ಕರ್ನಾಟಕ

ಸಾಲಗಾರರ ಕಾಟವೇ, ಜೆಡಿಎಸ್‌ಗೆ ಕರೆ ಮಾಡಿ…

Pinterest LinkedIn Tumblr

Kumaraswamy

ಬೆಂಗಳೂರು: ಸಾಲಬಾಧೆಯಿಂದ ಕಂಗೆಟ್ಟಿರುವ ರೈತರಿಗೆ ಆತ್ಮಸ್ಥೈರ್ಯ ತುಂಬಿ,ಅವರ ನೆರವಿಗೆ ನಿಲ್ಲಲು ಜೆಡಿಎಸ್ ಪಕ್ಷ ಸಾಂತ್ವನವಾಣಿ ಆರಂಭಿಸಿದೆ.

ಸಾಲದ ಕಾರಣಕ್ಕೆ ಜಮೀನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗುವ ಬ್ಯಾಂಕ್, ಮೀಟರ್ ಬಡ್ಡಿಕೋರರು ಕಾಟ ನೀಡಿದಲ್ಲಿ ಮೊಬೈಲ್ ಸಂಖ್ಯೆ 9900031555, 9900025777 ಹಾಗೂ ಸ್ಥಿರ ದೂರವಾಣಿ-08023619909 ಈ ಸಂಖ್ಯೆಗೆ ಕರೆ ಮಾಡಿದಲ್ಲಿ ಜೆಡಿಎಸ್ ಪಕ್ಷ ಸ್ಥಳೀಯ ಪ್ರತಿನಿಧಿಗಳು ರೈತರ ನೆರವಿಗೆ ಧಾವಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ,”ಮೀಟರ್ ಬಡ್ಡಿಯಲ್ಲಿ ಸಾಲ ಕೊಟ್ಟವರು, ಬ್ಯಾಂಕ್‌ನವರು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಬಂದರೆ ಮೇಲ್ಕಂಡ ಸಂಖ್ಯೆಗೆ ಕರೆ ಮಾಡಿ. ಸ್ಥಳೀಯ ಕಾರ್ಯಕರ್ತರು ನಿಮ್ಮ ಸಹಾಯಕ್ಕೆ ತತ್‌ಕ್ಷಣವೇ ಬರಲಿದ್ದಾರೆ. ಯಾವುದೇ ರೈತರು ಆತ್ಮಹತ್ಯೆಗೆ ಶರಣಾಗುವುದು ಬೇಡ. ನಿಮ್ಮ ಪರವಾಗಿ ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ,”ಎಂದು ಹೇಳಿದರು.

” ಸರಕಾರದ ಆರ್ಥಿಕ ನೀತಿಗಳಿಂದ, ಕೆಲವು ತಪ್ಪು ನಿರ್ಧಾರಗಳಿಂದ ರೈತರು ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 68 ಲಕ್ಷ ರೈತರಲ್ಲಿ 20 ಲಕ್ಷ ರೈತರಿಗೆ ಮಾತ್ರ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಸಿಗುತ್ತಿದೆ. ಉಳಿದ 40 ಲಕ್ಷ ರೈತರು ಅನ್ಯ ಸಾಲವನ್ನು ನೆಚ್ಚಿಕೊಳ್ಳಬೇಕಾಗಿದೆ. ಸೋಮವಾರದಿಂದ ಆರಂಭವಾಗಲಿರುವ ಕಲಾಪದಲ್ಲಿ ರೈತರ ಸಾಲಮನ್ನಾ ಮಾಡಬೇಕೆಂದು ಸರಕಾರವನ್ನು ಪಕ್ಷ ಒತ್ತಾಯಿಸಲಿದೆ. ಹಾಗಂತ ಸರಕಾರ ರೈತರ ನೆರವಿಗೆ ಬರುವ ವಿಶ್ವಾಸವಿಲ್ಲ ,”ಎಂದು ದೂರಿದರು.

”ಈ ಸರಕಾರ ರೈತರ ನೆರವಿಗೆ ಬರದೇ ಇರಬಹುದು. ಆದರೆ 2-3 ವರ್ಷ ತಾಳ್ಮೆಯಿಂದ ಕಾಯಿರಿ. ಈಗ ಮಾಡಿರುವ ಸಾಲ ತೀರಿಸಲಾಗದೇ ಸಾಲ ಕೊಟ್ಟವರಿಗೆ ಭೂಮಿ, ಮನೆ ಅಡವಿಟ್ಟು ಕಳೆದುಕೊಂಡಿದ್ದರೆ ನಿಮ್ಮ ಭೂಮಿ, ಸ್ವತ್ತು ವಾಪಸ್ ಕೊಡಿಸಲು ದಿಟ್ಟ ಕಾನೂನು ತರುವೆ. ಅಲ್ಲಿಯವರೆಗೆ ಯಾವುದೇ ರೈತರು ಎದೆಗುಂದಿ ಆತ್ಮಹತ್ಯೆಗೆ ಶರಣಾಗಬೇಡಿ ಎಂದು ಕೈಮುಗಿದು ರೈತರನ್ನು ಬೇಡುವೆ,”ಎಂದು ಕುಮಾರಸ್ವಾಮಿ ಹೇಳಿದರು.

