ಕರ್ನಾಟಕ

53ಕ್ಕೆ ಕಾಲಿಟ್ಟ ಶಿವಣ್ಣ; ಬಹಳ ಸಂಭ್ರಮದಿಂದ ಹುಟ್ಟುಹಬ್ಬ ಆಚರಣೆ

Pinterest LinkedIn Tumblr

shiv

ಬೆಂಗಳೂರು, ಜು.12: ಹ್ಯಾಟ್ರಿಕ್ ಹಿರೋ ಶಿವರಾಜ್‍ಕುಮಾರ್ ಅವರಿಗೆ ಇಂದು 53ನೇ ಹುಟ್ಟುಹಬ್ಬದ ಸಂಭ್ರಮ. ಕುಟುಂಬದ ಸದಸ್ಯರು, ಅಭಿಮಾನಿಗಳ ಸಮ್ಮುಖದಲ್ಲಿ ಶಿವರಾಜ್‍ಕುಮಾರ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.

ನಾಗವಾರದಲ್ಲಿರುವ ಅವರ ನಿವಾಸದ ಮುಂದೆ ರಾತ್ರಿಯಿಂದಲೇ ಅಭಿಮಾನಿಗಳ ಜಾತ್ರೆಯೇ ತುಂಬಿ ತುಳುಕುತ್ತಿತ್ತು. ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಷಯ ಕೋರಲು ಮುಗಿಬಿದ್ದರು. ಕೆಲ ಅಭಿಮಾನಿಗಳಂತೂ ರಾತ್ರಿಯೇ ಕೇಕ್ ಕತ್ತರಿಸಿ ಶುಭಕೋರಿದರು.

ವಿಜಯನಗರದ ಅಭಿಮಾನಿಗಳ ಸಂಘ ಮೂರು ಅಡಿ ಎತ್ತರದ ಕೇಕ್ ತಂದು ಶಿವಣ್ಣ ಸಮ್ಮುಖದಲ್ಲಿ ಕತ್ತರಿಸುವ ಮೂಲಕ ಶುಭಕೋರಿ ಇನ್ನೂ ನೂರ್ಕಾಲ ಬಾಳಿ ಎಂದು ಹಾರೈಸಿದರು.

ಪತ್ನಿ ಗೀತಾ, ಶಿವರಾಜ್ ಕುಮಾರ್ ಅವರಿಗೆ ಸಿಹಿ ತಿನ್ನಿಸಿ ಹುಟ್ಟುಹಬ್ಬದ ಶುಭ ಕೋರಿದರು. ಮಕ್ಕಳೂ ಸೇರಿದಂತೆ ಕುಟುಂಬದ ಸದಸ್ಯರು ಹುಟ್ಟುಹಬ್ಬ ಶುಭಾಷಯ ಹೇಳಿದರು.

ಚಿತ್ರನಟ ವಿಜಯ್ ರಾಘವೇಂದ್ರ ದಂಪತಿ, ನಟ ವಿನೋದ್ ಪ್ರಭಾಕರ್ ಸೇರಿದಂತೆ ಚಿತ್ರರಂಗದ ಅನೇಕರು ಶಿವಣ್ಣ ಅವರಿಗೆ ಶುಭ ಕೋರಿದರು.

ಅಭಿಮಾನಕ್ಕೆ ಋಣಿ

ಅಭಿಮಾನಿಗಳ ಅಭಿಮಾನಕ್ಕೆ ಸದಾ ಚಿರಋಣಿಯಾಗಿದ್ದೇನೆ, ಪ್ರತಿ ವರ್ಷ ಹುಟ್ಟುಹಬ್ಬ ಬಂದಾಗಲೆಲ್ಲಾ ಅಪ್ಪಾಜಿ ನೆನಪಾಗುತ್ತಾರೆ. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಸದಾ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿದ್ದಾರೆ ಎಂದು ಶಿವರಾಜ್‍ಕುಮಾರ್ ಹೇಳಿಕೊಂಡರು.

ಈ ವರ್ಷ ಬಗೆ ಬಗೆಯ ಚಿತ್ರ ಮಾಡುತ್ತಿದ್ದೇನೆ, ಆ ಖುಷಿ ಇದೆ. ಜತೆಗೆ ಕಿಲ್ಲಿಂಗ್ ವೀರಪ್ಪನ್ ಚಿತ್ರದ ಮೂಲಕ ಹಿಂದಿ ಚಿತ್ರ ರಂಗಕ್ಕೂ ಪಾದಾರ್ಪಣೆ ಮಾಡುತ್ತಿರುವುದು ಖುಷಿಕೊಟ್ಟಿದೆ.

ಈ ಚಿತ್ರವನ್ನು ಏಕಕಾಲಕ್ಕೆ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಐದು ಕ್ಯಾಮರಾ ಬಳಸಿ ಚಿತ್ರೀಕರಿಸುತ್ತಿದ್ದಾರೆ. ಅಲ್ಲದೆ. ಇಂದು ರಾತ್ರಿ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.

ಮುಂದಿನ ತಿಂಗಳು ಮಗಳ ಮದುವೆ ಇದೆ ಅದಕ್ಕಾಗಿ ಎಲ್ಲಾ ತಯಾರಿ ನಡೆಯುತ್ತಿದೆ. ಹುಟ್ಟು ಹಬ್ಬಕ್ಕಾಗಿ ಯಾವುದೇ ವಿಶೇಷವಾದ ಯೋಜನೆ ಇಲ್ಲ ಎಂದರು.

Write A Comment