ಕರ್ನಾಟಕ

ಬಿಬಿಎಂಪಿ ವಿಭಜನೆ ವಿಧಾನಸಭೆಯಲ್ಲಿ ಅಂಗೀಕಾರ : ರಾಜ್ಯಪಾಲರ ಅಂಗಳದಲ್ಲಿ ಚೆಂಡು

Pinterest LinkedIn Tumblr

bbಬೆಂಗಳೂರು, ಜು.21- ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಅಸ್ತಿತ್ವವನ್ನು ವಿಸರ್ಜಿಸುವ ಮತ್ತು ವಿಭಜನೆ ಮಾಡುವ ಸಲುವಾಗಿ ರೂಪಿಸಲಾದ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2015ಕ್ಕೆ ವಿಧಾನಸಭೆಯಲ್ಲಿಂದು ಪ್ರತಿಪಕ್ಷಗಳ ಗದ್ದಲ, ಧರಣಿ, ಸಭಾತ್ಯಾಗದ ನಡುವೆ ಅಂಗೀಕಾರ ನೀಡಲಾಯಿತು.  ವಿಧಾನಪರಿಷತ್ತಿನಲ್ಲಿ ತಿರಸ್ಕೃತಗೊಂಡಿದ್ದ ಈ ವಿಧೇಯಕವನ್ನು ಇಂದು ಮತ್ತೊಮ್ಮೆ ವಿಧಾನಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಪುನರ್ ಮಂಡನೆ ಮಾಡಿದರು.

ಆ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್. ಉಪ ನಾಯಕ ಆರ್.ಅಶೋಕ್ ತೀವ್ರ ವಿರೋಧ ವ್ಯಕ್ತಪಡಿಸಿ ಈ ಮಸೂದೆಯ ಅಂಗೀಕಾರಕ್ಕಾಗಿ ರಾಜ್ಯ ಸರ್ಕಾರ  ಕಳೆದ ಒಂದು ತಿಂಗಳ ಹಿಂದೆ ಮೂರು ದಿನದ ವಿಶೇಷ ಅಧಿವೇಶನ ನಡೆಸಿತ್ತು.

ಬಿಜೆಪಿ, ಜೆಡಿಎಸ್‌ನ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ  ಹೆಚ್ಚಿರುವ ಕಾರಣಕ್ಕೆ ಸರ್ಕಾರ ಮಸೂದೆಗೆ ಅಂಗೀಕಾರ ಪಡೆದುಕೊಂಡಿತ್ತು. ಆದರೆ, ವಿಧಾನಪರಿಷತ್‌ನಲ್ಲಿ ಸಂಖ್ಯಾಬಲ ಇಲ್ಲದೆ ಇರುವುದರಿಂದ ವಿಧೇಯಕವನ್ನು ತಿರಸ್ಕರಿಸಲಾಗಿದೆ. ಅಲ್ಲಿ  ರಚನೆ ಮಾಡಲಾಗಿದ್ದ ಆಯ್ಕೆ ಸಮಿತಿಯಲ್ಲೂ ಕೂಡ 7 ಮಂದಿ ಸದಸ್ಯರು ಬಿಬಿಎಂಪಿ ವಿಭಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. 6 ಜನ ಸದಸ್ಯರು ಮಾತ್ರ ಒಪ್ಪಿದ್ದಾರೆ. ಹೀಗಾಗಿ ಅಲ್ಲಿ ಮಸೂದೆ ತಿರಸ್ಕಾರವಾಗಿದೆ. ಈಗ ಮತ್ತೊಮ್ಮೆ ಇದನ್ನು ಮಂಡಿಸಿ ಅಂಗೀಕಾರ ಪಡೆಯುವ ಸರ್ಕಾರದ ಹಠಮಾರಿ ಧೋರಣೆ ಸರಿಯಲ್ಲ.  ಮೊದಲು ಚುನಾವಣೆ ಮಾಡಿ, ಅನಂತರ ಐದಲ್ಲ 50 ಭಾಗಗಳನ್ನಾಗಿ ವಿಭಜಿಸಿ ಎಂದು ಆಗ್ರಹಿಸಿದರು.

