜಿಲ್ಲೆಯಲ್ಲಿ ಒಟ್ಟು ಎಷ್ಟು ತಾಲೂಕುಗಳಿವೆ, ಎಷ್ಟು ಹಳ್ಳಿಗಳು ಬರುತ್ತವೆ, ಅಲ್ಲಿನ ಜನರ ಸಮಸ್ಯೆಗಳೇನು ಎಂಬ ಬಗ್ಗೆ ಅರ್ಥಮಾಡಿಕೊಳ್ಳಲು ಸ್ಥಳೀಯ ಶಾಸಕರಿಗೆ ಮಂತ್ರಿ ಪದವಿ ನೀಡಿದರೆ ಸಮಸ್ಯೆ ನೀಗಿಸಲು ಸಾಧ್ಯ. ಹಾವೇರಿ ಮತ್ತು ಧಾರವಾಡ ಜಿಲ್ಲೆಗೆ ಸಚಿವ ಸ್ಥಾನದಲ್ಲಿ ಪ್ರಾತಿನಿಧ್ಯ ನೀಡದಿರುವುದೇ ಇದಕ್ಕೆ ಕಾರಣವೆನ್ನಬಹುದು. ಹಾವೇರಿ, ಧಾರವಾಡ ಜಿಲ್ಲೆಯಲ್ಲಿ ಅನುಭವಿ ಶಾಸಕರು ಸಾಕಷ್ಟು ಇದ್ದಾರೆ. ಅವರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಿದರೆ ಒಳ್ಳೆಯದಾಗುತ್ತದೆ. ಈ ಎರಡೂ ಜಿಲ್ಲೆಗಳು ಅನಾಥವಾಗಿವೆ. ಇವರುಗಳ ಗೋಳನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಈ ಎರಡೂ ಜಿಲ್ಲೆಗಳ ರೈತರ ಕೂಗು ಅರಣ್ಯರೋದನವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ನಡೆದರೂ ಸಹ ಉಸ್ತುವಾರಿ ಸಚಿವರು ಸೌಜನ್ಯಕ್ಕಾದರೂ ಬಾರದೆ ಇರುವುದು ರೈತ ಸಮುದಾಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.  ಉಸ್ತುವಾರಿ ಸಚಿವರುಗಳು ಬೆಂಗಳೂರು ಹಾಗೂ ಮೈಸೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಈ ಭಾಗದ ಸಮಸ್ಯೆಗಳು ರೈತರ ಕೂಗು ಇವರುಗಳಿಗೆ ಕೇಳಿಸುತ್ತಿಲ್ಲವೆ..? ಸಚಿವ ಸಂಪುಟದಲ್ಲಿ ಈ ಎರಡೂ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಬೇಕೆಂದು ಹಲವಾರು ಬಾರಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಜನಪ್ರತಿನಿಧಿಗಳು ಹೇಳುತ್ತಾರೆ.

ಯಾರನ್ನೇ ಸಚಿವರನ್ನಾಗಿ ಮಾಡಿರಿ. ಆದರೆ, ಈ ಭಾಗಗಳ ಶಾಸಕರಿಗೆ ಪ್ರಾತಿನಿಧ್ಯ ನೀಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ದೂರದ ಊರಿನವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಿದರೆ ಯಾವುದೇ ಪ್ರಯೋಜನವಿಲ್ಲವೆಂದು  ಪಕ್ಷದ ಕಾರ್ಯಕರ್ತರೇ ಆಡಿಕೊಳ್ಳುತ್ತಿದ್ದಾರೆ. ಇನ್ನು ಮುಂದಾದರೂ ಸಂಪುಟ ವಿಸ್ತರಣೆಯಲ್ಲಿ ಹಾವೇರಿ ಹಾಗೂ ಧಾರವಾಡ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕೆಂಬುದು ಎರಡೂ ಜಿಲ್ಲೆಗಳ ನಾಗರಿಕರ ಅಭಿಪ್ರಾಯವಾಗಿದೆ.

Write A Comment