ಕರ್ನಾಟಕ

ಮಳೆ ಬರುತ್ತಿದೆ.. ರೋಗಗಳು ಹೆಚ್ಚುತ್ತಿವೆ… ಮಕ್ಕಳ ಬಗ್ಗೆ ಹುಷಾರು..!

Pinterest LinkedIn Tumblr

chiಬೆಂಗಳೂರು, ಜು.21- ನಗರದಲ್ಲಿ ದಿನೇ ದಿನೇ ಡೆಂಘೀ ಉಲ್ಬಣಿಸುತ್ತಿದೆ. ಪ್ರತಿನಿತ್ಯ ನೂರಾರು ಮಂದಿಯಲ್ಲಿ ಮಾರ ಣಾಂತಿಕ ರೋಗ ಲಕ್ಷಣಗಳು ಕಂಡು ಬರುತ್ತಿದ್ದು, ಅದರಲ್ಲೂ ಮುಖ್ಯವಾಗಿ ಶಾಲಾ ಮಕ್ಕಳಿಗೆ ಈ ರೋಗ ಬಹುಬೇಗ ಹರಡುತ್ತಿರುವುದು ಕಂಡು ಬರುತ್ತಿದೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವುದು ಸಹಜ. ಅದೇ ರೀತಿ ಈ ಮಳೆಗಾಲದಲ್ಲೂ ರೋಗ ರುಜಿನೆಗಳು ನಗರಕ್ಕೆ ಕಾಲಿಟ್ಟಿದ್ದು ನೂರಾರು ಮಂದಿ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಡೆಂಘೀ, ಚಿಕೂನ್‌ಗುನ್ಯಾ, ವೈರಲ್ ಫೀವರ್ ಮತ್ತಿತರ ರೋಗ ಲಕ್ಷಣಗಳು ಎಲ್ಲೆಡೆ ಮಾಮೂಲಾಗಿದೆ.

ಈ ರೋಗ ಲಕ್ಷಣಗಳು ಮಾರಣಾಂತಿಕವಲ್ಲದಿದ್ದರೂ ಸೂಕ್ತ ಚಿಕಿತ್ಸೆ ಪಡೆದು, ವೈದ್ಯರು ಸೂಚಿಸುವ ದಿನಗಳಷ್ಟು ಕಾಲ ವಿಶ್ರಾಂತಿ ಪಡೆಯದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ. ಇತ್ತಿಚೆಗೆ ನಗರದಲ್ಲಿ ಡೆಂಘೀ ಹೆಚ್ಚಾಗಿದ್ದು, ಶಾಲಾ ಮಕ್ಕಳು ಸೇರಿದಂತೆ ನೂರಾರು ಮಂದಿಯಲ್ಲಿ ಈ ರೋಗ ಲಕ್ಷಣಗಳು ಕಂಡು ಬಂದಿದ್ದು,  ಇದುವರೆಗೂ ನಗರದಲ್ಲಿ ಹಲವಾರು ಮಂದಿ ಬಲಿಯಾಗಿದ್ದಾರೆ.

ಏನೀದು ಡೆಂಘೀ; ಶುದ್ಧ ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಈಜಿಸ್ ಈಡಿಪ್ಪಿ ಎಂಬ ಸೊಳ್ಳೆಗಳು ಮನುಷ್ಯನಿಗೆ ಕಚ್ಚಿದಾಗ ಬರುವ ರೋಗವೇ ಈ ಡೆಂಘೀ. ಜ್ವರ, ತಲೆನೋವು, ಮೈ ಕೈ ನೋವು, ಕಣ್ಣಿನ ಹಿಂಬದಿ ನೋವು ಕಾಣಿಸಿಕೊಳ್ಳುವದೇ ಡೆಂಘೀ ರೋಗ ಲಕ್ಷಣ.ಮಕ್ಕಳಲ್ಲಿ ಡೆಂಘೀ ಕಾಣಿಸಿಕೊಂಡಾಗ ವಾಂತಿ ಭೇದಿಯಾಗುವ ಸಾಧ್ಯತೆಗಳಿರುತ್ತವೆ.  ಶುದ್ಧ ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಪ್ಪಿ ಸೊಳ್ಳೆಗಳು ಸಾಮಾನ್ಯವಾಗಿ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಕಚ್ಚುತ್ತವೆ. ಹೀಗಾಗಿ ಈ ಸಂದರ್ಭದಲ್ಲಿ ನಿದ್ರಿಸುವವರಲ್ಲಿ ಡೆಂಘೀ ರೋಗ ಹೆಚ್ಚಾಗಿ ಕಂಡು ಬರುತ್ತದೆ.
ಡೆಂಘೀಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೂ ವೈದ್ಯರು ನೀಡುವ ವೈದೋಪಚಾರದ ನಂತರ ಕನಿಷ್ಠ 14 ದಿನಗಳ ಕಾಲ ವಿಶ್ರಾಂತಿ ಪಡೆಯಬೇಕು ಇಲ್ಲದಿದ್ದಲಿ ಅಪಾಯ ಕಟ್ಟಿಟ್ಟಬುತ್ತಿ.
ಡೆಂಘೀ ಕಾಣಿಸಿಕೊಂಡರೆ ಮನುಷ್ಯನ ದೇಹದಲ್ಲಿ ಬಿಳಿ ರಕ್ತಕಣಗಳು ಕುಂಠಿತಗೊಳ್ಳುತ್ತದೆ. ಈ ಸಂದರ್ಭದಲ್ಲಿ ಅಗತ್ಯವಿರುವ ಪೆಟ್ಲೆಟ್ಸ್ ಪಡೆದುಕೊಳ್ಳದಿದ್ದರೆ ಸಾವು ಬರುವುದು ಗ್ಯಾರಂಟಿ.