ಸರ್ಕಾರಕ್ಕೆ ಬೆಂಗಳೂರನ್ನು ವಿಭಜಿಸಿ ಆಡಳಿತ ಸುಗಮಗೊಳಿಸುವ ಪ್ರಾಮಾಣಿಕ ಉದ್ದೇಶ ಇದ್ದರೆ ಒಂದು ವರ್ಷದ ಹಿಂದೆಯೇ ಈ ಪ್ರಕ್ರಿಯೆಯನ್ನು ಆರಂಭಿಸಬೇಕಿತ್ತು. ಚುನಾವಣೆ ಘೋಷಣೆಯಾದಾಗ ವಿಭಜನೆಯ ಪ್ರಯತ್ನ ಮಾಡಲಾಗುತ್ತಿದೆ. ಜನ ಸರ್ಕಾರದ ವಿರುದ್ಧವಾಗಿದ್ದಾರೆ. ಚುನಾವಣೆ ನಡೆದರೆ ಬಿಬಿಎಂಪಿಯಲ್ಲಿ ಸೋಲುತ್ತೇವೆ ಎಂಬ ಬೆದರಿಕೆಯಿಂದ ಚುನಾವಣೆ ಮುಂದೂಡುವ ಪ್ರಯತ್ನವಾಗಿ  ಈ ಮಸೂದೆ ತರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೈಕೋರ್ಟ್ ಸರ್ಕಾರಕ್ಕೆ ಮೂರು ಬಾರಿ ಛೀಮಾರಿ ಹಾಕಿ  10 ಸಾವಿರ ದಂಡ ವಿಧಿಸಿದೆ. ಸುಪ್ರೀಂಕೋರ್ಟ್ ಕೂಡ ಚುನಾವಣೆ ನಡೆಸಲು ನಿಮಗೇನು ದಾಡಿ ಎಂದು ಪ್ರಶ್ನಿಸಿದೆ. ಕೆಂಪೇಗೌಡರು ಕಟ್ಟಿದ ನಾಡನ್ನು ಒಡೆಯುವ ಸಲುವಾಗಿ ವಿಭಜನೆ ಮಾಡುತ್ತಿರುವುದು ಸರಿಯಲ್ಲ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ನ ವೈ.ಎಸ್.ವಿ.ದತ್ತ ಮಾತನಾಡಿ, ಅಧಿಕಾರ ವಿಕೇಂದ್ರೀಕರಣಕ್ಕೆ ಸಂವಿಧಾನದ 73-74ನೇ ತಿದ್ದುಪಡಿ ತಂದಿದ್ದ ರಾಜೀವ್‌ಗಾಂಧಿ ಅವರ ಆತ್ಮ ರಾಜ್ಯ ಸರ್ಕಾರದ ನಡವಳಿಕೆಯಿಂದ ವಿಲವಿಲ ಒದ್ದಾಡುತ್ತಿದೆ ಎಂದು ಹೇಳಿದ್ದು, ಆಡಳಿತ ಪಕ್ಷದ ಶಾಸಕರನ್ನು ಕೆರಳಿಸಿತು. ಆಡಳಿತ ಮತ್ತು ಪ್ರತಿಪಕ್ಷಗಳ ಬಿಸಿ ಬಿಸಿ ಚರ್ಚೆಯ ನಡುವೆ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು,  ಈ ಸದನದ ಘನತೆಯ ಹಿನ್ನೆಲೆಯಲ್ಲಿ ವಿಧಾನಪರಿಷತ್ ರಚನೆಯಾಗಿದೆ. ಆದರೆ, ಇಲ್ಲಿ ಅಂಗೀಕರಿಸಿದ ಮಸೂದೆಯನ್ನು ತಿರಸ್ಕರಿಸಿ ವಾಪಸ್ ಕಳುಹಿಸಿರುವುದು ಒಳ್ಳೆಯ ಸಂಪ್ರದಾಯವಲ್ಲ. ಈ ಬಗ್ಗೆ ತಮಗೂ ಸೇರಿದಂತೆ ಈ ಸದನದ ಎಲ್ಲಾ ಸದಸ್ಯರಿಗೂ ಅಸಮಾಧಾನವಿದೆ. ವಿಧಾನಸಭೆಯ ಗೌರವಕ್ಕೆ ಧಕ್ಕೆಯಾಗಿದೆ. ವಿಧಾನಪರಿಷತ್ತಿಗೆ ಸೀಮಿತವಾಗಿ ಆಯ್ಕೆ ಸಮಿತಿ ಮಾಡುವ ಬದಲು ವಿಧಾನಸಭೆಯನ್ನೂ ಒಳಗೊಂಡಂತೆ ಜಂಟಿ ಆಯ್ಕೆ ಸಮಿತಿ ರಚನೆ ಮಾಡಬಹುದಿತ್ತು ಎಂದು ಹೇಳಿದರು.