ಶಾಸಕರ ವೇತನ: ” ಸಾಲ ಬಾಧೆಯಿಂದ ಸಾವು ಕಂಡ ರೈತ ಕುಟುಂಬಗಳಿಗೆ ತಾತ್ಕಾಲಿಕ ನೆರವು ನೀಡಲು ಜೆಡಿಎಸ್‌ನ 40 ಶಾಸಕರು ತಮ್ಮ ಒಂದು ತಿಂಗಳ ವೇತನ ನೀಡಲು ತೀರ್ಮಾನಿಸಿದ್ದಾರೆ. ಮುಂದಿನ 15-20 ದಿನಗಳಲ್ಲಿ ರೈತ ಕುಟುಂಬಗಳನ್ನು ಭೇಟಿ ಮಾಡಿ, ಸಹಾಯ ನೀಡಲಾಗುವುದು,”ಎಂದು ಹೇಳಿದರು.

” ಇದೇ ಶನಿವಾರ-ಭಾನುವಾರ ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಸಕರ ಜತೆ ಭೇಟಿ ಮಾಡಿ ರೈತರಿಗೆ ನೆರವು ನೀಡುವ ಜತೆಗೆ, ಕುಟುಂಬದ ಮಾಹಿತಿ ಪಡೆಯಲಿದ್ದೇನೆ. ಅಧಿವೇಶನ ಮುಗಿದ ಬಳಿಕ ದಾವಣಗೆರೆ, ತುಮಕೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಂಡು ಆರ್ಥಿಕ ನೆರವು ನೀಡಲಿದ್ದೇವೆ,”ಎಂದರು.

ಅವಿಶ್ವಾಸ ನಿರ್ಣಯ ಖಚಿತ: ” ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ನಡವಳಿಕೆ ನೋಡಿದರೆ ರೈತರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ತೃಣಮಾತ್ರ ಕಳಕಳಿ ಇಲ್ಲದೇ ಇರುವುದು ಸ್ಪಷ್ಟ. ಸರಕಾರದ ವೈಫಲ್ಯ, ಲೋಕಾ ಭ್ರಷ್ಟಾಚಾರ, ಒಂದಂಕಿ ಲಾಟರಿ, ಮರಳು ದಂಧೆ, ಕಲ್ಲು ಗಣಿಗಾರಿಕೆ ವಿಷಯಗಳನ್ನು ಮುಂದಿಟ್ಟು ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿದ್ದೇನೆ. ಕಾಂಗ್ರೆಸ್ ಸರಕಾರಕ್ಕೆ ಆ ಪಕ್ಷದ ಶಾಸಕರ ಬೆಂಬಲವಿದ್ದರೂ ರಾಜ್ಯದ 6 ಕೋಟಿ ಜನರ ವಿಶ್ವಾಸವನ್ನು ಸರಕಾರ ಕಳೆದುಕೊಂಡಿದೆ. ಸರಕಾರ ಉರುಳಿಸಲು ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಸರಕಾರದ ಬಗ್ಗೆ ಜನರಿಗಿರುವ ಆಕ್ರೋಶ, ಅಸಮಾಧಾನವನ್ನು ಜನತೆಯ ಮುಂದಿಡಲು ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು,”ಎಂದು ಹೇಳಿದರು.

— ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಮಾಡಿದ ಪಾಪ, ದೋಷಗಳಿಗೆ ಅಹಿಂದ ಹೆಸರಿನಲ್ಲಿ ರಕ್ಷಣೆ ಪಡೆಯಲು ಮುಂದಾಗಿದ್ದಾರೆ. ರಾಜ್ಯದ ಅಹಿಂದ ಜನರು ತೃಪ್ತಿಯಿಂದ ಇದ್ದಾರೆಯೇ ಎಂದು ಮುಖ್ಯಮಂತ್ರಿ ಹೇಳಲಿ. ದಲಿತ ವಿದ್ಯಾರ್ಥಿಗಳಿಗೆ ನೀಡಬೇಕಾದ ಚೊಂಬು-ದಿಂಬು ಖರೀದಿಯಲ್ಲಿ ದುಡ್ಡು ಹೊಡೆದುಕೊಂಡಿದ್ದು ಅಹಿಂದ ಪರವೇ? -ಎಚ್.ಡಿ. ಕುಮಾರಸ್ವಾಮಿ,ಜೆಡಿಎಸ್ ರಾಜ್ಯಾಧ್ಯಕ್ಷ

Write A Comment