ರೋಗ ತಡೆಯುವುದು ಹೇಗೆ:

ಯಾರೇ ಆಗಲಿ ಸಣ್ಣ ಜ್ವರ ಕಾಣಿಸಿಕೊಂಡರೆ ಕೂಡಲೇ ವೈದ್ಯರಲ್ಲಿ ಭೇಟಿ ನೀಡಿ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಡೆಂಘೀ ಲಕ್ಷಣಗಳು ಕಂಡು ಬಂದರೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಈ ಮಾರಣಾಂತಿಕ ರೋಗದಿಂದ ಬಚಾವಾಗಬಹುದು. ಮಳೆಗಾಲದ ಸಂದರ್ಭದಲ್ಲಿ ಮನೆ ಮುಂದೆ, ಇಲ್ಲವೇ ಹೂಕುಂಡ, ತೆಂಗಿನ ಚಿಪ್ಪಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಸೂಕ್ತ. ನೀರಿನ ಟ್ಯಾಂಕರ್‌ಗಳನ್ನು ಶುಚಿಗೊಳಿಸುವುದು ಒಳಿತು. ಮಕ್ಕಳಲ್ಲೇ ಹೆಚ್ಚು ಏಕೆ? ಸಣ್ಣ ಮಕ್ಕಳು ಬೆಳಗಿನ ಅವಧಿಯಲ್ಲಿ ನಿದ್ರಿಸುವುದು ಹೆಚ್ಚು ಹಾಗೂ ಶಾಲೆ ಮುಗಿಸಿ ಬರುವ ಮಕ್ಕಳು ಸಂಜೆ ಸಮಯದಲ್ಲಿ ನಿದ್ರಿಸುವುದರಿಂದ ಶಾಲೆಗೆ ಹೋಗುವ ಮಕ್ಕಳಲ್ಲಿ ಡೆಂಘೀ ಹೆಚ್ಚಾಗಿ ಕಂಡು ಬರುತ್ತದೆ.  ಹೀಗಾಗಿ ಪೋಷಕರು ಮಕ್ಕಳು ನಿದ್ರಿಸುವ ಸಂದರ್ಭದಲ್ಲಿ ಸೊಳ್ಳೆಪರದೆ ಅಳವಡಿಸಬೇಕು. ಮಾತ್ರವಲ್ಲ ಸೊಳ್ಳೆ ಇಲ್ಲದಂತೆ ನೋಡಿಕೊಳ್ಳುವುದು ಒಳಿತು.

ಬೆಂಗಳೂರಿನಲ್ಲಿ ಮಾರ್ಧನಿಸುತ್ತಿದೆ: ನಗರದಲ್ಲಿ ಇತ್ತಿಚೆಗೆ ಡೆಂಘೀ ರೋಗ ಉಲ್ಬಣಿಸಿದೆ. ಪ್ರತಿನಿತ್ಯ ಆಸ್ಪತ್ರೆಗಳ ಮುಂದೆ ನೂರಾರು ರೋಗಿಗಳ ಸಾಲು ಕಂಡು ಬರುತ್ತಿರುವುದು ಸಾಮಾನ್ಯವಾಗಿದೆ.
ಮಳೆಯಾಗುತ್ತಿರುವುದು, ನಗರದ ಮಾಲಿನ್ಯ ಕೆಟ್ಟುಹೋಗಿರುವುದು. ಗಾಳಿಯಲ್ಲಿ ತೇಲಿ ಬರುತ್ತಿರುವ ಧೂಳಿನಿಂದಾಗಿ ಡೆಂಘೀ ಹೆಚ್ಚಾಗುತ್ತಿದೆ. ಎಚ್ಚೆತ್ತುಕೊಳ್ಳದ ಆರೋಗ್ಯ ಇಲಾಖೆ; ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಡೆಂಘೀ ಮಾರ್ಧನಿಸುತ್ತಿದ್ದರೂ ಆರೋಗ್ಯ ಇಲಾಖೆ ರೋಗ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ನಗರದಲ್ಲಿ ಉಲ್ಬಣಿಸುತ್ತಿರುವ ಡೆಂಘೀ ತಡೆಗೆ ಬಿಬಿಎಂಪಿ ಕೂಡ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಕಂಡು ಬರುತ್ತಿದೆ.

