ಕರ್ನಾಟಕ

ಅಭಿವೃದ್ಧಿ ದೃಷ್ಟಿಯಿಂದ ಬಿಬಿಎಂಪಿ ವಿಭಜನೆಯೇ ಹೊರತು ಚುನಾವಣಾ ಭೀತಿಯಿಂದಲ್ಲ : ರಾಮಲಿಂಗಾರೆಡ್ಡಿ

Pinterest LinkedIn Tumblr

ramaಬೆಂಗಳೂರು, ಜು.21-ನಗರದ ಅಭಿವೃದ್ಧಿ ದೃಷ್ಟಿಯಿಂದ ನಾವು ಬಿಬಿಎಂಪಿ ವಿಭಜನೆಗೆ ಮುಂದಾಗಿದ್ದೇವೆಯೇ ಹೊರತು ಚುನಾವಣಾ ಭೀತಿಯಿಂದ ಅಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ತಿಳಿಸಿದರು.
ಯವನಿಕ ಸಭಾಂಗಣದಲ್ಲಿ ಭಾರತೀಯ ವಾಹನ ಚಾಲಕರ ಯೂನಿಯನ್ ಹಮ್ಮಿಕೊಂಡಿದ್ದ ವಿಶ್ವ ಕಾಯಕ ಚಾಲಕರ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಬಿಎಂಪಿ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಕಾಂಗ್ರೆಸ್‌ನವರು ಎಲೆಕ್ಷನ್ ಮುಂದೂಡಲು ಯತ್ನಿಸಿ ಪಾಲಿಕೆ ವಿಭಜನೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.
ಕಳೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಭಾರೀ ಜಯಗಳಿಸಿದ್ದಾರೆ. ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾದರೂ ನಮಗೆ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್, ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 800 ಕಿ.ಮೀ.ಬಿಬಿಎಂಪಿ ರಚನೆ ಮಾಡಿದ್ದರಿಂದ ನಗರದ ಅಭಿವೃದ್ಧಿ ಕುಂಟಿತವಾಗಿದೆ. ಈ ಅಸಮತೋಲನ ಹೋಗಲಾಡಿಸಬೇಕೆಂಬ ಒಂದೇ ದೃಷ್ಟಿಯಿಂದ ನಾವು ಬಿಬಿಎಂಪಿ ವಿಭಜನೆಗೆ ಮುಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

ವಿಭಜನೆಗೆ ಅಧಿವೇಶನದಲ್ಲಿ ಅನುಮೋದನೆ ದೊರೆತರೆ ರಾಜ್ಯಪಾಲರ ಬಳಿ ಅಂಕಿತಕ್ಕೆ ಕಳುಹಿಸಿ ಈ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ. ಅನುಮತಿ ಸಿಕ್ಕರೆ ವಿಭಜನೆ ಮಾಡುತ್ತೇವೆ. ಇಲ್ಲದಿದ್ದರೆ ನಿಗದಿತ ಸಮಯದಲ್ಲಿ ಚುನಾವಣೆ ನಡೆದರೂ ನಾವು ಸಿದ್ದ ಎಂದು ತಿಳಿಸಿದರು. ರೈತರಿಗೆ ನೆರವು : ರಾಜ್ಯದಲ್ಲಿ ಅನ್ನದಾತರು ಆತ್ಮಹತ್ಯೆಗೆ ಒಳಗಾಗುತ್ತಿರುವುದು ದುರದೃಷ್ಟಕರ. ಕೂಡಲೇ ಆತ್ಮಹತ್ಯೆಯಂತಹ ತಪ್ಪು ನಿರ್ಧಾರವನ್ನು ಕೈಬಿಡಬೇಕು ಎಂದು ಮನವಿ ಮಾಡಿದ ರಾಮಲಿಂಗಾರೆಡ್ಡಿ, ಸರ್ಕಾರ ರೈತರ ನೆರವಿಗಾಗಿ ಸಧ್ಯದಲ್ಲೇ ಸಮಗ್ರ ನೀತಿಯೊಂದನ್ನು ರೂಪಿಸಲಿದೆ ಎಂದು ತಿಳಿಸಿದರು. ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಅಪಘಾತರಹಿತರಾಗಿ ಚಾಲನೆ ಮಾಡಿದ 40 ಮಂದಿ ಪ್ರಾಮಾಣಿಕ ಚಾಲಕರಿಗೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಸಚಿವರು ವಿತರಿಸಿದರು. ಎಲ್ಲಾ ಚಾಲಕರು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಮೂಲಕ  ಪ್ರಯಾಣಿಕರ ಸ್ನೇಹಿಯಾಗಬೇಕೆಂದು ಕರೆ ನೀಡಿದರು. ಸಮಾರಂಭದಲ್ಲಿ ಶಾಸಕ ಅಶೋಕ್ ಖೇಣಿ, ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Write A Comment