ಕರ್ನಾಟಕ

ಅಮ್ಮನ ಕಣ್ಣೆದುರೇ ಮಳೆನೀರಲ್ಲಿ ಕೊಚ್ಚಿಹೋದ ಬಾಲಕಿ

Pinterest LinkedIn Tumblr

48025438.cmsವಂಡ್ಸೆ (ಕುಂದಾಪುರ): ಮರದ ಸೇತುವೆ ಮೇಲೆ ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಳೆ ನೀರಿನ ರಭಸಕ್ಕೆ ತಾಯಿಯ ಕಣ್ಣೆದುರಿನಲ್ಲಿಯೇ ಮಗು ನೀರಿನಲ್ಲಿ ಕೊಚ್ಚಿಹೋಗಿದೆ.

ಶೇಖರ ದೇವಾಡಿಗ ಮತ್ತು ಜಲಜ ದೇವಾಡಿಗ ದಂಪತಿಯ ಎರಡನೇ ಪುತ್ರಿ ವಿಸ್ಮಯ (7) ಕೊಚ್ಚಿಹೋದ ಬಾಲಕಿ. ಚಿತ್ತೂರು ಗ್ರಾಪಂ ವ್ಯಾಪ್ತಿಯ ಮಾರಣಕಟ್ಟೆ ಶ್ರೀಲಕ್ಷ್ಮೀವೆಂಕಟರಮಣ ದೇಗುಲ ಸಮೀಪದ ಸನ್ಯಾಸಿಬೆಟ್ಟುವಿಗೆ ಸಂಪರ್ಕ ಕಲ್ಪಿಸುವ ಮರದ ಕಾಲು ಸಂಕದ ಮೇಲೆ ಈ ಘಟನೆ ನಡೆದಿದೆ. ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಚಕ್ರಾ ನದಿ ತುಂಬಿ ನೀರು ಹರಿಯುತ್ತಿತ್ತು. ಮಾರಣಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಕಲಿಯುತ್ತಿದ್ದ ವಿಸ್ಮಯಳನ್ನು ತಾಯಿ ಶುಕ್ರವಾರ ಬೆಳಗ್ಗೆ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕುಂದಾಪುರ ಅಗ್ನಿಶಾಮಕ ದಳದವರು, ಗ್ರಾಮಸ್ಥರು, ಮುಳುಗುತಜ್ಞರು ಮಗುವಿಗಾಗಿ ಶೋಧ ನಡೆಸಿದ್ದಾರೆ. ನದಿಯ ರಭಸ ಜೋರಾಗಿದ್ದರಿಂದ ಕಾರ್ಯಾಚರಣೆ ವಿಳಂಬವಾಗಿದೆ.

ಮರದ ಸೇತುವೆ ಮೇಲೆ ನಿತ್ಯ ಸರ್ಕಸ್: ಸನ್ಯಾಸಿಬೆಟ್ಟು ಹಾಗೂ ಬಾಡಿಬೇರು ಕಡೆ ಸಂಪರ್ಕ ಕಲ್ಪಿಸುವ ಮರದ ಕಾಲುಸಂಕದ ಮೇಲೆ ಇಲ್ಲಿನ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ನಿತ್ಯ ಸರ್ಕಸ್ ಮಾಡಬೇಕಾಗಿದೆ. ಈ ಸೇತುವೆ ಬಿಟ್ಟರೆ ಕಿ.ಮೀ.ಗಟ್ಟಲೆ ಬಳಸಿ ಬರಬೇಕಾಗುತ್ತದೆ. ಸುತ್ತಿ ಬರುವಾಗಲೂ ಅನೇಕ ಹಳ್ಳಗಳನ್ನು ದಾಟಿಕೊಂಡೇ ಬರುವ ಸ್ಥಿತಿ ಇದೆ.

ಮನೆ ಮೇಲೆ ಗುಡ್ಡ ಕುಸಿದು ಮಗು ಸಾವು ಬಂಟ್ವಾಳ: ಫರಂಗಿಪೇಟೆ ಸಮೀಪದ ಮನೆ ಮೇಲೆ ಗುಡ್ಡ ಜರಿದು, ಮನೆಯಲ್ಲಿ ಮಲಗಿದ್ದ 6 ವರ್ಷದ ಮಗು ಮೃತಪಟ್ಟಿದೆ. ಪುದು ಗ್ರಾಮದ ಅಮ್ಮೆಮಾರ್ ಕುಂಜತ್‌ಕಳ ನಿವಾಸಿ ಮಹಮ್ಮದ್ ಹನೀಫ್ ಎಂಬವವರ ಪುತ್ರ ಮಹಮ್ಮದ್ ಅರ್ಶದ್ (6) ಮೃತ ಮಗು. ಗುರುವಾರ ರಾತ್ರಿ ಇಲ್ಲಿ ಭಾರಿ ಮಳೆ ಸುರಿದಿತ್ತು. ಸ್ಥಳೀಯರು ಮತ್ತು ಪೊಲೀಸರು ಮಗುವನ್ನು ಹೊರತೆಗೆದು ಮಂಗಳೂರು ಆಸ್ಪತ್ರೆಗೆ ಸಾಗಿಸಿದರು.

ಹಲವೆಡೆ ಮಳೆ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಮತ್ತಷ್ಟು ಚುರುಕಾಗಿದ್ದು ಇಳಿಮುಖವಾಗಿದ್ದ ಜಲಾಶಯಗಳ ನೀರಿನಮಟ್ಟ ಏರತೊಡಗಿದೆ. ಮಲೆನಾಡು ಪ್ರದೇಶದಲ್ಲಿ ಜೋರು ಮಳೆ ಮುಂದುವರಿದರೆ ಅರೆಮಲೆನಾಡು ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಆಗುಂಬೆಯಲ್ಲಿ ಅತಿಹೆಚ್ಚು 147 ಮಿ.ಮೀ. ಮಳೆಯಾಗಿದೆ. ಹಾಸನ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿದ್ದು, ಸಕಲೇಶಪುರದಲ್ಲಿ ಮಳೆ ಜೋರಾಗಿದೆ.

Write A Comment