ಡೆಂಘೀ ಇತಿಹಾಸ: 1960 ದಶಕದಲ್ಲಿ ಕಂಡು ಬಂದ ಡೆಂಘೀ ರೋಗ. ಕಾಲ ನಂತರ ವಿಶ್ವ ಪಿಡುಗಾಗಿ ಕಾಡತೊಡಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿವರ್ಷ ಲಕ್ಷಾಂತರ ಮಂದಿ ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಎಲ್ಲಾ ರಾಷ್ಟ್ರಗಳು ಈ ಮಾರಣಾಂತಿಕ ರೋಗ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದೆ. ಸರ್ಕಾರಿ ಹಾಗೂ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಮಾತ್ರ ಡೆಂಘೀ ರೋಗ ಪತ್ತೆ ಹಚ್ಚುವ ಯಂತ್ರಗಳಿದ್ದು, ಜ್ವರ ಕಾಣಿಸಿಕೊಳ್ಳುವ ವ್ಯಕ್ತಿ ದುಬಾರಿ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಬದಲು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವುದು ಒಳಿತು. ಇದುವರೆಗೂ ಡೆಂಘೀ ಕಾಣಿಸಿಕೊಂಡು ಸಾವನ್ನಪ್ಪಿರುವ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು ಇಲ್ಲವೇ ಜ್ವರವನ್ನು ನಿರ್ಲಕ್ಷಿಸಿದವರೆ ಹೆಚ್ಚು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ರಾಮಬಾಣ:

ಪರಂಗಿ ಗಿಡದ ಎಲೆಗಳು ಮಾರಣಾಂತಿಕ ಡೆಂಘೀ ರೋಗ ತಡೆಗೆ ರಾಮಬಾಣವಾಗಿ ಪರಿಣಮಿಸುತ್ತಿದೆ. ಅಧುನಿಕ ವೈದ್ಯರು ಕೂಡ ಡೆಂಘೀ ಕಾಣಿಸಿಕೊಳ್ಳುವ ವ್ಯಕ್ತಿಗೆ ಪರಂಗಿ ಗಿಡದ ಎಲೆಗಳು ಸೇವಿಸಲು ಸಲಹೆ ನೀಡುತ್ತಿದ್ದಾರೆ. ಡೆಂಘೀ ಕಾಣಿಸಿಕೊಂಡ ರೋಗಿಯ ಪೆಟ್ಲೆಟ್ 1,5 ಲಕ್ಷಕ್ಕಿಂತ ಕಡಿಮೆಯಾದರೆ ಜೀವಕ್ಕೆ ಹಾನಿ ಎದುರಾಗಬಹುದು. ಆದರೆ, ಅಂತಹ ವ್ಯಕ್ತಿಗೆ ತಾಜಾ ಪರಂಗಿ ಎಲೆಗಳ ಜ್ಯೂಸ್ ತಯಾರಿಸಿ ಪ್ರತಿ ಒಂದು ಗಂಟೆಗೊಮ್ಮೆ ಕುಡಿಸುತ್ತಾ ಬಂದರೆ ಪೆಟ್ಲೆಟ್ಸ್ ಸಂಖ್ಯೆ ಏರಿಕೆಯಾಗಿ ರೋಗಿ ಪ್ರಾಣಾಪಾಯದಿಂದ ಪಾರಾಗಬಹುದು. ಇತ್ತಿಚೆಗೆ ಕಿವಿ ಫ್ರೂಟ್ ಕೂಡ ಮನುಷ್ಯ ಬಿಳಿ ರಕ್ತ ಕಣಗಳ ವೃದ್ಧಿಗೆ ಹೆಚ್ಚು ಸಹಕಾರಿಯಾಗುತ್ತದೆ ಎಂಬ ಮಾಹಿತಿ ಹೊರಬಿದ್ದಿದ್ದು ಹೆಚ್ಚೆಚ್ಚು ಮಂದಿ ಕಿವಿ ಹಣ್ಣು ಸೇವಿಸಲು ಮುಂದಾಗುತ್ತಿರುವುದರಿಂದ ಒಂದು ಹಣ್ಣಿನ ಬೆಲೆ 10 ರೂಪಾಯಿಯಿಂದ 60 ರೂಪಾಯಿಗಳಿಗೆ ಏರಿಕೆಯಾಗಿದೆ. ಅದೇ ರೀತಿ ದಾಳಿಂಬೆಯನ್ನು ಹೆಚ್ಚು ಹೆಚ್ಚು ಸೇವಿಸುವ ಮೂಲಕ ಬಿಳಿ ರಕ್ತದ ಕಣಗಳನ್ನು ವೃದ್ದಿಸಿಕೊಳ್ಳಬಹುದಾಗಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ  ಪಿಜ್ಜಾ ಬರ್ಗರ್ ಕೊಡಿಸುವ ಬದಲು ಮನುಷ್ಯರ ಆರೋಗ್ಯ ವೃದ್ಧಿಗೆ ಸಹಕಾರಿಯಾಗುವ ಹಣ್ಣು ಹಂಪಲುಗಳನ್ನು ತಿನಿಸುವುದು ಸೂಕ್ತ ಎನ್ನುತ್ತಾರೆ ತಜ್ಞವೈದ್ಯರು.
ರಮೇಶ್ ಪಾಳ್ಯ

Write A Comment