ಕರ್ನಾಟಕ

ದರೋಡೆಯ ನಾಟಕವಾಡಿ ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದ ಹೋಟೆಲ್ ನೌಕರ !

Pinterest LinkedIn Tumblr

robber

ಬೆಂಗಳೂರು : ಘಟನೆ ನಡೆದು 40 ನಿಮಿಷಗಳಲ್ಲಿ ಪ್ರಕರಣ ಭೇದಿಸಿದ ಜೆ.ಪಿ.ನಗರ ಠಾಣೆ ಪೊಲೀಸರು ದರೋಡೆ ನಾಟಕದ ಸೂತ್ರಧಾರನನ್ನು ಬಂಧಿಸಿ 4.50 ಲಕ್ಷ ರೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ಬಿಟಿಎಂ ಲೇಔಟ್‌ನಲ್ಲಿರುವ ಲಡ್ಡೂಸ್ ಹೋಟೆಲ್ ನೌಕರ ಬಿಹಾರ ಮೂಲದ ಕೌಶಲ್ ಕಿಶೋರ್ (26) ಬಂಧಿತ ಆರೋಪಿ. ಈತ ಹೋಟೆಲ್ ಮಾಲೀಕರು ಬ್ಯಾಂಕಿಗೆ ಕಟ್ಟಲೆಂದು ಕೊಟ್ಟಿದ್ದ ಹಣವನ್ನು ಯಾರೋ ದರೋಡೆ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿ ಕೊನೆಗೆ ತಾನೇ ಸಿಕ್ಕಿಬಿದಿದ್ದಾನೆ.

ಲಡ್ಡೂಸ್ ಹೋಟೆಲ್‌ನ ಮಾಲೀಕರಾದ ಸುನಿಲ್‌ಕುಮಾರ್ ಅವರು ಬ್ಯಾಂಕಿನ ವ್ಯವಹಾರಕ್ಕೆ ನಿತ್ಯ ಕೌಶಲ್ ಕಿಶೋರ್‌ನನ್ನೇ ಕಳುಹಿಸುತ್ತಿದ್ದರು. ಅದರಂತೆ ಜೆ.ಪಿ.ನಗರದಲ್ಲಿರುವ ಆಕ್ಸಿಸ್ ಬ್ಯಾಂಕಿನ ತಮ್ಮ ಖಾತೆಗೆ ಹಾಕಲು ಸೋಮವಾರ ಮಧ್ಯಾಹ್ನದ ಸುಮಾರಿಗೆ ಈತನ ಕೈಗೆ 4.50 ಲಕ್ಷ ರೂ ನಗದನ್ನು ಕೊಟ್ಟು ಕಳುಹಿಸಿದ್ದರು. ಹಣದ ಜೊತೆಗೆ ಹೋದ ಈತ ಅರ್ಧಗಂಟೆಯಲ್ಲೇ ಮಾಲೀಕರಿಗೆ ಕರೆ ಮಾಡಿ ಬೈಕ್ ನಿಲ್ಲಿಸಿ ಕೆಳಗಿಳಿಯಬೇಕಾದರೆ ಯಾರೋ ಬಂದು ತನ್ನ ಕೈಯಿಂದ ಹಣದ ಬ್ಯಾಗ್ ಕಿತ್ತುಕೊಂಡು ಹೋದರು ಎಂದು ತಿಳಿಸಿದ್ದ. ಆನಂತರ ಮಾಲೀಕರ ಸೂಚನೆಯಂತೆ ಜೆ.ಪಿ.ನಗರ ಠಾಣೆಗೆ ತೆರಳಿ ದೂರು ದಾಖಲಿಸಿದ್ದ.

ದೂರು ದಾಖಲಿಸಿಕೊಂಡ ಜೆ.ಪಿ.ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರೆ ಕೌಶಲ್ ಕಿಶೋರ್ ಹೇಳುವುದಕ್ಕೂ , ಸ್ಥಳದಲ್ಲಿ ಸಿಕ್ಕ ಮಾಹಿತಿಗಳಿಗೂ ವ್ಯತ್ಯಾಸ ಕಂಡು ಬಂದಿದೆ. ಆನಂತರ ಠಾಣೆಯಲ್ಲಿ ಕೌಶಲ್‌ನನ್ನೇ ಹೆಚ್ಚೆಚ್ಚು ಪ್ರಶ್ನಿಸುತ್ತಾ ಹೋದಾಗ ಆತನ ಗೊಂದಲಕಾರಿಯಾದ ಉತ್ತರಗಳೇ ಪೊಲೀಸರಿಗೆ ಆತನ ಮೇಲೆಯೇ ಅನುಮಾನ ಪಡುವಂತೆ ಮಾಡಿವೆ.

ದರೋಡೆ ನಾಟಕ ಬಯಲು

ಪೊಲೀಸರು ತಮ್ಮ ಅನುಮಾನದಂತೆ ವಿಚಾರಣೆ ತೀವ್ರಗೊಳಿಸಿದಾಗ ದರೋಡೆ ನಾಟಕ ಬಯಲಾಗಿದೆ. ತಾನೇ ಹಣವನ್ನು ಗೆಳೆಯನೊಬ್ಬನ ಮನೆಯಲ್ಲಿ ಬಚ್ಚಿಟ್ಟಿದ್ದ ಕೌಶಲ್, ದರೋಡೆಯ ಕತೆ ಹೆಣೆದಿದ್ದ. ಹೋಟೆಲ್ ಮಾಲೀಕ ಸುನಿಲ್‌ಕುಮಾರ್ ಅವರಿಂದ ಹಣ ತೆಗೆದುಕೊಂಡು ಹೊರಟ ಆತ ಅದೇ ಹೋಟೆಲ್‌ನಲ್ಲಿ ಕೆಲಸ ಮಾಡುವ ಬಿಹಾರ ಮೂಲದವನೇ ಆದ ಲಾಲೂ ಎಂಬಾತನ ಕೈಗೆ ಹಣ ಕೊಟ್ಟು ಬಚ್ಚಿಡುವಂತೆ ಹೇಳಿ ಆನಂತರ ಠಾಣೆಗೆ ಬಂದು ದೂರು ದಾಖಲಿಸಿದ್ದ.

ಸತ್ಯಸಂಗತಿ ಹೊರ ಬಂದ ನಂತರ ಕೌಶಲ್‌ನನ್ನು ಬಂಧಿಸಿದ ಪೊಲೀಸರು ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಪಿ.ನಗರ 8ನೇ ಹಂತದಲ್ಲಿರುವ ಲಾಲೂ ಮನೆಯಿಂದ 4.50 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ. ಇಡೀ ಪ್ರಕರಣವನ್ನು 40 ನಿಮಿಷಗಳಲ್ಲಿ ಭೇದಿಸಿದ ಜೆ.ಪಿ.ನಗರ ಠಾಣಾ ಪೊಲೀಸರ ಕಾರ್ಯಕ್ಷಮತೆಯನ್ನು ಡಿಸಿಪಿ ಲೋಕೇಶ್ ಕುಮಾರ್ ಶ್ಲಾಘಿಸಿದ್ದಾರೆ.

Write A Comment