ಈ ವಿಧೇಯಕ ಮಂಡಿಸಿದಾಗ ಆರಂಭದಲ್ಲೇ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ವಿಧಾನಪರಿಷತ್ತಿನಲ್ಲಿ ನಮ್ಮ ಸದಸ್ಯರು ಮಸೂದೆಯನ್ನು ತಿರಸ್ಕರಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡರು.
ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಚುನಾವಣೆ ಮುಂದೂಡುವ ಉದ್ದೇಶ ಸರ್ಕಾರಕ್ಕಿಲ್ಲ. ಬಿಬಿಎಂಪಿ ಸದಸ್ಯರ ಸಂಖ್ಯೆ 198 ಆಗಿದೆ. ನಮ್ಮ ವಿಧಾನಸಭೆಗಿಂತಲೂ ದೊಡ್ಡ ಸಭೆಯಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಅದನ್ನು ವಿಭಜಿಸಬೇಕು. ವಿಧಾನಪರಿಷತ್ತಿನಿಂದ ವಿಧೇಯಕ ತಿರಸ್ಕಾರಗೊಂಡು ಬಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.ಸಚಿವರ ಉತ್ತರದ ನಂತರ ಮಸೂದೆಯನ್ನು ಅಂಗೀಕರಿಸಲು ಸಭಾಧ್ಯಕ್ಷರು ಮುಂದಾಗುತ್ತಿದ್ದಂತೆ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಬಾವಿಗಿಳಿದು ಧರಣಿ ಆರಂಭಿಸಿದರು. ಧ್ವನಿ ಮತದ ಮೂಲಕ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರು ಸಭಾತ್ಯಾಗ ಮಾಡಿದರು.

ವಿಧೇಯಕದಲ್ಲಿರುವ ಅಡಕಗಳು:
ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ  ಎರಡನೇ ಬಾರಿಗೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವುದರಿಂದ ವಿಧಾನಪರಿಷತ್ತಿನ ಅಂಗೀಕಾರ ಅನಗತ್ಯವಾಗಿದ್ದು, ನೇರವಾಗಿ ರಾಜ್ಯಪಾಲರ  ಸಹಿಗೆ ಕಳುಹಿಸಬಹುದಾಗಿದೆ.  ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕುತ್ತಿದ್ದಂತೆ ಕಾಯ್ದೆಯಾಗಿ ಮಾರ್ಪಡಲಿದ್ದು, 2007ರಲ್ಲಿ ರಚನೆಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಸರ್ಜನೆಯಾಗಲಿದೆ. ಬಿಬಿಎಂಪಿ ಅಸ್ಥಿತ್ವವೇ ಇಲ್ಲ ಎಂದ ಮೇಲೆ ಚುನಾವಣೆ ನಡೆಸುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಆಯೋಗ ಈಗಾಗಲೇ ಘೋಷಿಸಿರುವ ವೇಳಾ ಪಟ್ಟಿಯನ್ನು ಸರ್ಕಾರ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಸಾಧ್ಯತೆಗಳಿವೆ. ಸ್ಥಾಯಿ ಸಮಿತಿ ಸಂಖ್ಯೆ ಕಡಿಮೆಯಾಗಲಿದ್ದು, ನಾಮನಿರ್ದೇಶಿತ ಸದಸ್ಯರ ಸಂಖ್ಯೆಯೇ ಇಳಿಮುಖವಾಗಲಿದೆ. ಬೆಂಗಳೂರು ಮಹಾನಗರ ಪಾಲಿಕೆಗಾಗಿ ಪ್ರತ್ಯೇಕ ಕಾನೂನು ರಚನೆಯಾಗಲಿದೆ.

Write A Comment